ಆನೇಕಲ್ : ಸರ್ಜಾಪುರ ಹೋಬಳಿ ಭೂಸ್ವಾಧೀನ ವಿರೋಧಿ ಹೋರಾಟ ಮತ್ತು ಅಹೋರಾತ್ರಿ ಧರಣಿ ಮುಂದುವರಿದಿದ್ದು ಸರ್ಜಾಪುರ ಹೋಬಳಿ ಜಮೀನುಗಳು ಬಂಜರು ಭೂಮಿಯೋ ಅಥವಾ ಫಲವತ್ತಾದ ಭೂಮಿಯೋ ಎಂಬ ಬಗ್ಗೆ ಸರ್ವೆ ಮಾಡಿ ವರದಿ ನೀಡುವಂತೆ ರೈತರು ಮಂಗಳವಾರ ಕಂದಾಯ ಇಲಾಖೆಯ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಆನೇಕಲ್ ತಾಲ್ಲೂಕು ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ಸದಸ್ಯರು 14 ದಿನಗಳಿಂದ ಅಹೋರಾತ್ರಿ ಧರಣಿ ಮುತ್ತಾನಲ್ಲೂರಿಗೆ ಬಂದ ಕಂದಾಯ ಇಲಾಖೆಯ ಉಪ ತಹಶೀಲ್ದಾರ್ ಮಂಜುನಾಥರೆಡ್ಡಿ ಮತ್ತು ರಾಜಸ್ವ ನಿರೀಕ್ಷಕ ಪ್ರಶಾಂತ್ ಅವರಿಗೆ ರೈತರು ಮನವಿ ಸಲ್ಲಿಸಿ ಈ ಬೇಡಿಕೆ ಮುಂದಿಟ್ಟರು.
ಸರ್ಜಾಪುರ ಹೋಬಳಿಯ ಸೊಳ್ಳೆಪುರ, ಹಂದೇನಹಳ್ಳಿ, ಮುತ್ತಾನಲ್ಲೂರು, ಅಮಾನಿಕೆರೆ, ಬಿ.ಹೊಸಹಳ್ಳಿ, ಎಸ್.ಮೇಡಹಳ್ಳಿ, ಬಿಕ್ಕನಹಳ್ಳಿ, ಮುತ್ತಾನಲ್ಲೂರು, ಚಿಕ್ಕತಿಮ್ಮಸಂದ್ರ, ಕೊಮ್ಮಸಂದ್ರ, ಸಮನಹಳ್ಳಿ, ಅಡಿಗಾರಕಲ್ಲಹಳ್ಳಿ ಗ್ರಾಮಗಳ ಭೂಮಿಯನ್ನು ಕಂದಾಯ ಇಲಾಖೆ ಸರ್ವೆ ಮಾಡಿ ಭೂಮಿಯ ಫಲವತ್ತತೆಯ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಬೇಕು ಎಂದರು.
ಕೈಗಾರಿಕೆಗಳಿಗೆ ಕೃಷಿ ಭೂಮಿ ನೀಡದಿರುವ ನಿರ್ಧಾರದಲ್ಲಿ ಯಾವುದೇ ಬದಲಾವಣೆ ಇಲ್ಲ. ಯಾವುದೇ ಕಾರಣಕ್ಕೂ ಕೆಐಎಡಿಬಿಗೆ ಜಮೀನು ನೀಡುವುದಿಲ್ಲ ಎಂದು ರೈತರು ಸ್ಪಷ್ಟವಾಗಿ ತಿಳಿಸಿದರು.
ಭೂಮಿಯ ಫಲವತ್ತತೆ ಸ್ಥಿತಿ ಮತ್ತು ಬೆಳೆ ದಾಖಲೆಗೆ ಕಂದಾಯ ಇಲಾಖೆ ಮತ್ತು ಭೂದಾಖಲೆ ಇಲಾಖೆ ಜಂಟಿ ಸರ್ವೆ ನಡೆಸಬೇಕು. ಇದರಿಂದ ಫಲವತ್ತಾದ ಭೂಮಿ ಬಗ್ಗೆ ಮಾಹಿತಿ ದೊರೆಯುತ್ತದೆ. ಪರಿಸರ ಪ್ರಭಾವ ಮತ್ತು ಸಾಮಾಜಿಕ ಪ್ರಭಾವ ಅರಿಯದೇ ಸರ್ಕಾರ ಏಕಾಏಕಿ ಕೆಐಎಡಿಬಿಗೆ ಕೃಷಿ ಜಮೀನು ನೀಡಲು ಮುಂದಾಗಿರುವುದು ಖಂಡನೀಯ ಎಂದು ರೈತ ಮುಖಂಡ ವಿಶ್ವನಾಥ ರೆಡ್ಡಿ ಹೇಳಿದರು.
ಸರ್ಜಾಪುರ ಹೋಬಳಿಯ ಭೂಮಿಯು ರೈತರ ಹಕ್ಕು ಮತ್ತು ಅಸ್ಮಿತೆಯಾಗಿದೆ. ಯಾವುದೇ ಕಾರಣಕ್ಕೂ ಒಂದಿಂಚೂ ಭೂಮಿಯನ್ನು ಸಹ ನೀಡುವುದಿಲ್ಲ ಎಂಬ ತೀರ್ಮಾನವನ್ನು ರೈತರು ತೆಗೆದುಕೊಂಡಿದ್ದಾರೆ. ಕಂದಾಯ ಇಲಾಖೆ ಮೂಲಕ ಮುಖ್ಯಮಂತ್ರಿ ಮತ್ತು ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಬೇಡಿಕೆ ಈಡೇರುವವರೆಗೂ ಹೋರಾಟ ಮತ್ತು ಅಹೋರಾತ್ರಿ ಧರಣಿ ಮುಂದುವರೆಯಲಿದೆ ಎಂದರು.
ಸುಧಾಕರ್, ನಂಜುಂಡರೆಡ್ಡಿ, ಜಿ.ಗೋಪಾಲ್, ಚಿನ್ನಪ್ಪ ವೈ.ಚಿಕ್ಕಹಾಗಡೆ, ಸೋಮಶೇಖರ್, ಚಂದ್ರಶೇಖರ್, ಕಲಾವತಿ, ಸುನಂದಮ್ಮ, ಗೌರಮ್ಮ, ಮಂಜುನಾಥ್, ಕೇಶವ, ಕೃಷ್ಣಾರೆಡ್ಡಿ, ಜನಾರ್ಧನ್, ಮಂಜುಳ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.