ADVERTISEMENT

ಆನೇಕಲ್‌ ಅಡ್ವೋಕೇಟ್ಸ್‌ ಪ್ರೀಮಿಯರ್‌ ಲೀಗ್‌ಗೆ ಚಾಲನೆ: 8 ತಂಡಗಳ 160 ಮಂದಿ ಭಾಗಿ

​ಪ್ರಜಾವಾಣಿ ವಾರ್ತೆ
Published 11 ಡಿಸೆಂಬರ್ 2025, 2:22 IST
Last Updated 11 ಡಿಸೆಂಬರ್ 2025, 2:22 IST
ಆನೇಕಲ್‌ನ ಎಎಸ್‌ಬಿ ಮೈದಾನದಲ್ಲಿ ತಾಲ್ಲೂಕು ವಕೀಲರ ಸಂಘದ ವತಿಯಿಂದ ಆನೇಕಲ್‌ ಆನೇಕಲ್‌ ಅಡ್ವೋಕೇಟ್ಸ್‌ ಪ್ರೀಮಿಯರ್‌ ಲೀಗ್‌ ಕ್ರಿಕೆಟ್‌ ಪಂದ್ಯಾವಳಿಯನ್ನು ಆನೇಕಲ್‌ ನ್ಯಾಯಾಲಯದ ನ್ಯಾಯಾಧೀಶ ಬಿ.ಸೋಮಶೇಖರ್‌ ಅವರು ಉದ್ಘಾಟಿಸಿದರು
ಆನೇಕಲ್‌ನ ಎಎಸ್‌ಬಿ ಮೈದಾನದಲ್ಲಿ ತಾಲ್ಲೂಕು ವಕೀಲರ ಸಂಘದ ವತಿಯಿಂದ ಆನೇಕಲ್‌ ಆನೇಕಲ್‌ ಅಡ್ವೋಕೇಟ್ಸ್‌ ಪ್ರೀಮಿಯರ್‌ ಲೀಗ್‌ ಕ್ರಿಕೆಟ್‌ ಪಂದ್ಯಾವಳಿಯನ್ನು ಆನೇಕಲ್‌ ನ್ಯಾಯಾಲಯದ ನ್ಯಾಯಾಧೀಶ ಬಿ.ಸೋಮಶೇಖರ್‌ ಅವರು ಉದ್ಘಾಟಿಸಿದರು   

ಆನೇಕಲ್ : ಪಟ್ಟಣದ ಎಎಸ್‌ಬಿ ಮೈದಾನದಲ್ಲಿ ತಾಲ್ಲೂಕು ವಕೀಲರ ಸಂಘದ ವತಿಯಿಂದ ಆನೇಕಲ್‌ ಆನೇಕಲ್‌ ಅಡ್ವೋಕೇಟ್ಸ್‌ ಪ್ರೀಮಿಯರ್‌ ಲೀಗ್‌ ಕ್ರಿಕೆಟ್‌ ಪಂದ್ಯಾವಳಿಯನ್ನು ಸೋಮವಾರ ಉದ್ಘಾಟಿಸಲಾಯಿತು. ಎಎಪಿಎಲ್‌ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಒಟ್ಟು 8 ತಂಡಗಳು ಭಾಗಿಯಾಗಿದ್ದು 160 ಮಂದಿ ವಕೀಲರು ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಭಾಗಿಯಾಗಲಿದ್ದಾರೆ.

ಆನೇಕಲ್‌ ನ್ಯಾಯಾಲಯದ 3ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಬಿ.ಸೋಮಶೇಖರ್‌ ಕ್ರಿಕೆಟ್‌ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿ ವಕೀಲರು ಸದಾ ಕೆಲಸದ ಗುಂಗಿನಲ್ಲಿರುತ್ತಾರೆ ಮತ್ತು ಒತ್ತಡದ ನಡುವೆ ವೃತ್ತಿ ಜೀವನ ನಡೆಸುತ್ತಾರೆ. ವಕೀಲರ ಸಂಘದ ವತಿಯಿಂದ ಕ್ರಿಕೆಟ್‌ ಪಂದ್ಯಾವಳಿಯನ್ನು ಆಯೋಜಿಸಿರುವುದರಿಂದ ವಕೀಲರಲ್ಲಿ ಉಲ್ಲಾಸ ಮತ್ತು ಹೊಸ ಚೈತನ್ಯ ಮೂಡಲಿದೆ. ದೈಹಿಕ ಶಕ್ತಿಯನ್ನು ವೃದ್ಧಿಸಿಕೊಳ್ಳಲು ಕ್ರೀಡೆ ಅತ್ಯಂತ ಮುಖ್ಯವಾಗಿದೆ. ವಕೀಲರು ಕ್ರೀಡಾ ಸ್ಪೂರ್ತಿಯಿಂದ ಕ್ರಿಕೆಟ್‌ ಪಂದ್ಯಾವಳಿಯಲ್ಲಿ ಭಾಗಿಯಾಗಬೇಕು. ಸೋಲು ಗೆಲುವು ಜೀವನದಲ್ಲಿ ಸಾಮಾನ್ಯ, ಗೆದ್ದಾಗ ಹಿಗ್ಗದೇ ಸೋತಾಗ ಕುಗ್ಗದೇ ತಮ್ಮ ಕೆಲಸಗಳನ್ನು ಸರಿಯಾಗಿ ಮಾಡಬೇಕಾದುದ್ದು ನಮ್ಮೆಲ್ಲರ ಕರ್ತವ್ಯವಾಗಿದೆ. ಪ್ರಕರಣಗಳು, ಧಾವೆ, ಪೊಲೀಸ್‌ ಠಾಣೆಯಲ್ಲಿಯೇ ಮುಳುಗುವ ವಕೀಲರಿಗೆ ಕ್ರಿಕೆಟ್‌ ಪಂದ್ಯಾವಳಿಯು ಹೊಸ ಚೈತನ್ಯ ನೀಡಲಿದೆ ಎಂದರು.

ಹಿರಿಯ ಸಿವಿಲ್‌ ನ್ಯಾಯಾಧೀಶ ಎಂ.ಮಂಜುನಾಥ್‌ ಮಾತನಾಡಿ ಕ್ರೀಡಾ ಚಟುವಟಿಕೆಯಿಂದ ಸೌಹಾರ್ದ ಮನೋಭಾವನೆ ಮೂಡುತ್ತದೆ. ವಕೀಲರಲ್ಲಿ ಒಗ್ಗಟ್ಟು ಮೂಡಿಸಲು ಕ್ರಿಕೆಟ್‌ ಪಂದ್ಯಾವಳಿ ಉಪಯುಕ್ತವಾಗಿದೆ. 90ಕ್ಕೂ ಹೆಚ್ಚು ಮಂದಿ ವಕೀಲರು ಕ್ರಿಕೆಟ್‌ ಪಂದ್ಯಾವಳಿಯಲ್ಲಿ ನೊಂದಣಿಯಾಗಿರುವುದು ಶ್ಲಾಘನೀಯ ಎಂದರು.

ADVERTISEMENT

ವಕೀಲರ ಸಂಘದ ಅಧ್ಯಕ್ಷ ಪ್ರಕಾಶ್‌ ಪಟಾಪಟ್‌ ಮಾತನಾಡಿ ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ವಕೀಲರಲ್ಲಿ ಐಕ್ಯತೆ ಮೂಡಿಸುತ್ತದೆ. ತಂಡಗಳು ಕ್ರೀಡಾ ಸ್ಪೂರ್ತಿಯಿಂದ ಪಾಲ್ಗೊಳ್ಳಬೇಕು. ಎಎಪಿಎಲ್‌ ಕ್ರಿಕೆಟ್‌ ಪಂದ್ಯಾವಳಿಯು 8 ಓವರ್‌ಗಳು ಪಂದ್ಯಾವಳಿಯಾಗಿದ್ದು ಸೋಮವಾರ ಬುಧವಾರದವರೆಗೆ ಪಂದ್ಯಗಳು ನಡೆಯುತ್ತವೆ. ಬುಧವಾರ ಫೈನಲ್‌ ಪಂದ್ಯಾವಳಿಯಿರುತ್ತದೆ. ಪ್ರತಿ ದಿನ ಐದು ಪಂದ್ಯಗಳು ನಡೆಯುತ್ತವೆ. 93 ಮಂದಿ ಆಟಗಾರರು ಪಂದ್ಯದಲ್ಲಿ ಭಾಗಿಯಾಗಿದ್ದಾರೆ ಎಂದರು.

ಆನೇಕಲ್‌ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಕೃಷ್ಣರಾಜ್‌, ಡಿ.ವಿ.ಶಂಕರರೆಡ್ಡಿ, ಎಸ್‌.ಕೆ.ಜನಾರ್ಧನ್‌, ವಕೀಲರ ಸಂಘದ ಉಪಾಧ್ಯಕ್ಷ ಹರೀಶ್‌ ಕುಮಾರ್, ಖಜಾಂಚಿ ಶಾರದಮಣಿ, ಕ್ರೀಡಾ ಕಾರ್ಯದರ್ಶಿಗಳಾದ ಪ್ರವೀಣ್‌ ಕುಮಾರ್, ತಿಮ್ಮರಾಜು, ನಾಗರಾಜು, ಕಾರ್ಯಕಾರಿ ಸಮಿತಿ ಸದಸ್ಯರಾದ ಕೆ.ಮೋಹನ್‌ ಕಾಂತ, ನಾರಾಯಣಸ್ವಾಮಿ, ಸತೀಶ್‌, ಪುರುಷೋತ್ತಮ್‌, ಮೋಹನ್‌, ಉದಯ್‌ಕುಮಾರ್, ಮುರಳಿ, ಲಕ್ಷ್ಮೀ ಸಂಪತ್‌, ನೀಲಮ್ಮ, ನಾಗರತ್ನ, ನಿರ್ಮಲ, ಹಿರಿಯ ವಕೀಲರಾದದ ಎಂ.ಆರ್.ವೇಣುಗೋಪಾಲ್‌, ರಮೇಶ್, ರಾಜು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.