ಆನೇಕಲ್: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿರುವ ಅನಿಲ್ ಮಿಶ್ರ, ಸುಪ್ರಿಂ ಕೋರ್ಟ್ ಮುಖ್ಯನ್ಯಾಯಮೂರ್ತಿ ವಿರುದ್ಧ ಪ್ರಚೋದನಕಾರಿಯಾಗಿ ಮಾತನಾಡಿರುವ ಟಿ.ಜಿ.ಮೋಹನ್ ದಾಸ್, ಸಿಜೆಐಗೆ ಶೂ ಎಸೆದ ವಕೀಲ ನಡೆ ಸಮರ್ಥಿಸಿಕೊಂಡ ಭಾಸ್ಕರ್ ರಾವ್ ವಿರುದ್ಧ ಪ್ರಕರಣ ದಾಖಲಿಸುವಂತೆ ಬೋಧಿಸ್ವತ ಟ್ರಸ್ಟ್‌ನ ಪದಾಧಿಕಾರಿಗಳು ಮತ್ತು ದಲಿತ ಪ್ರಗತಿಪರ ಸಂಘಟನೆಗಳು ಆನೇಕಲ್ ಪೊಲೀಸ್ ಠಾಣೆಯ ಮುಂಭಾಗ ಭಾನುವಾರ ಪ್ರತಿಭಟನೆ ನಡೆಸಿದರು.
ನ್ಯಾಯಾಂಗ ವ್ಯವಸ್ಥೆ ಬಲಪಡಿಸಲು ಮತ್ತು ಸಂವಿಧಾನ ವಿರೋಧಿಗಳಿಗೆ ತಕ್ಕ ಪಾಠ ಕಲಿಸುವ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ವಿರುದ್ಧ ಅವಾಚ್ಯವಾಗಿ ಮಾತನಾಡಿರುವ ಅನಿಲ್ ಮಿಶ್ರ ಅಂಬೇಡ್ಕರ್ ಅವರನ್ನು ಕೊಳಕು ಮನುಷ್ಯ, ಸುಳ್ಳುಗಾರ, ಬ್ರಿಟಿಷರ ಏಜೆಂಟ್ ಎಂದು ಹೇಳಿಕೆ ನೀಡಿದ್ದಾರೆ. ಸಂವಿಧಾನ ವಿರೋಧಿಯಾಗಿರುವ ಅನಿಲ್ ಮಿಶ್ರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಬೇಕು .ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ದೌರ್ಜನ್ಯ ತಡೆ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿದರು.
ಸುಪ್ರೀಂ ಕೋರ್ಟ್‌ನ ಮುಖ್ಯನ್ಯಾಯಮೂರ್ತಿ ಬಿ.ಆರ್. ಗವಾಯಿ ಅವರಿಗೆ ಶೂ ಎಸೆಯಲು ಯತ್ನಿಸಿದ ವಕೀಲನನ್ನ ಬಿಜೆಪಿ ಮುಖಂಡ ಭಾಸ್ಕರ್ ರಾವ್ ಶ್ಲಾಘಿಸಿದ್ದಾರೆ. ಐಪಿಎಸ್ ಅಧಿಕಾರಿಯಾಗಿದ್ದ ಇವರಿಗೆ ಸಂವಿಧಾನದ ಮಹತ್ವ ತಿಳಿದಿಲ್ಲ. ಯಾರನ್ನೋ ಮೆಚ್ಚಿಸಲು ಮತ್ತೊಬ್ಬರನ್ನು ತೆಗಳುವ ಪ್ರಕ್ರಿಯೆ ಒಳ್ಳೆಯದಲ್ಲ ಎಂದು ಟ್ರಸ್ಟ್‌ನ ಡಾ.ಮೀನಾಕ್ಷಿ ತಿಳಿಸಿದರು.
ಬಿಎಸ್‌ಪಿ ರಾಜ್ಯ ಕಾರ್ಯದರ್ಶಿ ಕೆ.ಸಿ.ನಾಗರಾಜು, ಮುಖಂಡರಾದ ಗೌತಮ್ ವೆಂಕಿ, ಸ್ವಾಭಿಮಾನಿ ಸತೀಶ್, ಚಿಕ್ಕಹಾಗಡೆ ಯಲ್ಲಪ್ಪ, ಕಾಮಾಕ್ಷಿ, ಪದ್ಮ, ದೇವರಾಜ್, ಅಶೋಕ್, ಬಾಬು, ನಾಗರಾಜು, ಶಶಿ ಜನದನಿ, ಪ್ರಸನ್ನ, ಮಂಜಮ್ಮ, ಮುರಳಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.