ADVERTISEMENT

ಕೃಷಿ ಭೂಮಿ ಕಬಳಿಕೆ ಹುನ್ನಾರ

ಕೆಲವರ ಹಿತಾಸಕ್ತಿಗಾಗಿ ಕೈಗಾರಿಕೋದ್ಯಮಿಗಳ ಪಾಲು: ಶಾಸಕ ಆರೋಪ

​ಪ್ರಜಾವಾಣಿ ವಾರ್ತೆ
Published 25 ನವೆಂಬರ್ 2020, 3:30 IST
Last Updated 25 ನವೆಂಬರ್ 2020, 3:30 IST
ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿದರು
ಶಾಸಕ ಟಿ.ವೆಂಕಟರಮಣಯ್ಯ ಮಾತನಾಡಿದರು   

ದೊಡ್ಡಬಳ್ಳಾಪುರ: ನಾಡಿನ ಹಿತಾಸಕ್ತಿ ಕಡೆಗಣಿಸುವ ಯಾವುದೇ ಕೃತ್ಯ ಸಹಿಸಲು ಸಾಧ್ಯವಿಲ್ಲ. ತಾಲ್ಲೂಕಿನ ಫಲವತ್ತಾದ ಕೃಷಿ ಭೂಮಿ ಕೆಲವರ ಹಿತಾಸಕ್ತಿಗಾಗಿ ಕೈಗಾರಿಕೋದ್ಯಮಿಗಳ ಪಾಲು ಮಾಡಲು ಬಿಡುವುದಿಲ್ಲ ಎಂದು ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು.

ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಪ್ರಚಾರ ವೇದಿಕೆ, ತಾಲ್ಲೂಕು ಮತ್ತು ನಗರ ಶಾಖೆ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ, ಸೇವಾರತ್ನ ಪುರಸ್ಕಾರ ಪ್ರದಾನ ಹಾಗೂ ’ಸಿಂಹ ಹೆಜ್ಜೆ‘ ಮಾಸಪತ್ರಿಕೆ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಕನ್ನಡ ನಾಡಿನ ಚಿಂತನೆ ಎಂದರೆ ಕೇವಲ ಭಾಷೆ ವಿಚಾರ ಮಾತ್ರವಲ್ಲ. ಸ್ಥಳೀಯರ ಸಂಸ್ಕೃತಿ, ಆಚಾರ-ವಿಚಾರ, ಕೃಷಿ ಸಂಸ್ಕೃತಿಯೂ ಸೇರುತ್ತದೆ. ಅಭಿವೃದ್ಧಿ ಹೆಸರಿನಲ್ಲಿ ವ್ಯವಸ್ಥಿತವಾಗಿ ರೈತರ ಜಮೀನು ಕಬಳಿಸುವ ಹುನ್ನಾರ ನಡೆಯುತ್ತಿರುವುದು ಖಂಡನೀಯ ಎಂದರು.

ADVERTISEMENT

ಸರ್ಕಾರದ ಅನೇಕ ಅನುದಾನ ತಾಲ್ಲೂಕಿನಿಂದ ವಂಚಿಸಲಾಗಿದೆ. ಆಸ್ಪತ್ರೆ ಮೇಲ್ದರ್ಜೆಗೇರಿಸುವ ಪ್ರಸ್ತಾಪ ಸರ್ಕಾರ ಅಂಗೀಕರಿಸದೆ ನಿರ್ಲಕ್ಷ್ಯ ವಹಿಸಿದೆ. ಜನರು ಅಭಿವೃದ್ಧಿಪರ ಹಿತಾಸಕ್ತಿಗೆ ಒದಗಿರುವ ಕಂಟಕಗಳ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ ಎಂದರು.

ಪ್ರಜಾ ಪರಿವರ್ತನಾ ವೇದಿಕೆ ರಾಜ್ಯ ಅಧ್ಯಕ್ಷ ಬಿ.ಗೋಪಾಲ್ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಾಂವಿಧಾನಿಕ ಚಿಂತನೆಗಳಿಗೆ ಪೂರಕವಾಗಿ ಭಾಷಾವಾರು ಪ್ರಾಂತ್ಯಗಳು ರೂಪ ತಳೆದಿರುವುದು ವಿಶೇಷ. ಒಕ್ಕೂಟ ವ್ಯವಸ್ಥೆಯಲ್ಲಿ ಎಲ್ಲ ವರ್ಗಗಳ ಅಭ್ಯುದಯಕ್ಕೆ ಪೂರಕವಾಗಿ ಅಧಿಕಾರಶಾಹಿ ಕೆಲಸ ಮಾಡಬೇಕು. ತಪ್ಪಿದ್ದಲ್ಲಿ ಅಸಮಾನತೆಗೆ ಕಾರಣವಾಗಲಿದೆ ಎಂದರು.

ಹಿರಿಯ ಕನ್ನಡಪರ ಹೋರಾಟಗಾರ ತ.ನ.ಪ್ರಭುದೇವ್ ಮಾತನಾಡಿ, ಮಾಧ್ಯಮಗಳು ಸಮಾಜದ ದನಿಯಾಗಬೇಕು. ಈಚೆಗೆ ಲಿ ಪತ್ರಿಕಾಂಗದ ಮೇಲೆ ನಡೆಯುತ್ತಿರುವ ದಬ್ಬಾಳಿಕೆ ಖಂಡನೀಯ. ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಮಾಧ್ಯಮ ನಿರ್ಣಾಯಕ ಪಾತ್ರ ವಹಿಸುತ್ತದೆ ಎಂದರು.

ಸೇವಾ ರತ್ನ ಪ್ರಶಸ್ತಿ ಪ್ರದಾನ: ಕಾರ್ಯಕ್ರಮದಲ್ಲಿ ಕರ್ನಾಟಕ ಮಾನವ ಹಕ್ಕುಗಳ ಪ್ರಚಾರ ವೇದಿಕೆ ರಾಜ್ಯ ಅಧ್ಯಕ್ಷ ಮುನಿಕೃಷ್ಣಪ್ಪ ಅಧ್ಯಕ್ಷತೆ ವಹಿಸಿದ್ದರು. ಬೆಸ್ಕಾಂ ಸಹಾಯಕ ಎಂಜಿನಿಯರ್‌ ರಾಜಪ್ಪ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸೋಮಶೇಖರ್, ಕೈಮಗ್ಗ ಮತ್ತು ಜವಳಿ ಇಲಾಖೆ ಉಪನಿರ್ದೇಶಕ ಗಂಗಯ್ಯ, ದೇವರಾಜ ಅರಸ್ ಪದವಿ ಕಾಲೇಜು ಪ್ರಾಂಶುಪಾಲ ಪ್ರೊ.ಕೆ.ಆರ್.ರವಿಕಿರಣ್, ಸಂಘಟನೆ ರಾಜ್ಯ ಗೌರವ ಅಧ್ಯಕ್ಷ ರಾಮಚಂದ್ರಪ್ಪ, ಕಾರ್ಯಾಧ್ಯಕ್ಷ ರಾಜಣ್ಣ, ಸಲಹೆಗಾರ ಮುನಿಯಪ್ಪ,ರಾಜ್ಯ ಉಪಾಧ್ಯಕ್ಷ ಆರ್.ಅಶ್ವತ್ಥ್, ಕಾರ್ಮಿಕ ಘಟಕ ಕಾರ್ಯಾಧ್ಯಕ್ಷ ಶ್ರೀನಿವಾಸ್, ಆನಂದ್, ಸುಬ್ರಮಣಿ, ಮಂಜುಳಾ, ಲೀಲಾವತಿ, ರಾಜೇಶ್ವರಿ, ತಾಲ್ಲೂಕು ಗೌರವ ಅಧ್ಯಕ್ಷ ರುದ್ರೇಶ್, ಅಧ್ಯಕ್ಷ ಜಯರಾಮಯ್ಯ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.