ಆನೇಕಲ್: ತಾಲ್ಲೂಕಿನ ಸರ್ಜಾಪುರ ಹೋಬಳಿಯಲ್ಲಿ ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ತಾಲ್ಲೂಕು ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ವತಿಯಿಂದ ಶುಕ್ರವಾರ ಬೈಕ್ ರ್‍ಯಾಲಿ ನಡೆಯಿತು.
ಆನೇಕಲ್ ತಾಲ್ಲೂಕಿನ ಕೊಮ್ಮಸಂದ್ರದ ಬಯಲು ಬಸವೇಶ್ವರ ಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ರ್‍ಯಾಲಿ ಆರಂಭಿಸಿದ ರೈತರು ಫ್ರೀಡಂಪಾರ್ಕ್‌ವರೆಗೂ ಬೈಕ್, ಕಾರು, ಬಸ್‌ಗಳಲ್ಲಿ ತೆರಳಿ ಬೃಹತ್ ಪ್ರತಿಭಟನೆ ನಡೆಸಿದರು. ಶಾಸಕ ಬಿ.ಶಿವಣ್ಣ, ವಿಧಾನ ಪರಿಷತ್ ಸದಸ್ಯ ಗೋಪಿನಾಥರೆಡ್ಡಿ, ಬಮೂಲ್ ನಿರ್ದೇಶಕ ಆರ್.ಕೆ.ರಮೇಶ್ ಸೇರಿದಂತೆ ಸಾವಿರಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಹಸಿರು ಶಾಲು ಹೊದ್ದ ರೈತರು ಜೈ ಜವಾನ್ ಜೈ ಕಿಸಾನ್, ಪ್ರಾಣ ಕೊಟ್ಟೆವು ಭೂಮಿ ಕೊಡೆವು ಎಂಬ ಘೋಷ ವಾಕ್ಯಗಳು ಮೊಳಗಿದವು. ಪ್ರತಿಭಟನೆಯಿಂದಾಗಿ ಮುತ್ತಾನಲ್ಲೂರು, ದೊಮ್ಮಸಂದ್ರ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿತ್ತು. ವಾಹನ ನಿಯಂತ್ರಣಕ್ಕೆ ಪೊಲೀಸರು ಹರಸಾಹಸಪಟ್ಟರು.
ಮಹಿಳಾ ರೈತರಿಂದ ಪಂಜಿನ ಮೆರವಣಿಗೆ: ಕೆಐಎಡಿಬಿಯಿಂದ ಭೂಸ್ವಾಧೀನ ಪ್ರಕ್ರಿಯೆಯನ್ನು ವಿರೋಧಿಸಿ ಮತ್ತು ರೈತರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ತಾಲ್ಲೂಕಿನ ಹಂದೇನಹಳ್ಳಿಯಲ್ಲಿ ಮಹಿಳೆಯರು ಪಂಜಿನ ಮೆರವಣಿಗೆ ನಡೆಸಿ ಜಾಗೃತಿ ಮೂಡಿಸಿದರು.
ಶಾಸಕ ಬಿ.ಶಿವಣ್ಣ ಮಾತನಾಡಿ, ಆನೇಕಲ್ ತಾಲ್ಲೂಕಿನಲ್ಲಿ ಈಗಾಗಲೇ ವಿವಿಧ ಕಾರಣಗಳಿಂದಾಗಿ ಭೂಸ್ವಾಧೀನ ಹೆಚ್ಚಾಗಿದೆ. ಈಗ ಮತ್ತೆ ಕೈಗಾರಿಕೆಗಳ ಕಾರಣದಿಂದಾಗಿ ಕೃಷಿ ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುತ್ತಿರುವ ಕ್ರಮ ಖಂಡನೀಯ. ರೈತರ ವಿಶ್ವಾಸ ಪಡೆದು ಅಧಿಕಾರಿಗಳು ಕ್ರಮ ವಹಿಸಬೇಕು. ಭೂಸ್ವಾಧೀನ ಪ್ರಕ್ರಿಯೆಯಿಂದ ರೈತರಿಗಾಗುವ ತೊಂದರೆ ಬಗ್ಗೆ ಸರ್ಕಾರಕ್ಕೆ ತಿಳಿಸಲಾಗುವುದು ಎಂದರು.
ವಿಧಾನ ಪರಿಷತ್ ಸದಸ್ಯ ಎಚ್.ಎಸ್.ಗೋಪಿನಾಥರೆಡ್ಡಿ ಮಾತನಾಡಿ, ಆನೇಕಲ್ ತಾಲ್ಲೂಕಿನಲ್ಲಿರುವ ಐದು ಕೈಗಾರಿಕಾ ಪ್ರದೇಶಗಳಲ್ಲಿಯೇ ಸರಿಯಾದ ಮೂಲಸೌಲಭ್ಯ ನೀಡುತ್ತಿಲ್ಲ. ಈಗ ಮತ್ತೊಂದು ಕೈಗಾರಿಕಾ ಪ್ರದೇಶ ಸ್ಥಾಪಿಸುವಲ್ಲಿ ಯಾವುದೇ ಅರ್ಥವಿಲ್ಲ. ಬೆಂಗಳೂರು ನೂರು ಕಿಮೀ ವ್ಯಾಪ್ತಿಯಲ್ಲಿ ಆನೇಕಲ್ ತಾಲ್ಲೂಕು ಹೊರತುಪಡಿಸಿ ಹಲವಾರು ಸ್ಥಳಗಳಿವೆ. ಈ ಬಗ್ಗೆ ಸರ್ಕಾರ ಮರುಪರಿಶೀಲನೆ ನಡೆಸಬೇಕು. ಕೆಐಎಡಿಬಿಯು ಕೈಗಾರಿಕಾ ಪ್ರದೇಶ ಸ್ಥಾಪನೆಯ ವೇಳೆ ಯಾವ ಅಭಿಪ್ರಾಯ ಪಡೆಯದೆ ಏಕಾಏಕಿ ರೈತರ ಭೂಮಿ ಕಸಿಯುವುದು ಒಳ್ಳೆಯ ಬೆಳವಣಿಗೆಯಲ್ಲ. ರೈತರನ್ನು ಒಕ್ಕಲೆಬ್ಬಿಸಲು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಸಮತೋಲನ ಕಾಪಾಡಲು ಕೈಗಾರಿಕೆಗಳ ಜೊತೆಗೆ ಕೃಷಿ ಭೂಮಿಯೂ ಅಗತ್ಯ ಎಂದು ತಿಳಿಸಿದರು.
ರೈತ ಮಹಿಳೆಯೊಬ್ಬರು ಪ್ರಜಾವಾಣಿಯೊಂದಿಗೆ ಮಾತನಾಡಿ, ಸರ್ಕಾರ ಸರ್ಜಾಪುರ ಹೋಬಳಿಯನ್ನು ಸ್ವಿಫ್ಟ್ ಸಿಟಿ ಮಾಡಲು ಹೋಗಿ ರೈತರ ಭೂಮಿಯನ್ನು ಸಂಪೂರ್ಣವಾಗಿ ಗುಡಿಸಲು ಹುನ್ನಾರ ನಡೆಸಿದೆ. ಆದರೆ, ರೈತರು ಎಚ್ಚೆತ್ತುಕೊಂಡಿದ್ದು ಯಾವುದೇ ಕಾರಣಕ್ಕೂ ನಮ್ಮ ಜಮೀನು ನೀಡುವುದಿಲ್ಲ. ರಕ್ತ ಕೊಟ್ಟೆವು ಜಮೀನಿನ ಒಂದು ತುಂಡು ಸಹ ನೀಡಲಾಗುವುದಿಲ್ಲ ಎಂದರು.
ಹೋರಾಟ ಸಮಿತಿಯ ರಾಮಸ್ವಾಮಿರೆಡ್ಡಿ, ಕಾಡುಅಗ್ರಹಾರ ಜಯಪ್ರಕಾಶ್, ದೇವರಾಜ್, ಚಿನ್ನಪ್ಪ.ವೈ.ಚಿಕ್ಕಹಾಗಡೆ, ದೊಡ್ಡಹಾಗಡೆ ಶಂಕರ್, ಎಸ್.ಆರ್.ಟಿ.ಅಶೋಕ್, ವಿಶ್ವನಾಥರೆಡ್ಡಿ, ರಾಜಾರೆಡ್ಡಿ, ಕುಸುಮಧರ್, ಚಂದ್ರಾರೆಡ್ಡಿ, ಅಂಬರೀಷ್, ಮಂಜುನಾಥರೆಡ್ಡಿ, ಗೋಪಾಲರೆಡ್ಡಿ, ಮಧು, ಕುಮಾರ್, ನಾಗೇಶ್, ನವೀನ್ ಕುಮಾರ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.