ADVERTISEMENT

ಮಕ್ಕಳಿಗೆ ಆಧಾರ್‌ ನೀಡಲು ಸಾಥಿ ಅಭಿಯಾನ

​ಪ್ರಜಾವಾಣಿ ವಾರ್ತೆ
Published 8 ಜುಲೈ 2025, 2:22 IST
Last Updated 8 ಜುಲೈ 2025, 2:22 IST
ಆನೇಕಲ್ ತಾಲ್ಲೂಕಿನ ಮಂಚನಹಳ್ಳಿಯಲ್ಲಿ ಕಾನೂನು ಸೇವೆಗಳ ಪ್ರಾಧಿಕಾರದ ಸಾಥಿ ಯೋಜನೆಯಡಿಯಲ್ಲಿ ಆಧಾರ್ ಮತ್ತು ಗುರುತು ಪತ್ರ ನೀಡಲು ಸಮೀಕ್ಷೆ ನಡೆಸುತ್ತಿರುವುದು
ಆನೇಕಲ್ ತಾಲ್ಲೂಕಿನ ಮಂಚನಹಳ್ಳಿಯಲ್ಲಿ ಕಾನೂನು ಸೇವೆಗಳ ಪ್ರಾಧಿಕಾರದ ಸಾಥಿ ಯೋಜನೆಯಡಿಯಲ್ಲಿ ಆಧಾರ್ ಮತ್ತು ಗುರುತು ಪತ್ರ ನೀಡಲು ಸಮೀಕ್ಷೆ ನಡೆಸುತ್ತಿರುವುದು   

ಆನೇಕಲ್: ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಕೈಗೊಂಡಿರುವ ಸಾಥಿ ಅಭಿಯಾನ ತಾಲ್ಲೂಕಿನ ವಿವಿಧೆಡೆ ಆರಂಭಗೊಂಡಿದೆ.

ಬೆಂಗಳೂರು ಪಶ್ಚಿಮ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿಯಿಂದ ಆನೇಕಲ್ ತಾಲ್ಲೂಕಿನ ಮಂಚನಹಳ್ಳಿಯಲ್ಲಿ ಸಮೀಕ್ಷೆಗೆ ಚಾಲನೆ ನೀಡಲಾಯಿತು.

ಜಿಲ್ಲಾ ಮತ್ತು ತಾಲ್ಲೂಕು ಕಾನೂನು ಸೇವೆಗಳ ಪ್ರಾಧಿಕಾರು ಮತ್ತು ಸ್ವಯಂಸೇವಕರ ತಂಡದೊಂದಿಗೆ ತಾಲ್ಲೂಕಿನ ವಿವಿಧೆಡೆ ಭೇಟಿ ನೀಡಿ ಮಕ್ಕಳ ದಾಖಲೆಗಳನ್ನು ಪರಿಶೀಲಿಸಿ ಸಾಥಿ ಯೋಜನೆಯಡಿಯಲ್ಲಿ ಆಧಾರ್‌ ಮತ್ತು ಗುರುತು ಪತ್ರ ನೀಡಲು ಸಮೀಕ್ಷೆ ನಡೆಸಲಾಗುತ್ತಿದೆ ಎಂದು ಆಶಾ ತಿಳಿಸಿದರು.

ADVERTISEMENT

ಬೆಂಗಳೂರು ಪಶ್ಚಿಮ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಆಶಾ ಮಾತನಾಡಿ, ಸಮೀಕ್ಷೆ ಮೂಲಕ 18 ವರ್ಷದೊಳಗಿನ ಮಕ್ಕಳ ಬಗ್ಗೆ ಮಾಹಿತಿ ಸಂಗ್ರಹಿಸಲಾಗುತ್ತಿದೆ. ಕುಟುಂಬದ ಬೆಂಬಲ, ಪೋಷಣೆ, ಆಶ್ರಯ, ಆರೈಕೆ, ರಕ್ಷಣೆಯಿಂದ ವಂಚಿತರಾದವರಿಗೆ ನೆರವು ನೀಡುವ ಸಲುವಾಗಿ ಸಮೀಕ್ಷೆಯನ್ನು ರೂಪಿಸಲಾಗಿದೆ ಎಂದರು.

ತಾಲ್ಲೂಕಿನ ವಿವಿಧೆಡೆ ಸಮೀಕ್ಷೆಯ ಕಾರ್ಯ ನಡೆಯುತ್ತಿದ್ದು ಬೀದಿ ಬದಿಯ ಮಕ್ಕಳು, ಕೊಳಗೇರಿಯಲ್ಲಿರುವವರು, ರೈಲು ನಿಲ್ದಾಣಗಳಲ್ಲಿರುವ ಮಕ್ಕಳು, ಅನಾಥ ಮಕ್ಕಳು, ಕಳ್ಳಸಾಗಣೆ, ಭಿಕ್ಷಾಟಣೆ, ಬಾಲ ಕಾರ್ಮಿಕ ಪದ್ದತಿಯಿಂದ ರಕ್ಷಿಸಲ್ಪಟ್ಟ ಮಕ್ಕಳು, ಅನೌಪಚಾರಿಕ ಆಶ್ರಯ ತಾಣಗಳಲ್ಲಿರುವ ಮಕ್ಕಳಿಗೆ ಸಾಥಿ ಅಭಿಯಾನ ಮೂಲಕ ಕಾನೂನು ಗುರುತು ಪತ್ರ ಮತ್ತು ಆಧಾರ್‌ ಸೌಲಭ್ಯ ದೊರೆಯಲಿದೆ ಎಂದು ತಿಳಿಸಿದರು.

ಇದರಿಂದಾಗಿ ಅವರಿಗೆ ಸರ್ಕಾರಿ ಸೌಲಭ್ಯಗಳು ದೊರೆಯಲಿವೆ. ಶಿಕ್ಷಣ, ಆರೋಗ್ಯ ರಕ್ಷಣೆ ಮತ್ತು ಮಕ್ಕಳ ಕಲ್ಯಾಣ ಸೇರಿದಂತೆ ಕಾನೂನಡಿಯಲ್ಲಿ ದೊರೆಯುವ ಸೌಲಭ್ಯಗಳು ಸುಲಭವಾಗಿ ಅರ್ಹ ಫಲಾನುಭವಿಗಳಿಗೆ ದೊರೆಯುತ್ತದೆ ಎಂದು ತಿಳಿಸಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸಮೀಕ್ಷೆ ಆಧಾರ್ ನೊಂದಣಿ ಮತ್ತು ಕಾನೂನು ನೆರವು ಅಭಿಯಾನ ರೂಪಿಸಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮತ್ತು ಹಿರಿಯ ಸಿವಿಲ್‌ ನ್ಯಾಯಾಧೀಶ ಶ್ರೀಶೈಲಭೀಮಸೇವ ಬಾಗಡಿ ಅವರು ಆನೇಕಲ್‌ ಜಿಲ್ಲಾ ಮಕ್ಕಳ ರಕ್ಷಣಾ ಘಟಕಕ್ಕೆ ಭೇಟಿ ನೀಡಿ ಸಾತಿ ಕಾರ್ಯಕ್ರಮದ ಬಗ್ಗೆ ಮಾಹಿತಿ ಪಡೆದಿದ್ದಾರೆ. ಅರ್ಹ ಮಕ್ಕಳ ಆಧಾರ್‌ ನೊಂದಣಿಗಾಗಿ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿಗಳ ಕಚೇರಿಯನ್ನು ಸಂಪರ್ಕಿಸಬಹುದಾಗಿದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.