ADVERTISEMENT

ತ್ವರಿತ ಪರಿಹಾರಕ್ಕೆ ಕ್ರಮ: ಜಿಲ್ಲಾಧಿಕಾರಿ

ಜಿಲ್ಲಾ ಮಟ್ಟದ ಜಾಗೃತಿ, ಉಸ್ತುವಾರಿ ಸಮಿತಿ ಸಭೆಯಲ್ಲಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2020, 9:00 IST
Last Updated 21 ಆಗಸ್ಟ್ 2020, 9:00 IST
ಉಸ್ತುವಾರಿ ಸಮಿತಿ ತ್ರೈಮಾಸಿಕ ಸಭೆಯಲ್ಲಿ ಪಿ.ಎನ್.ರವೀಂದ್ರ ಹಾಗೂ ಅಧಿಕಾರಿಗಳು ಇದ್ದರು
ಉಸ್ತುವಾರಿ ಸಮಿತಿ ತ್ರೈಮಾಸಿಕ ಸಭೆಯಲ್ಲಿ ಪಿ.ಎನ್.ರವೀಂದ್ರ ಹಾಗೂ ಅಧಿಕಾರಿಗಳು ಇದ್ದರು   

ದೇವನಹಳ್ಳಿ: ದೌರ್ಜನ್ಯಕ್ಕೊಳಗಾದವರಿಗೆ ತ್ವರಿತ ಪರಿಹಾರದ ಜೊತೆಗೆ ಗೌರವಯುತವಾಗಿ ಜೀವನ ನಡೆಸಲು ಅಧಿಕಾರಿಗಳು ಕ್ರಮವಹಿಸಬೇಕು ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಹೇಳಿದರು.

ಇಲ್ಲಿನ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಯವರ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯಲ್ಲಿ 2020ನೇ ಸಾಲಿನ ತ್ರೈಮಾಸಿಕ ಜಿಲ್ಲಾಮಟ್ಟದ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಪರಿಶಿಷ್ಟ ಜನಾಂಗದವರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ತಪ್ಪಿತಸ್ಥರಿಗೆ ಕಡ್ಡಾಯವಾಗಿ ಶಿಕ್ಷೆಯಾಗಬೇಕು. ಇದಕ್ಕೆ ಪೂರಕ ಕ್ರಮವನ್ನು ಅಧಿಕಾರಿಗಳು ವಿಳಂಬ ಮಾಡದೆ ಕೈಗೊಳ್ಳಬೇಕು’ ಎಂದರು.

ADVERTISEMENT

‘ಸರ್ಕಾರಿ ಜಮೀನು ಲಭ್ಯವಿಲ್ಲದ ಗ್ರಾಮಗಳಲ್ಲಿ ಖಾಸಗಿ ಜಮೀನುಗಳನ್ನು ಖರೀದಿಸಿ ಸ್ಮಶಾನಕ್ಕೆ ಕಾಯ್ದಿರಿಸಲಾಗಿದೆ. ಒತ್ತುವರಿ ಮಾಡಿಕೊಳ್ಳಲಾಗಿರುವ ಸ್ಮಶಾನ ಜಾಗವನ್ನು ತೆರವುಗೊಳಿಸಬೇಕು. ಸ್ಮಶಾನ ಭೂಮಿ ಲಭ್ಯವಿಲ್ಲದ ಜಿಲ್ಲೆಯ ನಾಲ್ಕು ತಾಲ್ಲೂಕುಗಳ ಪೈಕಿ ಈಗಾಗಲೇ ಹಲವು ಕಡೆ ಅಂತ್ಯಸಂಸ್ಕಾರಕ್ಕಾಗಿ ಸ್ಮಶಾನ ಭೂಮಿ ಕಲ್ಪಿಸಿಕೊಡಲಾಗಿದೆ’ ಎಂದು ಹೇಳಿದರು.

ಇದೇ ವೇಳೆ ಜಿಲ್ಲೆಯಲ್ಲಿ ನಡೆದಿರುವ 32 ದೌರ್ಜನ್ಯ ಪ್ರಕರಣಗಳ ಪೈಕಿ, 28 ಪ್ರಕರಣಗಳಿಗೆ 31,93,626 ರೂ ಪರಿಹಾರ ಧನವನ್ನು ನೀಡಲಾಗಿದೆ ಎಂದು ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಹನುಮಂತರಾಯಪ್ಪ ಸಭೆಗೆ ಮಾಹಿತಿ ನೀಡಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಡಾ. ಜಗದೀಶ್.ಕೆ.ನಾಯಕ್, ಉಪವಿಭಾಗಾಧಿಕಾರಿ ಅರುಳ್ ಕುಮಾರ್, ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿಯ ಸದಸ್ಯರು ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.