ADVERTISEMENT

ಆಧಾರ್ ಕಾರ್ಡ್ ಅವ್ಯವಸ್ಥೆ: ಪರದಾಟ

ತಾಂತ್ರಿಕ ತೊಂದರೆ, ಸರ್ವರ್‌, ಸಿಬ್ಬಂದಿ ಕೊರತೆ ಕಾರಣ

​ಪ್ರಜಾವಾಣಿ ವಾರ್ತೆ
Published 8 ಜುಲೈ 2019, 13:28 IST
Last Updated 8 ಜುಲೈ 2019, 13:28 IST
ದೇವನಹಳ್ಳಿಯ ಫೆಡರಲ್ ಬ್ಯಾಂಕ್ ಆವರಣದಲ್ಲಿ ಆಧಾರ್ ಕಾರ್ಡ್‌ಗಾಗಿ ಸಾಲುಗಟ್ಟಿರುವ ಜನರು
ದೇವನಹಳ್ಳಿಯ ಫೆಡರಲ್ ಬ್ಯಾಂಕ್ ಆವರಣದಲ್ಲಿ ಆಧಾರ್ ಕಾರ್ಡ್‌ಗಾಗಿ ಸಾಲುಗಟ್ಟಿರುವ ಜನರು   

ದೇವನಹಳ್ಳಿ: ತಾಲ್ಲೂಕಿನಲ್ಲಿ ಹದಗೆಟ್ಟ ಆಧಾರ್ ಕಾರ್ಡ್ ನೀಡುವ ಅವ್ಯವಸ್ಥೆಯಿಂದಾಗಿ ಆಧಾರ್ ಕಾರ್ಡ್ ಪಡೆಯಲು ಬರುವ ನೂರಾರು ಸಾರ್ವಜನಿಕರು ದಿನನಿತ್ಯ ಪರದಾಡುವ ದುಸ್ಥಿತಿ ಎದುರಾಗಿದೆ ಎಂದು ಸಾರ್ವಜನಿಕರು ದೂರಿದ್ದಾರೆ.

ಗ್ರಾಮ ಪಂಚಾಯಿತಿಗಳ ಕೇಂದ್ರ ಕಚೇರಿಯಲ್ಲಿ ಎರಡು ವರ್ಷಗಳ ಹಿಂದೆ ಅಟಲ್ ಜೀ ನೂರು ಸೇವೆಗಳ ಕೇಂದ್ರ ಆರಂಭಗೊಂಡು ಪ್ರತಿಯೊಂದು ದಾಖಲೆ ಸ್ಥಳೀಯವಾಗಿ ನೀಡುವ ಅವಕಾಶ ಕಲ್ಪಿಸಲಾಗಿತ್ತು. ಪ್ರಸ್ತುತ ಆಧಾರ್ ಕಾರ್ಡ್ ಸೇರಿದಂತೆ ಯಾವುದೇ ದಾಖಲೆಗಳು ಸಕಾಲದಲ್ಲಿ ಸಿಗುತ್ತಿತ್ತು. ಕಂಪ್ಯೂಟರ್ ಗಳ ತಾಂತ್ರಿಕ ತೊಂದರೆ, ಸಿಬ್ಬಂದಿಗಳ ಕೊರತೆ, ಸರ್ವರ್ ಮತ್ತು ವಿದ್ಯುತ್ ಅಡಚಣೆಯಿಂದಾಗಿ ಸ್ಥಳೀಯರು ಜಿಲ್ಲಾಡಳಿತ ಭವನ ಮತ್ತು ತಾಲ್ಲೂಕು ಕೇಂದ್ರದಲ್ಲಿರುವ ರಾಷ್ಟ್ರೀಕೃತ ಬ್ಯಾಂಕುಗಳ ಮುಂದೆ ಆಧಾರ್ ಕಾರ್ಡ್ ಪಡೆಯಲು ಹರಸಾಹಸ ಪಡಬೇಕಾದ ಅನಿವಾರ್ಯತೆ ಇದೆ ಎಂಬುದು ಆಧಾರ್ ಪಡೆಯಲು ಬಂದಿರುವ ಅನೇಕರ ಅಳಲು.

ರಾಜ್ಯ ಸರ್ಕಾರ ಕಳೆದ ಎರಡು ವರ್ಷಗಳ ಹಿಂದೆ ತಾಲ್ಲೂಕು ಆಡಳಿತ ಕೇಂದ್ರದಲ್ಲಿ ಪಡಸಾಲೆ ಕೇಂದ್ರ ಆರಂಭಿಸಿ ಪ್ರತಿಯೊಂದು ದಾಖಲೆ ನೀಡಲು ಮುಂದಾಗಿತ್ತು. ಖಾಸಗಿ ಕಂಪ್ಯೂಟರ್ ಕೇಂದ್ರಗಳಲ್ಲಿಯೂ ಆಧಾರ್ ಕಾರ್ಡ್ ವಿತರಣೆ ಮಾಡುವ ಅವಕಾಶ ನೀಡಿತ್ತು. ಪ್ರತಿ ಆಧಾರ್ ಕಾರ್ಡ್‌ಗೆ ಖಾಸಗಿಯವರು ₹100 ನಿಗದಿ ಮಾಡಿದ್ದರು, ಪ್ರಸ್ತುತ ಆಧಾರ್ ಕೇಂದ್ರ ಆರಂಭಿಸಿರುವ ಬ್ಯಾಂಕುಗಳಲ್ಲಿ ಆಧಾರ್ ಕಾರ್ಡ್ ಪಡೆಯಲು ಒಂದು ಕಾರ್ಡ್ ಗೆ ಕನಿಷ್ಠ ₹300 ನೀಡಿದರೆ ಮಾತ್ರ ಒಂದು ದಿನದಲ್ಲಿ ಆಧಾರ್ ಕಾರ್ಡ್ ಕೊಡುತ್ತಾರೆ ಎಂದು ದಲಿತ ಸಂಘರ್ಷ ಸೇನೆ ( ಭೀಮಶಕ್ತಿ) ತಾಲ್ಲೂಕು ಘಟಕದ ಅಧ್ಯಕ್ಷ ಕಾರಹಳ್ಳಿ ಕೆಂಪಣ್ಣ ಆರೋಪಿಸಿದರು.

ADVERTISEMENT

ಹಣ ಕೊಡದಿದ್ದರೆ 15 ರಿಂದ 20 ದಿನಗಳವರೆಗೆ ದಿನಾಂಕ ನಮೂದಿಸಿ ಟೋಕನ್ ಕೊಟ್ಟು ಕಳುಹಿಸುತ್ತಾರೆ. ಇದೊಂದು ಗ್ರಾಹಕರಿಂದ ಸುಲಿಗೆ ಮಾಡುವ ದಂಧೆಯಾಗಿದೆ ಎಂದು ಅವರು ಟೀಕಿಸಿದರು.

ಬಿ.ಪಿ.ಎಲ್. ಕಾರ್ಡ್ ಗೆ ಪಡಿತರ ಧಾನ್ಯ ಪಡೆಯಲು ಆಧಾರ್ ಕಾರ್ಡ್ ನೀಡಿ ಕುಟುಂಬದ ಸದಸ್ಯರು ಹೆಬ್ಬಟ್ಟು ನೀಡಬೇಕು, ಖರೀದಿಸಿರುವ ಮೊಬೈಲ್ ಸಂಖ್ಯೆಗೆ ಆಧಾರ್ ಕಾರ್ಡ್ ಸಂಖ್ಯೆ ಜೋಡಣೆಯಾಗಬೇಕು, ಈ ಹಿಂದೆ ಪಡೆದಿರುವ ಆಧಾರ್ ಕಾರ್ಡ್ ನಲ್ಲಿರುವ ಅನೇಕ ದೋಷಗಳನ್ನು ತಿದ್ದುಪಡಿ ಮಾಡಿಸಬೇಕು, ಪ್ರತಿಯೊಂದಕ್ಕೂ ಆಧಾರ್ ಕಾರ್ಡ್ ಕಡ್ಡಾಯ ಮಾಡಿರುವುದರಿಂದ ಜನರು ಆಧಾರ್ ಪಡೆಯಲು ತಾ ಮುಂದು ನಾ ಮುಂದು ಎಂದು ದುಂಬಾಲು ಬಿದ್ದಿದ್ದಾರೆ ಎಂದರು.

ಆಧಾರ್ ಕಾರ್ಡ್ ತಿದ್ದಪಡಿಗಾಗಿ ಜಿಲ್ಲಾಡಳಿತ ಭವನಕ್ಕೆ ಬಂದಿದ್ದ ಸೂಲಿಬೆಯ ಕುಟುಂಬವೊಂದರ ಐದು ಜನರು ಕಳೆದ ತಿಂಗಳು ವಿಶ್ವನಾಥಪುರ ಗ್ರಾಮದ ಬಳಿ ಅಪಘಾತದಲ್ಲಿ ಸಾವನ್ನಪ್ಪಿದ್ದರು, ತಾಲ್ಲೂಕು ಮತ್ತು ಜಿಲ್ಲಾಡಳಿತ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದೆ ಸಂಪೂರ್ಣ ವಿಫಲವಾಗಿದೆ ಎಂದು ದೂರಲಾಗಿದೆ.

ಸಮಸ್ಯೆ ತ್ವರಿತವಾಗಿ ಬಗೆಹರಿಸದಿದ್ದರೆ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಎಂದು ಪ್ರಜಾ ವಿಮೋಚನಾ ಬಹುಜನ ಸಮಿತಿ ರಾಜ್ಯ ಸಂಸ್ಥಾಪಕ ಅಧ್ಯಕ್ಷ ಬಿಜ್ಜವಾರ ನಾಗರಾಜ್ ಎಚ್ಚರಿಸಿದರು.

ರಾಮಪ್ಪ ಮಾತನಾಡಿ, ‘ನನಗೆ ಜು. 2ರಂದು ಟೋಕನ್ ನೀಡಿ ಜು. 8 ರಂದು ಬರುವಂತೆ ತಿಳಿಸಿದ್ದರು. ಬೆಳಿಗ್ಗೆ 6ಕ್ಕೆ ಬಂದು ಕುಳಿತಿದ್ದೇನೆ. ಸಾಲಿನಲ್ಲಿ ನಿಲ್ಲುವುದಕ್ಕೆ ಆಗುತ್ತಿಲ್ಲ, ಸಾಲು ನೋಡಿದರೆ ಬೆಳೆಯುತ್ತಲೇ ಇದೆ ಇವತ್ತು ಆಧಾರ್ ಕಾರ್ಡ್ ಸಿಗುತ್ತೆ ಎನ್ನುವ ನಂಬಿಕೆ ಇಲ್ಲ’ ಎಂದು ಹೇಳಿದರು.

ಸಮಸ್ಯೆ ಬಗ್ಗೆ ಬ್ಯಾಂಕ್‌ ಆಧಿಕಾರಿಗಳು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು, ಕಂದಾಯ ಅಧಿಕಾರಿಗಳು ಮೊಬೈಲ್ ಕರೆ ಸ್ವೀಕರಿಸಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.