
ಆನೇಕಲ್: ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ವೈದ್ಯನನ್ನು ಪೊಲೀಸರು ವಾರವಾದರೂ ಬಂಧಿಸಿಲ್ಲ ಎಂದು ಆರೋಪಿಸಿ ಕನ್ನಡಪರ ಮತ್ತು ಮಹಿಳಾ ಪರ ಸಂಘಟನೆಗಳ ಪದಾಧಿಕಾರಿಗಳು ಪಟ್ಟಣದಲ್ಲಿ ಬುಧವಾರ ಪ್ರತಿಭಟನೆ ನಡೆಸಿದರು. ವೈದ್ಯನ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ನ.11ರಂದು ಸ್ಕ್ಯಾನಿಂಗ್ ಕೇಂದ್ರಕ್ಕೆ ಬಂದಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ್ದ ರೇಡಿಯೋಲಜಿಸ್ಟ್ ಜಯಕುಮಾರ್ ವಿರುದ್ಧ ದೂರು ದಾಖಲಾಗಿ ವಾರವಾದರೂ ಆರೋಪಿಯನ್ನು ಪೊಲೀಸರು ಬಂಧಿಸಿಲ್ಲ. ಆರೋಪಿ ನಾಲ್ಕು ಸ್ಕ್ಯಾನಿಂಗ್ ಕೇಂದ್ರ ಹೊಂದಿದ್ದು ಪರವಾನಗಿ ರದ್ದು ಮಾಡಬೇಕು ಮತ್ತು ಆರೋಪಿಯನ್ನು ಗಡಿಪಾರು ಮಾಡಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ ಶಿವರಾಮೇಗೌಡ ಬಣದ ರಾಜ್ಯ ಉಪಾಧ್ಯಕ್ಷ ಲೋಕೇಶ್ ಗೌಡ ಒತ್ತಾಯಿಸಿದರು.
ಆರೋಪಿಯನ್ನು ಬಂಧಿಸಲು ಪೊಲೀಸರು ಒಂದು ವಾರ ಸಮಯ ಕೇಳಿದ್ದಾರೆ. ಒಂದು ವೇಳೆ ಆರೋಪಿಯನ್ನು ಬಂಧಿಸದಿದ್ದರೆ ಆನೇಕಲ್ ಬಂದ್ ಮಾಡಲಾಗುವುದು ಎಂದರು.
ಆರೋಪಿಯು ತಲೆಮರೆಯಿಸಿಕೊಂಡಿದ್ದು ಬಂಧನಕ್ಕೆ ಎರಡು ತಂಡಗಳನ್ನು ರಚಿಸಲಾಗಿದೆ. ಎರಡು ತಂಡಗಳು ಚುರುಕಾಗಿ ಕೆಲಸ ಮಾಡುತ್ತಿದ್ದ ಮುಂದಿನ ನಾಲ್ಕೈದು ದಿನಗಳಲ್ಲಿ ಆರೋಪಿಯನ್ನು ಬಂಧಿಸಲಾಗುವುದು ಎಂದು ಹೆಚ್ಚುವರಿ ಎಸ್‌ಪಿ ನಾಗರಾಜ್ ಭರವಸೆ ನೀಡಿದರು.
ಕನ್ನಡ ಸಾಹಿತ್ಯ ಪರಿಷತ್ ತಾಲ್ಲೂಕು ಅಧ್ಯಕ್ಷ ಆದೂರು ಪ್ರಕಾಶ್, ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಕಾರ್ಯಾಧ್ಯಕ್ಷ ಮಂಜುನಾಥ್, ತಾಲ್ಲೂಕು ಅಧ್ಯಕ್ಷ ಕನ್ನಡ ಮರಿ, ನಗರ ಅಧ್ಯಕ್ಷ ಆನಂದ್, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಷಬೀರ್, ಯುವ ಘಟಕದ ಅಧ್ಯಕ್ಷ ಮುಸ್ತಾಕ್, ಮುಖಂಡರಾದ ಫೈರೋಜ್, ವಿಜಿ, ಚಂದ್ರು, ಬಾಲು, ಪುರುಷೋತ್ತಮ್, ವಿಜಿ ಇದ್ದರು.