ವಿಜಯಪುರ: ಕಲಾವಿದರನ್ನು ಗೌರವದಿಂದ ಕಂಡು ಅವರ ಸ್ವಾಭಿಮಾನಕ್ಕೆ ಧಕ್ಕೆ ಬಾರದ ರೀತಿಯಲ್ಲಿ ಸುಭದ್ರ ಜೀವನ ರೂಪಿಸಿಕೊಳ್ಳುವ ಯೋಜನೆಯನ್ನು ಸರ್ಕಾರ ಜಾರಿಗೊಳಿಸಬೇಕು ಎಂದು ಕನ್ನಡ ಕಲಾವಿದರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಮುದುಗುರ್ಕಿ ಮೋಹನ್ ಬಾಬು ಹೇಳಿದರು.
ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಮಂಗಳವಾರ ಕನ್ನಡ ಕಲಾವಿದರ ಸಂಘದಿಂದ ಆಯೋಜಿಸಿದ್ದ 73ನೇ ಮಾಸದ ಕನ್ನಡ ದೀಪ ಕಾರ್ಯಕ್ರಮದಲ್ಲಿ ಕಲಾವಿದರನ್ನು ಅಭಿನಂದಿಸಿ ಅವರು ಮಾತನಾಡಿದರು.
ಸಾಹಿತ್ಯ, ಕಲೆ, ಸಂಸ್ಕೃತಿ ಉಳಿದು ಬೆಳೆಯಬೇಕಾದರೆ ಜನರ ಬೆಂಬಲ ಹಾಗೂ ಪ್ರೋತ್ಸಾಹ ಅಗತ್ಯ. ಇತ್ತೀಚೆಗೆ ಟಿ.ವಿ, ಮೊಬೈಲ್ ಹಾವಳಿ ಹೆಚ್ಚಾಗಿ ಲಲಿತಕಲೆಗಳು ಅವಸಾನದ ಅಂಚಿನಲ್ಲಿವೆ. ಬದಲಾಗುತ್ತಿರುವ ಜೀವನಶೈಲಿಯಿಂದಾಗಿ ಸ್ಥಳೀಯ ಕಲಾವಿದರೂ ತೆರೆಮರೆಗೆ ಸರಿಯುತ್ತಿದ್ದಾರೆ ಎಂದು ವಿಷಾದಿಸಿದರು.
ಸ್ಥಳೀಯ ಕಲಾವಿದರನ್ನು ಗುರುತಿಸಿ ಅವರಲ್ಲಿರುವ ಕಲಾ ಪ್ರತಿಭೆಯನ್ನು ಮುಂದಿನ ಪೀಳಿಗೆಗೆ ಧಾರೆ ಎರೆಯಲು ಅವಕಾಶ ಕಲ್ಪಿಸಬೇಕು. ಇಂತಹ ಹೊತ್ತಿನಲ್ಲಿ ಸಂಘಟನೆಗಳು ಹೆಚ್ಚಿನ ಕೆಲಸ ಮಾಡಬೇಕಿದೆ ಎಂದು ಹೇಳಿದರು.
ಮುಖಂಡ ಬಿ.ಕೆ. ಶಿವಪ್ಪ ಮಾತನಾಡಿ, ಹವ್ಯಾಸಿ ರಂಗಭೂಮಿಯು ನೂತನ ರಂಗ ಪ್ರಯೋಗಗಳ ಮೂಲಕ ತನ್ನ ನೆಲೆ ಉಳಿಸಿಕೊಳ್ಳಲು ಹೋರಾಡುತ್ತಿದೆ. ಗ್ರಾಮೀಣ ಭಾಗದಲ್ಲಿ ರಂಗಭೂಮಿ ನಶಿಸುತ್ತಿದೆ. ಪೌರಾಣಿಕ ನಾಟಕಗಳ ತವರಾಗಿದ್ದ ಗ್ರಾಮೀಣ ಭಾಗಗಳಲ್ಲಿ ಇಂದು ರಂಗ ಚಟುವಟಿಕೆಗಳೇ ನಿಂತುಹೋಗಿವೆ ಎಂದರು.
ರಂಗಕಲೆಯು ನಶಿಸಬಾರದು. ಅದನ್ನು ಉಳಿಸಿ ಬೆಳೆಸುವಂತಹ ಕೆಲಸ ಮಾಡಿದಾಗ ಮುಂದಿನ ಪೀಳಿಗೆಗೆ ಅದರ ಮಹತ್ವ ತಿಳಿಯಲಿದೆ. ಕೊರೊನಾ ಸಂಕಷ್ಟದ ಸಮಯದಲ್ಲಿ ಬಹುತೇಕ ಎಲ್ಲರಿಗೂ ಸೌಲಭ್ಯಗಳು ಸಿಕ್ಕಿವೆ. ರಂಗ ಕಲಾವಿದರಿಗೆ ಸಿಗಲಿಲ್ಲ. ಅವರಿಗಾಗಿ ಸರ್ಕಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡಬೇಕು ಎಂದು ಒತ್ತಾಯಿಸಿದರು.
ಹಿರಿಯ ಸಾಹಿತಿ ವಿ.ಎನ್. ರಮೇಶ್ ಮಾತನಾಡಿ, ಕಲಾವಿದರ ಬದುಕು ಸಂಕಷ್ಟದಲ್ಲಿದೆ. ಇದನ್ನು ಸರ್ಕಾರ ಅರಿಯಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಸದೃಢವಾಗಬೇಕು. ಕನ್ನಡ ಭಾಷೆ, ಸಾಹಿತ್ಯ, ಸಂಸ್ಕೃತಿ ಎಲ್ಲೆಡೆ ಹರಡುವಂತೆ ಮಾಡಲು ಒಂದು ಇಲಾಖೆ ಕೆಲಸ ಮಾಡುತ್ತಿದ್ದರೂ ಕನ್ನಡ ಭಾಷೆ ಮತ್ತು ಸಾಹಿತ್ಯ ಲೋಕದ ಉಳಿವಿಗಾಗಿ ನಾವು ಹೋರಾಟ ಮಾಡಬೇಕಾಗಿ ಬಂದಿರುವುದು ದುರದೃಷ್ಟಕರ ಎಂದು ಹೇಳಿದರು.
ಗ್ರಾಮೀಣ ಪ್ರದೇಶದ ಯುವ ಕಲಾವಿದರನ್ನು ಗುರುತಿಸಿ ಅವರಲ್ಲಿನ ಅಗಾಧ ಪ್ರಮಾಣದ ಕಲೆಯನ್ನು ಹೊರತರುವ ಕಾರ್ಯವಾಗಬೇಕು ಎಂದರು.
ಕಲಾವಿದ ಮುನಿಶಾಮಿಗೌಡ ಅವರನ್ನು ಸನ್ಮಾನಿಸಲಾಯಿತು. ಸಂಗೀತ ನಿರ್ದೇಶಕ ಎಂ.ವಿ. ನಾಯ್ಡು, ಮಹಾತ್ಮಾಂಜನೇಯ, ನರಸಿಂಹಪ್ಪ ತಂಡದಿಂದ ರಂಗಗೀತೆಗಳ ಗಾಯನ ಕಾರ್ಯಕ್ರಮ ನಡೆಯಿತು. ಕಲಾವಿದರಾದ ಗೋವಿಂದರಾಜು, ಸುಬ್ರಮಣಿ, ನಾಗಯ್ಯ, ಮುರಳಿ, ಜೆ.ಆರ್. ಮುನಿವೀರಣ್ಣ, ವಿಶ್ವನಾಥ್, ರಬ್ಬನಹಳ್ಳಿ ಕೆಂಪಣ್ಣ, ಟಿ. ಗೋವಿಂದರಾಜು, ಮುದುಗುರ್ಕಿ ಮಹೇಶ್, ರಾಮಣ್ಣಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.