ADVERTISEMENT

ದೇವನಹಳ್ಳಿ | ವಿಮಾನದೊಳಗೆ ಪ್ರಯಾಣಿಕರ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2026, 4:45 IST
Last Updated 1 ಮಾರ್ಚ್ 2026, 4:45 IST
ಎಐ ಚಿತ್ರ
ಎಐ ಚಿತ್ರ   

ದೇವನಹಳ್ಳಿ: ನೇಪಾಳದ ರಾಜಧಾನಿ ಕಾಠ್ಮಂಡುವಿಗೆ ತೆರಳಬೇಕಿದ್ದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನವು ಎರಡನೇ ದಿನವೂ ಪ್ರಯಾಣಿಕರನ್ನು ಕರೆದುಕೊಂಡು ಹೋಗಿ ಮತ್ತೆ ವಾಪಸ್ ಬಂದಿದ್ದು, ಇಲ್ಲಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಪ್ರಯಾಣಿಕರು ಪ್ರತಿಭಟನೆ ನಡೆಸಿದರು.

ಗುರುವಾರ ಬೆಳಗ್ಗೆ 10:30ಕ್ಕೆ ಅವರ ವಿಮಾನ ಬೆಂಗಳೂರಿನಿಂದ ಕಾಠ್ಮಂಡುವಿಗೆ ಹೊರಟಿತ್ತು. ಆದರೆ ಸ್ಪಷ್ಟ ಕಾರಣ ನೀಡದೆ ವಿಮಾನ ಕಾಠ್ಮಂಡುವಿನಲ್ಲಿ ಇಳಿಯದೇ ವಾಪಸ್ ಬೆಂಗಳೂರಿಗೇ ಬಂದಿತು. ಶುಕ್ರವಾರ ಮತ್ತೆ ಅದೇ ವಿಮಾನ ಬೆಳಗ್ಗೆ ಕಾಠ್ಮಂಡುವಿಗೆ ಹೊರಟಿತು. ಆದರೆ ಈ ಬಾರಿಯೂ ಅದು ಕಾಠ್ಮಂಡುವಿನಲ್ಲಿ ಇಳಿಯಲು ಸಾಧ್ಯವಾಗದೆ, ಲಕ್ನೋ ನಗರಕ್ಕೆ ತಿರುಗಿಸಲಾಯಿತು. ಲಕ್ನೋ ವಿಮಾನ ನಿಲ್ದಾಣದಲ್ಲಿ ಇಳಿದ ಬಳಿಕ ಪ್ರಯಾಣಿಕರನ್ನು ಹಲವು ಗಂಟೆಗಳ ಕಾಲ ವಿಮಾನದ ಒಳಗೇ ಕೂರಿಸಲಾಗಿತ್ತು. ಈ ವೇಳೆ ಯಾವುದೇ ಮಾಹಿತಿ ನೀಡಿಲ್ಲ ಎಂದು ಪ್ರಯಾಣಿಕರು ಆರೋಪಿಸಿದ್ದಾರೆ.

ಪ್ರಯಾಣಿಕರ ಸಂಕಷ್ಟ: ಸುಸ್ತು ಮತ್ತು ಬೇಸರದಿಂದ ಕಂಗೆಟ್ಟ ಪ್ರಯಾಣಿಕರು ವಿಮಾನದ ಒಳಗೇ ಪ್ರತಿಭಟನೆ ನಡೆಸಿದರು. ನಂತರ, ಅವರನ್ನೆಲ್ಲಾ ಮತ್ತೆ ಬೆಂಗಳೂರಿಗೆ ಕರೆತರಲಾಯಿತು. ಬೆಂಗಳೂರಿಗೆ ಬಂದ ನಂತರವೂ ಕೆಲವು ಪ್ರಯಾಣಿಕರು ವಿಮಾನ ನಿಲ್ದಾಣದ ಇಮಿಗ್ರೇಶನ್ ಪ್ರದೇಶದ ಬಳಿ ಧರಣಿ ನಡೆಸಿದರು.

ADVERTISEMENT

‘ನಮ್ಮ ಸಮಯ ವ್ಯರ್ಥವಾಯಿತು. ನಾವು ತಿಂಗಳುಗಟ್ಟಲೆ ಯೋಜನೆ ಮಾಡಿ ನೇಪಾಳ ಪ್ರವಾಸಕ್ಕೆ ಹೊರಟಿದ್ದೆವು. ಈಗ ಪ್ರವಾಸವೇ ಹಾಳಾಯಿತು. ದುಡ್ಡೂ ವ್ಯರ್ಥವಾಯಿತು’ ಎಂದು ಪ್ರಯಾಣಿಕೊಬ್ಬರು ಕಣ್ಣೀರಿಟ್ಟದ್ದಾರೆ.

‘ಒಟ್ಟು 30 ಗಂಟೆಗಳಿಗೂ ಹೆಚ್ಚು ಕಾಲ ನಾವು ವಿಮಾನದ ಒಳಗೇ ಸಿಲುಕಿಕೊಂಡಿದ್ದೆವು. ವಿಮಾನ ಕಂಪನಿಯವರು ಸರಿಯಾಗಿ ಮಾತನಾಡಿಸಲಿಲ್ಲ’ ಎಂದು ಮತ್ತೊಬ್ಬ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಿಭಟನೆ ತೀವ್ರಗೊಂಡ ಹಿನ್ನೆಲೆಯಲ್ಲಿ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್) ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿ ತಿಳಿದುಕೊಂಡರು. ಆದರೂ ಪ್ರಯಾಣಿಕರು, ತಮಗಾದ ಅನ್ಯಾಯಕ್ಕೆ ಸೂಕ್ತ ಪರಿಹಾರ ನೀಡಬೇಕು. ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಎಐ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.