
ಆನೇಕಲ್: ಇತ್ತೀಚಿನ ದಿನಗಳಲ್ಲಿ ರಾಜಕೀಯ ಪಕ್ಷಗಳು ಅಂಬೇಡ್ಕರ್ ಅವರ ಹುಟ್ಟುಹಬ್ಬ ಮತ್ತು ಪರಿನಿರ್ವಾಣ ದಿನವನ್ನು ಜಿದ್ದಾಜಿದ್ದಿನಿಂದ ಆಚರಿಸುತ್ತಿವೆ. ಮತ ಬ್ಯಾಂಕ್ ಗಟ್ಟಿಗೊಳಿಸಲು ಅಂಬೇಡ್ಕರ್ ಅವರ ತತ್ವ ಚಿಂತನೆಗಳನ್ನು ಅನುಸರಿಸದೇ ಅವರ ವಿಚಾರಧಾರೆಗಳನ್ನು ಪಾಲಿಸುವ ನಾಟಕ ಮಾಡುತ್ತಿವೆ ಎಂದು ಪ್ರಜಾ ವಿಮೋಚನಾ ಚಳುವಳಿ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷ ಆನೇಕಲ್ ಕೃಷ್ಣಪ್ಪ ಹೇಳಿದರು.
ಪ್ರಜಾ ವಿಮೋಚನಾ ಚಳವಳಿ ವತಿಯಿಂದ ತಾಲ್ಲೂಕಿನ ಬಳ್ಳೂರು ಗ್ರಾಮದಲ್ಲಿ ಶನಿವಾರ ಬಿ.ಆರ್.ಅಂಬೇಡ್ಕರ್ ಅವರ ಪರಿನಿರ್ವಾಣ ದಿನದ ಪ್ರಯುಕ್ತ ನಡೆದ ರಾಜಕೀಯ, ಸಾಮಾಜಿಕ, ಸಮಾನತೆಗಾಗಿ ಶೋಷಿತರ ಜಾಗೃತಿ ಸಮಾವೇಶದಲ್ಲಿ ಮಾತನಾಡಿದರು.
ಭಾರತಕ್ಕೆ ಸಂವಿಧಾನ ನೀಡಿದ ಡಾ.ಬಿ.ಆರ್.ಅಂಬೇಡ್ಕರ್ ಅವರು ಮೃತಪಟ್ಟಾಗ ಮೃತ ದೇಹವನ್ನು ದೆಹಲಿಯಿಂದ ಬಾಂಬೆಗೆ ತರಲು ಅವರ ಕುಟುಂಬ ಪರದಾಡಿತು. ಅಂದಿನ ಕೇಂದ್ರ ಸರ್ಕಾರ ಶೋಕಾಚರಣೆಯನ್ನು ಸಹ ಘೋಷಣೆ ಮಾಡಿರಲಿಲ್ಲ. ಅಂಬೇಡ್ಕರ್ ಅವರ ಅಂತ್ಯಕ್ರಿಯೆ ಮಾಡಲು ಸೂಕ್ತ ಜಾಗ ಸಹ ನೀಡಿರಲಿಲ್ಲ. ಆದರೆ ಇಂದು ದಲಿತರ ಮತಗಳಿಗಾಗಿ ಅಂಬೇಡ್ಕರ್ ಅವರ ಹೆಸರನ್ನು ಬಳಸುತ್ತಿರುವುದು ರಾಜಕಾರಣಕ್ಕೆ ಶೋಭೆ ತರುವುದಿಲ್ಲ ಎಂದು ಹೇಳಿದರು.
ಬಿಜೆಪಿ ಕೆಲ ಮುಖಂಡರು ಸಂವಿಧಾನವನ್ನು ಬದಲಾಯಿಸುವ ಮಾತನಾಡುತ್ತಾರೆ. ಇದು ಇಂದು ಎಂದೆಂದಿಗೂ ಸಾಧ್ಯವಾಗದ ಮಾತಾಗಿದೆ. ಒಂದು ವೇಳೆ ಸಂವಿಧಾನವನ್ನು ಬದಲಾಯಿಸಿದರೆ ಇತರೆ ದೇಶಗಳಲ್ಲಿ ದಂಗೆ ಎದ್ದಂತೆ ಭಾರತದಲ್ಲಿಯೂ ದಂಗೆ ಹೇಳಬೇಕಾಗುತ್ತದೆ ಎಂದರು.
ಸಂಘಟನೆಯ ಜಿಲ್ಲಾ ಘಟಕದ ಅಧ್ಯಕ್ಷ ಹಳೇಹಳ್ಳಿ ರವಿ, ಅಂಬೇಡ್ಕರ್ ಅವರ ಸಂವಿಧಾನ, ಹೋರಾಟದ ಗುಣ, ಆದರ್ಶ ಮತ್ತು ತತ್ವ ಸಿದ್ಧಾಂತಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಅಂಬೇಡ್ಕರ್ ಅವರು ಮೃತಪಟ್ಟಾಗ 193 ದೇಶಗಳಲ್ಲಿ ಬಾವುಟಗಳನ್ನು ಅರ್ಧಕ್ಕೆ ಇಳಿಸುವ ಮೂಲಕ ಗೌರವ ಸೂಚಿಸಿದರು ಇಂತಹ ಗೌರವ ಪಡೆದ ವಿಶ್ವದ ಏಕೈಕ ವ್ಯಕ್ತಿಯಾಗಿದ್ದಾರೆ ಎಂದರು.
ಸಂಘಟನೆಯ ಜಿಲ್ಲಾ ಅಧ್ಯಕ್ಷ ಹಳೇಹಳ್ಳಿ ರವಿ, ಬೆಂಗಳೂರು ದಕ್ಷಿಣ ತಾಲ್ಲೂಕು ಅಧ್ಯಕ್ಷ ಬಸವರಾಜು, ಆನೇಕಲ್ ತಾಲ್ಲೂಕು ಉಪಾಧ್ಯಕ್ಷ ಬಳ್ಳೂರು ರಮೇಶ್, ಟೌನ್ ಅಧ್ಯಕ್ಷ ವೆಂಕಟೇಶ್, ಕಸಬಾ ಹೋಬಳಿ ಅಧ್ಯಕ್ಷ ಪರಶುರಾಮ್, ಬೆಂಗಳೂರು ಪೂರ್ವ ಮಹಿಳಾ ಘಟಕದ ಅಧ್ಯಕ್ಷ ರಜಿಯಾಬೇಗಂ, ಗುಲಾಬ್‌ಜಾನ್, ಚಿರಂಜೀವಿ ಶ್ರೀನಿವಾಸ್, ವೇಣು, ಕೊಪ್ಪ ನಾಗರಾಜು, ಮಂಜುನಾಥ್, ಕೃಷ್ಣಪ್ಪ, ಉಮೇಶ್, ನಾಗೇಶ್ ಇದ್ದರು.
ಅಂಬೇಡ್ಕರ್ ಅವರು ಜ್ಞಾನದ ಪ್ರತೀಕ. ಅವರ ತತ್ವ ಸಿದ್ಧಾಂತಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು. ಈ ಮೂಲಕ ಭ್ರಷ್ಟಾಚಾರ ಅಸಮಾನತೆ ಮತ್ತು ಅಸ್ಪೃಶ್ಯತೆ ತೊಲಗಿಸಲು ಪ್ರತಿಯೊಬ್ಬರು ಬದ್ಧತೆ ತೋರಬೇಕುಆನೇಕಲ್ ಕೃಷ್ಣಪ್ಪ ಅಧ್ಯಕ್ಷ ಪ್ರಜಾ ವಿಮೋಚನಾ ಚಳುವಳಿ ಸಂಘಟನೆ
ಶಿಕ್ಷಣ ಆರೋಗ್ಯ ಸೇವೆ ಉಚಿತವಾಗಲಿ
ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಉಚಿತ ಸೌಲಭ್ಯ ನೀಡುವ ಮೂಲಕ ಜನರನ್ನು ಗುಲಾಮರಾಗಿ ಮಾಡುತ್ತಿವೆ. ಜನರಿಗೆ ಅವಶ್ಯಕವಿರುವ ಆರೋಗ್ಯ ಮತ್ತು ಶಿಕ್ಷಣ ಸೇವೆಯನ್ನು ಉಚಿತವಾಗಿ ನೀಡಬೇಕು. ಇದರಿಂದ ವಿದ್ಯಾವಂತ ಸಮಾಜ ನಿರ್ಮಾಣ ಸಾಧ್ಯವಾಗುತ್ತದೆ. ಹಲವು ಖಾಸಗಿ ಆಸ್ಪತ್ರೆಗಳು ಮತ್ತು ಖಾಸಗಿ ಶಾಲೆಗಳು ರಾಜಕಾರಣಿಗಳದ್ದೇ ಆಗಿದೆ ಹಾಗಾಗಿ ಈ ಕ್ಷೇತ್ರಗಳಲ್ಲಿ ಉಚಿತ ಸೇವೆಯನ್ನು ಪಡೆಯುವುದು ದೂರದ ಮಾತಾಗಿದೆ ಎಂದು ಪ್ರಜಾ ವಿಮೋಚನಾ ಚಳುವಳಿ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷ ಆನೇಕಲ್ ಕೃಷ್ಣಪ್ಪ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.