ಆನೇಕಲ್: ತಾಲ್ಲೂಕಿನ ಚಂದಾಪುರ-ಆನೇಕಲ್ ಮುಖ್ಯ ರಸ್ತೆಯನ್ನು ಡಾಂಬರೀಕರಣ ಮಾಡಬೇಕೆಂದು ಒತ್ತಾಯಿಸಿ ಚಂದಾಪುರ ನಿವಾಸಿಗಳು ಮತ್ತು ಸ್ಥಳೀಯರು ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ಚಂದಾಪುರ ನಿವಾಸಿಗಳು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆಯಿತು. ಸಾರ್ವಜನಿಕರ ರಸ್ತೆ ತಡೆಯಿಂದ ವಾಹನ ದಟ್ಟಣೆ ಹೆಚ್ಚಾಗಿತ್ತು. ವಾಹನಗಳು ಕಿ.ಮೀ. ಗಟ್ಟಲೆ ನಿಂತಿದ್ದವು.
ಲೋಕೋಪಯೋಗಿ ಇಲಾಖೆಯ ವಿರುದ್ಧ ಕಾರ್ಯಕರ್ತರು ಮತ್ತು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು. ಆಮೆಗತಿಯಲ್ಲಿ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ವೇಗ ನೀಡಬೇಕು. ಧೂಳು ಭಾಗ್ಯ, ಗುಂಡಿ ಭಾಗ್ಯ ಕೊಟ್ಟ ಸರ್ಕಾರ ಮತ್ತು ಲೋಕೋಪಯೋಗಿ ಇಲಾಖೆಗೆ ಧಿಕ್ಕಾರ ಎಂಬ ಘೋಷಣೆಗಳು ಮೊಳಗಿದವು.
ನಮ್ಮ ರಸ್ತೆ ನಮ್ಮ ಹಕ್ಕು ಘೋಷಣೆಗಳನ್ನು ಕೂಗಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಎರಡು ತಿಂಗಳು ಕಳೆದರೂ ಕಾಮಗಾರಿಗೆ ವೇಗ ದೊರೆಯುತ್ತಿಲ್ಲ ಎಂಬುದು ಸ್ಥಳೀಯರ ಆಕ್ರೋಶವಾಗಿತ್ತು.
ಚಂದಾಪುರ-ಆನೇಕಲ್ ರಸ್ತೆ ಕಾಮಗಾರಿಯನ್ನು ಲೋಕೋಪಯೋಗಿ ಇಲಾಖೆಯು ಎರಡು ತಿಂಗಳಿನಿಂದ ಆಮೆಗತಿಯ ನಡೆಸುತ್ತಿದೆ. ಈ ರಸ್ತೆಯಲ್ಲಿ ಸಂಚರಿಸುವುದರಿಂದ ಬೆನ್ನು ನೋವು ಖಚಿತ, ಧೂಳಿನ ಆಲರ್ಜಿ ಉಚಿತವಾಗಿ ಬರುತ್ತದೆ. ಸಾರ್ವಜನಿಕರು ತೆರಿಗೆ ಪಾವತಿಸುತ್ತಿದ್ದಾರೆ ಇಂತಹ ಗುಂಡಿ ಬಿದ್ದ ರಸ್ತೆಗಳಲ್ಲಿ ಸಂಚರಿಸಲು ಯಾವ ಪುರುಷಾರ್ಥಕ್ಕಾಗಿ ತೆರಿಗೆ ಪಾವತಿಸಬೇಕು ಎಂದು ಬನಹಳ್ಳಿಯ ಬಿ.ಬಿ.ಐ.ಮುನಿರೆಡ್ಡಿ ಕಿಡಿಕಾರಿದರು.
ಚಂದಾಪುರ ಮುಖ್ಯ ರಸ್ತೆಯ ಎರಡು ಪಥಗಳನ್ನು ಅಗೆಯಲಾಗಿದೆ. ಎರಡು ತಿಂಗಳಿನಿಂದ ಲೋಕೋಪಯೋಗಿ ಇಲಾಖೆ ಕೆಲಸ ಮಾಡುತ್ತಿದೆ. ಎರಡು ಕಿ.ಮೀ. ರಸ್ತೆ ಮಾಡಲು ಎರಡು ತಿಂಗಳು ಬೇಕೇ? ಎಂದು ಪ್ರಶ್ನಿಸಿದರು.
ರಸ್ತೆಯಲ್ಲಿ ಜಲ್ಲಿ ಹಾಕಿರುವುದರಿಂದ ರಸ್ತೆಯಲ್ಲಿ ಸಂಚರಿಸುವುದೇ ಕಷ್ಟವಾಗಿದೆ. ಈ ರಸ್ತೆಯಲ್ಲಿ ಸಂಚರಿಸುವವರ ಶಾಪ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ತಟ್ಟದೆ ಇರುವುದಿಲ್ಲ. ಆನೇಕಲ್‌ಗೆ ತೆರಳುವ ಬಹುತೇಕ ಅಧಿಕಾರಿಗಳು ಈ ರಸ್ತೆಯಲ್ಲಿ ಸಂಚರಿಸುತ್ತಾರೆ. ಆದರೂ ರಸ್ತೆ ಅಭಿವೃದ್ಧಿಗೆ ಏಕೆ ಹಿಂಜರಿಯುತ್ತಿದ್ದಾರೆ ಎಂದು ಹೇಳಿದರು.
ಚಂದಾಪುರ ಮುಖ್ಯ ರಸ್ತೆ ಹದಗೆಟ್ಟಿರುವುದರಿಂದ ರಸ್ತೆ ದಟ್ಟಣೆ ಹೆಚ್ಚಾಗಿದೆ. ಈ ಎರಡು ಕಿ.ಮೀ. ಸಂಚರಿಸಲು ಗಂಟೆ ಗಟ್ಟಲೇ ಸಮಯ ಹಿಡಿಯುತ್ತಿದೆ. ನಗರೀಕರಣ ಪ್ರಭಾವ ಮತ್ತು ಕೈಗಾರಿಕೆ ಹೆಚ್ಚಿರುವುದರಿಂದ ಜನ ಸಂಚಾರ ಹೆಚ್ಚಿದೆ. ವಾಹನಗಳೂ ಹೆಚ್ಚಿವೆ. ಹಾಗಾಗಿ ರಸ್ತೆಯನ್ನು ತ್ವರಿತವಾಗಿ ಅಭಿವೃದ್ಧಿ ಪಡಿಸಬೇಕು. ಮಹಿಳೆಯರು ಈ ರಸ್ತೆಯಲ್ಲಿ ಸಂಚರಿಸಲು ಸಹ ಸಾಧ್ಯವಾಗುತ್ತಿಲ್ಲ. ಈ ರಸ್ತೆಯಲ್ಲಿರುವ ಅಂಗಡಿಗಳು ಧೂಳಿನಿಂದ ಕೂಡಿದೆ. ಹಾಗಾಗಿ ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕು ಎಂದು ಮುಖಂಡ ಎಸ್.ಆರ್.ಟಿ.ಅಶೋಕ್ ರೆಡ್ಡಿ ಒತ್ತಾಯಿಸಿದರು.
ಮುಖಂಡರಾದ ನಾಗೇಶ್ ರೆಡ್ಡಿ, ವರದರಾಜು, ಸೋಮಶೇಖರರೆಡ್ಡಿ, ವಿಶ್ವನಾಥರೆಡ್ಡಿ, ಕೃಷ್ಣಾರೆಡ್ಡಿ, ನಾರಾಯಣಪ್ಪ, ಶಶಿಧರ್, ಪ್ರಶಾಂತ್, ರಮೇಶ್, ಪ್ರವೀಣ್, ಕೀರ್ತಿ ಇದ್ದರು.
ಆನೇಕಲ್ ತಾಲ್ಲೂಕಿನಲ್ಲಿ ರಸ್ತೆಯಲ್ಲಿ ಸಂಚರಿಸಲು ನರಕ ತೋರಿಸುತ್ತಿರುವ ಲೋಕೋಪಯೋಗಿ ಇಲಾಖೆ ಕ್ರಮ ವಹಿಸದಿದ್ದರೆ ಹೋರಾಟವನ್ನು ತೀವ್ರಗೊಳಿಸಲಾಗುವುದು. ಗ್ರಾಮ ಗ್ರಾಮಗಳಲ್ಲಿ ಹೋರಾಟ ರೂಪಿಸಲಾಗುವುದು.ಮುರಳಿ ಸ್ಥಳೀಯ ಮುಖಂಡ
ಮತ್ತೆ ಬಂದ ಮಾಸ್ಕ್
ವಾಹನ ಸವಾರರು ಈ ರಸ್ತೆಯಲ್ಲಿ ಸಂಚರಿಸಲು ಪರದಾಡುತ್ತಿದ್ದಾರೆ. ಶಾಲಾ–ಕಾಲೇಜುಗಳಿಗೆ ತೆರಳುವವರು ಪರದಾಡುತ್ತಿದ್ದಾರೆ. ಯುಜಿಡಿ ಇತರೆ ಕೇಬಲ್ ಎಂಬ ಕಾರಣಕ್ಕೆ ಕಾಮಗಾರಿಯನ್ನು ಆಮೆಗತಿಯಲ್ಲಿ ಸಾಗುತ್ತಿದೆ. ಗುತ್ತಿಗೆದಾರರು ನಿರ್ಲಕ್ಷ್ಯ ವಹಿಸದೇ ಕಾಮಗಾರಿಗೆ ವೇಗ ನೀಡಬೇಕು. ಕೊರೊನಾ ನಂತರ ಚಂದಾಪುರ ಜನತೆ ಮಾಸ್ಕ್‌ಗಳನ್ನು ಮರೆತಿದ್ದರು ರಸ್ತೆ ಸಮಸ್ಯೆಯಿಂದ ಮಾಸ್ಕ್‌ಗಳು ಮತ್ತೆ ಬಂದಿವೆ ಎಂದು ಸ್ಥಳೀಯ ಮುಖಂಡ ಮುರಳಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.