ಆನೇಕಲ್: ರಥಸಪ್ತಮಿ ಅಂಗವಾಗಿ ತಾಲ್ಲೂಕಿನ ದೇವಾಲಯಗಳಲ್ಲಿ ವಿಶೇಷ ಪೂಜೆ ಮತ್ತು ಉತ್ಸವ ವಿಜೃಂಭಣೆಯಿಂದ ನಡೆಯಿತು.
ತಾಲ್ಲೂಕಿನ ಸಬ್‌ಮಂಗಲದ ಮುನೇಶ್ವರ ಸ್ವಾಮಿ ದೇವಾಲಯದಲ್ಲಿ ರಥಸಪ್ತಮಿ ಪ್ರಯುಕ್ತ ಮುನೇಶ್ವರ ಸ್ವಾಮಿ ಜಾತ್ರೆ ವೈಭವದಿಂದ ಜರುಗಿತು. ಮುನೇಶ್ವರ ಸ್ವಾಮಿಗೆ ಅಲಂಕಾರ ಮಾಡಲಾಗಿತ್ತು. ಸಮಂದೂರು, ಗುಡ್ಡನಹಳ್ಳಿ, ತಮಿಳುನಾಡಿನ ಕೊಮಾರನಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳ 50ಕ್ಕೂ ಹೆಚ್ಚು ಗ್ರಾಮದೇವತೆಗಳ ಪಲ್ಲಕ್ಕಿ ಉತ್ಸವ ನಡೆಯಿತು.
ಸುತ್ತಮುತ್ತಲ ಗ್ರಾಮಗಳ ನೂರಾರು ಭಕ್ತರು ಜಾತ್ರೆಯಲ್ಲಿ ಪಾಲ್ಗೊಂಡಿದ್ದರು. ತಮಟೆ, ವೀರಗಾಸೆ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ಮೆರವಣಿಗೆಗೆ ಮೆರಗು ನೀಡಿದವು. ಮಹಿಳೆಯರ ಕೋಲಾಟ ಗಮನ ಸೆಳೆಯಿತು.
ತಾಲ್ಲೂಕಿನ ಸಮಂದೂರಿನಲ್ಲಿ ರಥಸಪ್ತಮಿಯ ಪ್ರಯುಕ್ತ ಸೂರ್ಯನಾರಾಯಣಸ್ವಾಮಿಗೆ ಅಲಂಕಾರ, ಪೂಜೆ ನೆರವೇರಿಸಲಾಯಿತು. ತಾಲ್ಲೂಕಿನ ಅತ್ತಿಬೆಲೆಯ ಬೀರೇಶ್ವರ ಸ್ವಾಮಿ ಜಾತ್ರ ಮಹೋತ್ಸವ ಶ್ರದ್ಧಾ, ಭಕ್ತಿಯಿಂದ ನೆರವೇರಿತು. ಜಾತ್ರಾ ಮಹೋತ್ಸವ ಅಂಗವಾಗಿ ದೇವಾಲಯಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ತಾಲ್ಲೂಕಿನ ರಾಮಕೃಷ್ಣಾಪುರದ ಪ್ರಸನ್ನ ವೆಂಕಟೇಶ್ವರ ಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ನಡೆಯಿತು. ವಿವಿಧ ಗ್ರಾಮಗಳ ಭಕ್ತರು ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.