ADVERTISEMENT

ವಕೀಲರ ಮೇಲೆ ಹಲ್ಲೆ, ಎಸ್‌ಐ ಅಮಾನತಿಗೆ ಒತ್ತಾಯಿಸಿ ಪ್ರತಿಭಟನೆ 

ದುರ್ವರ್ತನೆಗೆ ಶಾಶ್ವತ ಕಡಿವಾಣಕ್ಕೆ ಕಾರ್ಯಾಂಗದ ಮೂಲಕ ಸರ್ಕಾರ ಕ್ರಮ ಕೈಗೊಳ್ಳಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2018, 13:17 IST
Last Updated 26 ಸೆಪ್ಟೆಂಬರ್ 2018, 13:17 IST
ನ್ಯಾಯಾಲಯದ ಆವರಣದಲ್ಲಿ ವಕೀಲರು ಪ್ರತಿಭಟನೆ ನಡೆಸಿದರು
ನ್ಯಾಯಾಲಯದ ಆವರಣದಲ್ಲಿ ವಕೀಲರು ಪ್ರತಿಭಟನೆ ನಡೆಸಿದರು   

ದೇವನಹಳ್ಳಿ: ದೂರು ನೀಡಿದ ವಕೀಲರೊಬ್ಬರನ್ನು ಠಾಣೆಗೆ ಕರೆಯಿಸಿ ಹಲ್ಲೆ ಮಾಡಿರುವ ಸಬ್‌ ಇನ್‌ಸ್ಪೆಕ್ಟರ್‌ ಅವರನ್ನು ಕೂಡಲೇ ಅಮಾನತು ಮಾಡುವಂತೆ ಒತ್ತಾಯಿಸಿ ವಕೀಲರು ದೇವನಹಳ್ಳಿ ನ್ಯಾಯಾಲಯದ ಆವರಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು.

ತಾಲ್ಲೂಕು ವಕೀಲರ ಸಂಘ ಪ್ರಧಾನ ಕಾರ್ಯದರ್ಶಿ ಡಿ.ಎಸ್ ಪ್ರಭಾಕರ್ ಮಾತನಾಡಿ, ಸಿವಿಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲ ಸಿ.ವಿ.ರಾಮಚಂದ್ರ ಅವರು ಚನ್ನರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕಣ ದಾಖಲಿಸಿದ್ದರು. ಸೆ.23 ರಂದು ಪಿ.ಎಸ್.ಐ ನಂದೀಶ್ ಠಾಣೆಗೆ ಬರುವಂತೆ ಸೂಚಿಸಿದ್ದರು. ಅಂದು ಮಧ್ಯಾಹ್ನ ಠಾಣೆಗೆ ಹೋದ ಸಂದರ್ಭದಲ್ಲಿ ವಕೀಲ ಸಿ.ವಿ. ರಾಮಚಂದ್ರನ ಎದುರುದಾರರಾದ ರಾಮಾಂಜಿನಪ್ಪ ಮತ್ತು ಆತನ ಸ್ನೇಹಿತ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದರು.

ವಕೀಲ ಸಂಘ ತಾಲ್ಲೂಕು ಘಟಕ ಅಧ್ಯಕ್ಷ ಜಿ.ಎಂ.ಭೈರೇಗೌಡ ಮಾತನಾಡಿ, ರಾಜ್ಯದಲ್ಲಿ ತಿಂಗಳಿಗೊಮ್ಮೆ ವಕೀಲರ ಮೇಲೆ ಪೊಲೀಸರಿಂದ ಹಲ್ಲೆ, ಕಿರುಕುಳ, ದೌರ್ಜನ್ಯ ನಡೆಯುತ್ತಿದೆ. ಪೊಲೀಸರು ನ್ಯಾಯಾಲಯಕ್ಕಿಂತ ದೊಡ್ಡವರಲ್ಲ. ದುರ್ವರ್ತನೆಗೆ ಶಾಶ್ವತ ಕಡಿವಾಣಕ್ಕೆ ಕಾರ್ಯಾಂಗದ ಮೂಲಕ ಸರ್ಕಾರ ಕ್ರಮ ಕೈಗೊಳ್ಳಬೇಕು. ಪೊಲೀಸ್ ಇಲಾಖೆಗೆ ಸ್ಪಷ್ಟ ಆದೇಶ ನೀಡಬೇಕು. ಜನಸಾಮಾನ್ಯರ ಕಾನೂನಾತ್ಮಕ ರಕ್ಷಣೆ ನ್ಯಾಯಾಂಗ ಮತ್ತು ಶಾಸಕಾಂಗದ ಜವಬ್ದಾರಿಯಾಗಿದೆ. ಸರ್ಕಾರ ಕಣ್ಮುಚ್ಚಿ ಕುಳಿತುಕೊಳ್ಳಬಾರದು ಎಂದು ಒತ್ತಾಯಿಸಿದರು.

ADVERTISEMENT

ಹಿರಿಯ ವಕೀಲ ಮಾರೇಗೌಡ ಮಾತನಾಡಿ, ಯಾವ ಕಚೇರಿಗೆ ಹೋದರು ವಕೀಲರಿಗೆ ಗೌರವ ನೀಡಲ್ಲ, ವಕೀಲರ ಮೇಲೆ ಹಲ್ಲೆ ಎಂದರೆ ಕಕ್ಷಿದಾರರ ಪಾಡೇನು. ಠಾಣೆಗೆ ಹೋಗುವ ಜನಸಾಮಾನ್ಯರ ಪರಿಸ್ಥಿತಿ ಏನು ಎಂದು ಕೇಳಿದರು.

ಹಲ್ಲೆಗೊಳಗಾದ ವಕೀಲ ಸಿ.ವಿ.ರಾಮಚಂದ್ರ ಮಾತನಾಡಿ, ‘ನಮ್ಮದು ಚನ್ನಹಳ್ಳಿ ಗ್ರಾಮ ಮನೆ ನಿವೇಶನ ಬಗ್ಗೆ ತಕರಾರು ಸಂಬಂಧ ಠಾಣೆಗೆ ಸೆ.22 ರಂದು ದೂರು ನೀಡಿದ್ದೆ. 23 ರಂದು ಠಾಣೆಗೆ ಬರುವಂತೆ ಪಿ.ಎಸ್.ಐ ಸೂಚಿಸಿದ್ದರಿಂದ ಹೋಗಿದ್ದೆ. ಎದುರುದಾರರು ನನ್ನ ಮೇಲೆ ಹಲ್ಲೆ ಮಾಡುತ್ತಿದ್ದಾಗ ಪಿ.ಎಸ್.ಐ ನಂದೀಶ್‌ಗೆ ನಿಮ್ಮದುರಿನಲ್ಲೆ ಹಲ್ಲೆ ಮಾಡುತ್ತಿದ್ದರೂ ಸುಮ್ಮನಿದ್ದೀರಾ ಎಂದು ಪ್ರಶ್ನೆ ಮಾಡಿದೆ’ ಎಂದರು.

‘ಆಗ ನಂದೀಶ್‌, ಪೊಲೀಸ್ ಕಾನ್‌ಸ್ಟೆಬಲ್‌ಗಳಾದ ಮಧುಕರ್ ಮತ್ತು ನಾರಾಯಣಸ್ವಾಮಿ ಲಾಠಿಯಿಂದ ಹಲ್ಲೆ ಮಾಡಿ ನನ್ನ ಮೊಬೈಲ್ ಕಿತ್ತುಕೊಂಡರು ಯಾರಿಗಾದರೂ ದೂರು ನೀಡಿದರೆ ಎಸ್ಸಿ ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಇವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.