ADVERTISEMENT

ರಸ್ತೆ ನಿಂತಿದ್ದ ಮಹಿಳೆಗೆ ಕಾರು ಡಿಕ್ಕಿ; ಸಾವು, ಮಗುವಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2024, 15:47 IST
Last Updated 4 ಡಿಸೆಂಬರ್ 2024, 15:47 IST
ದೊಡ್ಡಬಳ್ಳಾಪುರ ತಾಲ್ಲೂಕಿನ ಗುಂಡಮಗೆರೆ ಕ್ರಾಸ್‌ನಲ್ಲಿ ಬುಧವಾರ ನಡೆದ ಅಪಘಾತದಲ್ಲಿ ನಜ್ಜುಗುಜ್ಜಾಗಿರುವ ಬೈಕ್‌
ದೊಡ್ಡಬಳ್ಳಾಪುರ ತಾಲ್ಲೂಕಿನ ಗುಂಡಮಗೆರೆ ಕ್ರಾಸ್‌ನಲ್ಲಿ ಬುಧವಾರ ನಡೆದ ಅಪಘಾತದಲ್ಲಿ ನಜ್ಜುಗುಜ್ಜಾಗಿರುವ ಬೈಕ್‌   

ದೊಡ್ಡಬಳ್ಳಾಪುರ: ನಗರದ ಚಿಕ್ಕಬಳ್ಳಾಪುರ ರಸ್ತೆಯ ಜಯನಗರ ಸಮೀಪ ನಿಂತಿದ್ದ ಮಹಿಳೆಗೆ ಕಾರು ಡಿಕ್ಕಿ ಹೊಡೆದು ಮಹಿಳೆ ಮೃತಪಟ್ಟಿದ್ದಾರೆ.

ಪಾಲನಜೋಗನಹಳ್ಳಿ ನಿವಾಸಿ ಭಾನುಪ್ರೀಯಾ(25) ಮೃತ ಮಹಿಳೆ.

ಮೃತ ಭಾನುಪ್ರೀಯಾ ಬುಧವಾರ ಜಯನಗರ ಸಮೀಪದ ಖಾಸಗಿ ಶಾಲೆಗೆ ದೊಡ್ಡ ‌ಮಗನ ದಾಖಲೆ ಪರಿಶೀಲನೆಗೆ ಭೇಟಿ ನೀಡಿ, ತನ್ನ ನಾಲ್ಕು  ವರ್ಷದ ಮಗು ಮನೋಜ್ ಜೊತೆ ಮನೆಗೆ ತೆರಳುವ ವೇಳೆ ಕಾರು ಡಿಕ್ಕಿ ಹೊಡೆದಿದೆ. ಚಾಲಕ ಕಾರಿನೊಂದಿಗೆ ಪರಾರಿಯಾಗಿದ್ದಾನೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ADVERTISEMENT

ಅಪಘಾತದಲ್ಲಿ ತಾಯಿ ಮತ್ತು ಮಗು ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆ ಫಲಕಾರಿಯಾಗದೆ ತಾಯಿ ಮೃತಪಟ್ಟಿದ್ದಾರೆ. ಗಾಯಗೊಂಡಿರುವ ಮಗುವನ್ನು ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಗ್ರಾಮಾಂತರ ಠಾಣೆ ಪೊಲೀಸರು ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಸುತ್ತಮುತ್ತಲಿನ ಸಿಸಿಟಿವಿಗಳ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೈಕ್‌, ಲಾರಿ ನಡುವೆ ಡಿಕ್ಕಿ: ಸವಾರ ಸಾವು

ದೊಡ್ಡಬಳ್ಳಾಪುರ: ಗೌರಿಬಿದನೂರು-ದೊಡ್ಡಬಳ್ಳಾಪುರ ರಾಜ್ಯ ಹೆದ್ದಾರಿಯ ಗುಂಡಮಗೆರೆ ಕ್ರಾಸ್‌ನಲ್ಲಿ ಬುಧವಾರ ಬೆಳಗ್ಗೆ ಬೈಕ್‌ ಹಾಗೂ ಸಿಮೆಂಟ್‌ ಲಾರಿ ನಡುವೆ ನಡೆದ ಅಪಘಾತದಲ್ಲಿ ಬೈಕ್‌ ಸವಾರ ಮೃತಪಟ್ಟಿದ್ದಾರೆ.

ತರಹುಣಸೆ ಗ್ರಾಮದ ನಿವಾಸಿ ಸಂತೋಷ್‌(25) ಮೃತ ಸವಾರ. ಗಂಭೀರವಾಗಿ ಗಾಯಗೊಂಡಿದ್ದ ಹಿಂಬದಿ ಸವಾರನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.