ADVERTISEMENT

ಕಂಪ್ಯೂಟರ್ ಕೊಠಡಿಗೆ ಹವಾನಿಯಂತ್ರಣ ಅಳವಡಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2019, 12:18 IST
Last Updated 26 ನವೆಂಬರ್ 2019, 12:18 IST
ವಿಜಯಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿರುವ ಕಂಪ್ಯೂಟರ್ ಶಿಕ್ಷಣ ತರಬೇತಿ ಕೊಠಡಿಯಲ್ಲಿ ಮಕ್ಕಳು ಕಲಿಯುತ್ತಿರುವುದು
ವಿಜಯಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದಲ್ಲಿರುವ ಕಂಪ್ಯೂಟರ್ ಶಿಕ್ಷಣ ತರಬೇತಿ ಕೊಠಡಿಯಲ್ಲಿ ಮಕ್ಕಳು ಕಲಿಯುತ್ತಿರುವುದು   

ವಿಜಯಪುರ: ‘ಇಲ್ಲಿನ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಮಕ್ಕಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಆರಂಭಿಸಿರುವ ಕಂಪ್ಯೂಟರ್ ಶಿಕ್ಷಣಕ್ಕೆ ಅಗತ್ಯವಾಗಿರುವ ಮೂಲಸೌಕರ್ಯ ಒದಗಿಸಬೇಕು’ ಎಂದು ಡಾ.ಬಿ.ಆರ್.ಅಂಬೇಡ್ಕರ್ ಸೇನೆ ತಾಲ್ಲೂಕು ಘಟಕದ ಅಧ್ಯಕ್ಷ ವೇಣುಗೋಪಾಲ್ ಒತ್ತಾಯಿಸಿದರು.

‘ಇಲ್ಲಿ 8 ರಿಂದ 10 ನೇ ತರಗತಿವರೆಗೆ 589 ಮಂದಿ ವಿದ್ಯಾರ್ಥಿಗಳಿದ್ದಾರೆ. ವಿದ್ಯಾರ್ಥಿಗಳಿಗೆ ಮಾಹಿತಿ ತಂತ್ರಜ್ಞಾನದ ಶಿಕ್ಷಣ ಕೊಡುವ ನಿಟ್ಟಿನಲ್ಲಿ ಒಂದು ಕೊಠಡಿಯನ್ನು ಪ್ರತ್ಯೇಕಿಸಿ, 33 ಕಂಪ್ಯೂಟರ್‌ಗಳನ್ನು ಅಳವಡಿಸಿ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲಾಗುತ್ತಿದ್ದು, ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆಯಾದರೂ ಯು.ಪಿ.ಎಸ್. ಸೌಲಭ್ಯ ಕಲ್ಪಿಸಿಲ್ಲದ ಕಾರಣ, ವಿದ್ಯುತ್ ಕಡಿತಗೊಂಡಾಗ ತಕ್ಷಣ ಸ್ಥಗಿತಗೊಳ್ಳುವ ಕಂಪ್ಯೂಟರ್‌ಗಳು ಕೆಟ್ಟುಹೋಗುವ ಸಾಧ್ಯತೆಗಳು ಹೆಚ್ಚಾಗಿವೆ. ಆದ್ದರಿಂದ ಇಲಾಖೆಯ ಅಧಿಕಾರಿಗಳು ಗಮನಹರಿಸಬೇಕು’ ಎಂದು ಒತ್ತಾಯಿಸಿದರು.

ಉಪಪ್ರಾಂಶುಪಾಲ ಪಿ.ವೆಂಕಟೇಶ್ ಮಾತನಾಡಿ, ‘ಕಂಪ್ಯೂಟರ್ ಕೊಠಡಿ ಉದ್ಘಾಟನೆಗೆ ಬಂದಿದ್ದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್.ಲತಾ ಅವರು, ಈ ಕೊಠಡಿಗೆ ಹವಾನಿಯಂತ್ರಣ ಅಳವಡಿಸಬೇಕು(ಎ.ಸಿ) ಎಂದು ಪ್ರೌಢಶಾಲೆಗಳ ಮೇಲ್ವಿಚಾರಕರಿಗೆ ಸೂಚಿಸಿದ್ದರು. ಲತಾ ಜಿಲ್ಲಾಧಿಕಾರಿಯಾಗಿ ಚಿಕ್ಕಬಳ್ಳಾಪುರಕ್ಕೆ ವರ್ಗಾವಣೆಗೊಂಡಿದ್ದಾರೆ. ಮೇಲ್ವಿಚಾರಕರೂ ವರ್ಗಾವಣೆಗೊಂಡಿರುವ ಕಾರಣ ಅಳವಡಿಕೆಯ ಕಾರ್ಯ ವಿಳಂಬವಾಗಿದೆ. ತುರ್ತಾಗಿ ಅಳವಡಿಕೆಯಾಗಬೇಕಾಗಿದೆ’ ಎಂದರು.

ADVERTISEMENT

ಕಂಪ್ಯೂಟರ್ ತರಬೇತಿ ಶಿಕ್ಷಕಿ ಸರಳ ಮಾತನಾಡಿ, ‘ಒಂದು ಬಾರಿಗೆ 50 ಮಂದಿ ವಿದ್ಯಾರ್ಥಿಗಳು, ಕಲಿಯುತ್ತಿದ್ದಾರೆ. ಹವಾನಿಯಂತ್ರಣವಿಲ್ಲದ ಕಾರಣ ಕೊಠಡಿಯಲ್ಲಿ ತುಂಬಾ ಬಿಸಿಯಿರುತ್ತದೆ. ಇಲ್ಲಿ ಕಲಿಯುವ ಮಕ್ಕಳಿಗೆ ಹಿಂದಿ ವಿಷಯದ ಬದಲಿಗೆ ಮಾಹಿತಿ ತಂತ್ರಜ್ಞಾನ ವಿಷಯದ ಕುರಿತು ಪರೀಕ್ಷೆ ಬರೆಯಲಿದ್ದಾರೆ. ಯು.ಪಿ.ಎಸ್.ಸಂಪರ್ಕವಿಲ್ಲದ ಕಾರಣ ಕೆಲವು ಕಂಪ್ಯೂಟರ್‌ಗಳು ಕೆಟ್ಟುಹೋಗಿವೆ. ಶೀಘ್ರವಾಗಿ ಎ.ಸಿ.ಮತ್ತು ಯು.ಪಿ.ಎಸ್.ಅಳವಡಿಸಿದರೆ ಅನುಕೂಲವಾಗಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.