ADVERTISEMENT

ವಿಜಯಪುರ | ಅಮಾನಿಕೆರೆ ತುಂಬಿದ ಕೋಳಿತ್ಯಾಜ್ಯ, ಕಟ್ಟಡ ಅವಶೇಷ

ಕ್ರಮಕೈಗೊಳ್ಳದ ಎಚ್‌.ಎನ್‌.ವ್ಯಾಲಿ ಅಧಿಕಾರಿಗಳು: ಸಾರ್ವಜನಿಕರ ಆರೋಪ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2024, 14:38 IST
Last Updated 24 ಸೆಪ್ಟೆಂಬರ್ 2024, 14:38 IST
ವಿಜಯಪುರ ಅಮಾನಿಕೆರೆಯ ಏರಿ ಮೇಲಿನಿಂದ ಕಟ್ಟಡದ ಅವಶೇಷ ಕೆರೆಗೆ ಸುರಿದಿರುವುದು
ವಿಜಯಪುರ ಅಮಾನಿಕೆರೆಯ ಏರಿ ಮೇಲಿನಿಂದ ಕಟ್ಟಡದ ಅವಶೇಷ ಕೆರೆಗೆ ಸುರಿದಿರುವುದು    

ವಿಜಯಪುರ(ದೇವನಹಳ್ಳಿ): ಪಟ್ಟಣದಲ್ಲಿ ತೆರವುಗೊಂಡ ಹಳೆ ಕಟ್ಟಡಗಳ ಅವಶೇಷ ಹಾಗೂ ಮಾಂಸ ಮಾರಾಟದ ಅಂಗಡಿಗಳಲ್ಲಿನ ತ್ಯಾಜ್ಯ ಮೂಟೆ ಕಟ್ಟಿ, ಚಿಕ್ಕಬಳ್ಳಾಪುರ ರಸ್ತೆಯಲ್ಲಿರುವ ಅಮಾನಿಕೆರೆಗೆ ಹಾಕಲಾಗುತ್ತಿದೆ. ಈ ಕುರಿತು ಕೆರೆ ನಿರ್ವಹಣೆ ನೋಡಿಕೊಳ್ಳುತ್ತಿರುವ ಎಚ್.ಎನ್.ವ್ಯಾಲಿ ಯೋಜನೆ ಅಧಿಕಾರಿಗಳು ಗಮನಹರಿಸುತ್ತಿಲ್ಲವೆಂದು ಸಾರ್ವಜನಿಕರ ಆರೋಪವಾಗಿದೆ.

ಪಟ್ಟಣದಿಂದ ಚಿಕ್ಕಬಳ್ಳಾಪುರ ಕಡೆಗೆ ಹೋಗುವ ರಸ್ತೆ ನಡುವೆ ಇರುವ ವಿಜಯಪುರ ಅಮಾನಿಕೆರೆ ಏರಿ ಮೇಲೆ ತೆರವುಗೊಂಡು ಕಟ್ಟಡದ ಅವಶೇಷ ಲೋಡುಗಟ್ಟಲೇ ತಂದು ಸುರಿಯಲಾಗಿದೆ. ರಾತ್ರಿ ವೇಳೆ ಕೋಳಿ ತ್ಯಾಜ್ಯ ಮತ್ತು ಮಾಂಸದ ಅಂಗಡಿಗಳಲ್ಲಿನ ತ್ಯಾಜ್ಯ ಮೂಟೆಗಳಲ್ಲಿ ಕಟ್ಟಿಕೊಂಡು ಸರಕು ಸಾಗಾಣಿಕೆ ಆಟೊಗಳಲ್ಲಿ ತುಂಬಿಕೊಂಡು ಬಂದು ಕೆರೆಗೆ ಸುರಿಯಲಾಗುತ್ತಿದೆ.

ಪಟ್ಟಣದ ಜನರಿಗೆ ಕುಡಿಯುವ ನೀರು ಪೂರೈಸುವುದಕ್ಕಾಗಿ ಇದೇ ಕೆರೆಯಿಂದಲೇ ಕೊಳವೆ ಬಾವಿ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಕೋಳಿ ತ್ಯಾಜ್ಯ ನೀರಿಗೆ ಸೇರಿ ವಿಷಕಾರಿ ಅಂಶ ಕೊಳವೆ ಬಾವಿ ಮೂಲಕ ಜನರಿಗೆ ಸರಬರಾಜು ಆಗುವ ಸಾಧ್ಯತೆ ಇದೆ. ಜನರು ಅನಾರೋಗ್ಯಕ್ಕೆ ತುತ್ತಾಗುವ ಮೊದಲೇ ಎಚ್ಚೆತ್ತುಕೊಂಡು ತ್ಯಾಜ್ಯ  ಸುರಿಯುವವರ ಮೇಲೆ ಸೂಕ್ತಕ್ರಮ ಜರುಗಿಸಬೇಕಾಗಿದೆ.

ADVERTISEMENT
ತ್ಯಾಜ್ಯ ಪುರಸಭೆ ಕಸ ಸಂಗ್ರಹ ವಾಹನಕ್ಕೆ ನೀಡುವಂತೆ ಎಚ್ಚರಿಕೆ ನೀಡಲಾಗಿದೆ. ಕೆರೆಗೆ ಎಸೆಯುತ್ತಿರುವುದು ಕಂಡು ಬರುತ್ತಿದ್ದು ದೂರು ದಾಖಲಿಸಲಾಗುವುದು.
ಜಿ.ಆರ್.ಸಂತೋಷ್, ಮುಖ್ಯಾಧಿಕಾರಿ, ಪುರಸಭೆ ವಿಜಯಪುರ

ಈ ಬಗ್ಗೆ ಎಚ್.ಎನ್.ವ್ಯಾಲಿ ಯೋಜನೆ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಮಾಹಿತಿ ನೀಡಿದರೂ ಸ್ಪಂದಿಸುತ್ತಿಲ್ಲ ಎಂದು  ಹೆಸರೇಳಲಿಚ್ಚಿಸದ ಸಾರ್ವಜನಿಕರು ದೂರುತ್ತಾರೆ.

ಸವಾರರಿಗೆ ಅಪಾಯ:

ಕೋಳಿ ತ್ಯಾಜ್ಯ ಮೂಟೆಗಳಲ್ಲಿ ತಂದು ರಸ್ತೆ ಬದಿ ಕೆರೆಗೆ ಎಸೆಯುತ್ತಿರುವುದರಿಂದ ಬೀದಿ ನಾಯಿಗಳು ರಸ್ತೆಯಲ್ಲಿ ಸಂಚರಿಸುವ ದ್ವಿಚಕ್ರ ವಾಹನಗಳ ಸವಾರರ ಮೇಲೆ ಎರಗುತ್ತಿವೆ.

ವಿದ್ಯಾರ್ಥಿಗಳಿಂದಲೂ ಮನವಿ:

ಚಿಕ್ಕಬಳ್ಳಾಪುರ ರಸ್ತೆ ರೋಡಹಳ್ಳಿ ಬಳಿ ಗುರುಕುಲ ಶಾಲೆ ವಿದ್ಯಾರ್ಥಿಗಳು, ಕೆರೆ ಏರಿ ಮೇಲೆ ದುರ್ನಾತ ಬೀರುತ್ತಿದೆ. ಶಾಲೆಗೆ ಹೋಗುವಾಗ ಮೂಗು ಮುಚ್ಚಿಕೊಂಡು ಹೋಗಬೇಕಾಗಿದೆ. ಕ್ರಮಕೈಗೊಳ್ಳಲು ಮನವಿ ಮಾಡಿದ್ದಾರೆ.

ಎಚ್.ಎನ್.ವ್ಯಾಲಿ ಯೋಜನೆ ಅಧಿಕಾರಿಗಳ ಪ್ರತಿಕ್ರಿಯೆ ಪಡೆಯಲು ಕರೆ ಮಾಡಿದಾಗ ಸ್ವೀಕರಿಸಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.