ADVERTISEMENT

ಆನೇಕಲ್ | ರೈತರ ಆಕ್ರೋಶ: ಸ್ಥಳ ಪರಿಶೀಲನೆ ಕೈಬಿಟ್ಟ ಕೆಐಎಡಿಬಿ

ಜಂಟಿ ಸಮೀಕ್ಷೆಗೆ ಧರಣಿನಿರತರ ಪಟ್ಟು: ಅಹವಾಲು ಆಲಿಸಿ ಮರಳಿದ ಅಧಿಕಾರಿಗಳ ತಂಡ

​ಪ್ರಜಾವಾಣಿ ವಾರ್ತೆ
Published 10 ಸೆಪ್ಟೆಂಬರ್ 2025, 2:45 IST
Last Updated 10 ಸೆಪ್ಟೆಂಬರ್ 2025, 2:45 IST
ಆನೇಕಲ್ ತಾಲ್ಲೂಕಿನ ಹಂದೇನಹಳ್ಳಿಗೆ ಕೆಐಎಡಿಬಿ ಜಿಲ್ಲಾಧಿಕಾರಿ ದಯಾನಂದ ಭಂಡಾರಿ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿ ರೈತರ ಅಹವಾಲು ಆಲಿಸಿದರು
ಆನೇಕಲ್ ತಾಲ್ಲೂಕಿನ ಹಂದೇನಹಳ್ಳಿಗೆ ಕೆಐಎಡಿಬಿ ಜಿಲ್ಲಾಧಿಕಾರಿ ದಯಾನಂದ ಭಂಡಾರಿ ನೇತೃತ್ವದ ಅಧಿಕಾರಿಗಳ ತಂಡ ಭೇಟಿ ನೀಡಿ ರೈತರ ಅಹವಾಲು ಆಲಿಸಿದರು   

ಆನೇಕಲ್: ಕೈಗಾರಿಕೆಗಳ ಸ್ಥಾಪನೆಗಾಗಿ ಸರ್ಜಾಪುರ ಹೋಬಳಿಯಲ್ಲಿ ಭೂಸ್ವಾಧೀನಕ್ಕಾಗಿ ಮಂಗಳವಾರ ಸ್ಥಳ ಪರಿಶೀಲನೆ ಮತ್ತು ಸಮೀಕ್ಷೆಗೆ ಬಂದಿದ್ದ ಕರ್ನಾಟಕ ಕೈಗಾರಿಕಾ ಪ್ರದೇಶ ಅಭಿವೃದ್ಧಿ ಮಂಡಳಿ(ಕೆಐಎಡಿಬಿ) ಅಧಿಕಾರಿಗಳು ರೈತರ ಆಕ್ರೋಶ ಎದುರಿಸಬೇಕಾಯಿತು. 

ಸರ್ಜಾಪುರ ಹೋಬಳಿಯ ಬಿಕ್ಕನಹಳ್ಳಿ, ಸೊಳ್ಳೆಪುರ, ಹಂದೇನಹಳ್ಳಿ, ಮುತ್ತಾನಲ್ಲೂರು ಅಮಾನಿಕೆರೆ ಸುತ್ತಮುತ್ತ ಸ್ಥಳ ಪರಿಶೀಲನೆಗೆ ಬಂದಿದ್ದ ಅಧಿಕಾರಿಗಳ ತಂಡ ರೈತರ ವಿರೋಧದಿಂದಾಗಿ ಭೂ ಸಮೀಕ್ಷೆ ಕಾರ್ಯ ನಡೆಸದೆ ಹಿಂದಿರುಗಿದರು.

ಕೆಐಎಡಿಬಿ ಜಿಲ್ಲಾಧಿಕಾರಿ ದಯಾನಂದ ಭಂಡಾರಿ, ವಿಶೇಷ ಭೂಸ್ವಾಧೀನ ಅಧಿಕಾರಿ ತೇಜಸ್‌ ಕುಮಾರ್‌, ಕೆಐಎಡಿಬಿ ವ್ಯವಸ್ಥಾಪಕ ಮಾರುತಿ ಪ್ರಸಾದ್‌ ಮತ್ತು ತಂಡ ಸ್ಥಳ ಪರಿಶೀಲನೆಗಾಗಿ ಬಂದಿತ್ತು. ಕೆಐಎಡಿಬಿ ಅಧಿಕಾರಿಗಳ ತಂಡ ಭೇಟಿ ಹಿನ್ನೆಲೆಯಲ್ಲಿ ಹಂದೇನಹಳ್ಳಿಯಲ್ಲಿ ಬಿಗಿ ಪೊಲೀಸ್‌ ಭದ್ರತೆ ಒದಗಿಸಲಾಗಿತ್ತು.  

ADVERTISEMENT

ಹಂದೇನಹಳ್ಳಿಯ ರೈತರು ನಡೆಸುತ್ತಿರುವ ಅಹೋರಾತ್ರಿ ಹೋರಾಟ ಸ್ಥಳಕ್ಕೆ ಅಧಿಕಾರಿಗಳ ತಂಡ ಭೇಟಿ ನೀಡಿತ್ತು. ಕೃಷಿ, ತೋಟಗಾರಿಕೆ, ರೇಷ್ಮೆ ಇಲಾಖೆ ಅಧಿಕಾರಿಗಳು ಸಮೀಕ್ಷೆ ನಡೆಸಿ ವರದಿ ನೀಡಬೇಕು ಎಂದು ಧರಣಿನಿರತ ರೈತರು ಪಟ್ಟು ಹಿಡಿದರು. ಆಗ ರೈತರ ಒತ್ತಡಕ್ಕೆ ಮಣಿದ ಅಧಿಕಾರಿಗಳ ತಂಡ ಸರ್ವೆ ಮತ್ತು ಸ್ಥಳ ಪರಿಶೀಲನೆ ಕೈಬಿಟ್ಟು ಮರಳಿತು. 

ರೈತರ ಭಾವನೆ ಮತ್ತು ಮಾತುಗಳಿಗೆ ಬೆಲೆ ನೀಡಿ ಸದ್ಯಕ್ಕೆ ಸರ್ವೆ ಕಾರ್ಯ ಮಾಡುವುದಿಲ್ಲ. ರೈತರ ಬಗ್ಗೆ ಕೆಐಎಡಿಬಿಗೂ ಗೌರವವಿದೆ.  ರೈತ ಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿದೆ. ರೈತ ಬೆಳೆದರೆ ಮಾತ್ರ ಜಗತ್ತಿಗೆ ಆಹಾರ ಸಿಗುತ್ತದೆ ಎಂದು ಕೆಐಎಡಿಬಿ ಜಿಲ್ಲಾಧಿಕಾರಿ ದಯಾನಂದ ಭಂಡಾರಿ ಹೇಳಿದರು. 

ಸರ್ಜಾಪುರ ಹೋಬಳಿಯಲ್ಲಿ ರೇಷ್ಮೆ ಕೃಷಿ ಹೆಚ್ಚಾಗಿದೆ. ಫಲವತ್ತಾದ ಭೂಮಿಯನ್ನು ಕೈಗಾರಿಕೆಗಳಿಗೆ ನೀಡುವುದರಿಂದ ರೈತರು ತಮ್ಮ ಬದುಕನ್ನೇ ಬಲಿ ಕೊಟ್ಟಂತಾಗುತ್ತದೆ. ಹಾಗಾಗಿ ಸರ್ಕಾರ ಭೂಸ್ವಾಧೀನ ಪ್ರಕ್ರಿಯೆ ಬಗ್ಗೆ ಮರು ಪರಿಶೀಲನೆ ನಡೆಸಬೇಕು ಎಂದು ರೈತ ಹೋರಾಟಗಾರ ಎಚ್‌.ಆರ್‌.ಬಸವರಾಜಪ್ಪ ಮನವಿ ಮಾಡಿದರು.

ಕೆಐಎಡಿಬಿ ಮೇಲೆ ರೈತರ ವಿಶ್ವಾಸ ಕಡಿಮೆಯಾಗುತ್ತಿದೆ. ರೈತಸ್ನೇಹಿ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ರೈತ ಯಶವಂತ್‌ ಮನವಿ ಮಾಡಿದರು. ಕೆಐಎಡಿಬಿ 1,600 ಎಕರೆ ಸ್ವಾಧಿನಕ್ಕೆ ನೋಟಿಸ್‌ ನೀಡಲು ಸಿದ್ಧತೆ ನಡೆಸಿದ್ದಾರೆ. ಈ ಕ್ರಮದಿಂದ ಸರ್ಕಾರ ಹಿಂದೆ ಸರಿಯಬೇಕು ಎಂದು ಚಿನ್ನಪ್ಪ ಚಿಕ್ಕಹಾಗಡೆ ಕೋರಿದರು.

ಜಂಟಿ ಸರ್ವೆ ವರದಿ ಬರುವವರೆಗೂ ಕೆಐಎಡಿಬಿ ಸ್ಥಳ ಪರಿಶೀಲನೆ ಮಾಡಬಾರದು ಎಂದು 11 ಗ್ರಾಮಗಳ ರೈತರು ನಿರ್ಧಾರ ಕೈಗೊಂಡಿದ್ದಾರೆ. ತಾಲ್ಲೂಕು ಆಡಳಿತ ತ್ವರಿತವಾಗಿ ಜಂಟಿ ಸರ್ವೆಗೆ ಕ್ರಮ ವಹಿಸಬೇಕು ಎಂದರು.

ಭೂಸ್ವಾಧೀನ ವಿರೋಧ ಹೋರಾಟ ಸಮಿತಿಯ ವಿಶ್ವನಾಥರೆಡ್ಡಿ, ದೇವರಾಜರೆಡ್ಡಿ, ಮಧುಸೂದನ್‌ ರೆಡ್ಡಿ, ರಘು, ಕೇಶವ, ಶ್ರೀನಾಥ್‌ ರೆಡ್ಡಿ, ಸುನೀಲ್‌, ಪವನ್‌, ಮಂಜುನಾಥರೆಡ್ಡಿ, ನಾಗೇಶ್‌ ರೆಡ್ಡಿ, ಉಮಾ ಪರಶುರಾಮ್‌, ಮಂಜುಳ ಬಸವರಾಜು, ಹರೀಶ್‌, ಅಣ್ಣಯ್ಯ, ನಾಗೇಶ್‌ ಇದ್ದರು.

ಜಂಟಿ ಸಮೀಕ್ಷೆಗೆ ಒಪ್ಪಿಗೆ ಧರಣಿನಿರತ ರೈತರ ಬೇಡಿಕೆಗೆ ಮಣಿದ ಕೆಐಎಡಿಬಿ ಅಧಿಕಾರಿಗಳು ಸರ್ಜಾಪುರ ಹೋಬಳಿ ಕೃಷಿ ಭೂಮಿಯ ಜಂಟಿ ಸಮೀಕ್ಷೆ ನಡೆಸಲು ಒಪ್ಪಿಗೆ ಸೂಚಿಸಿದರು. ಕಂದಾಯ ಕೃಷಿ ರೇಷ್ಮೆ ತೋಟಗಾರಿಕೆ ಹಾಗೂ ಪಶುವೈದ್ಯಕೀಯ ಇಲಾಖೆ ಸೇರಿದಂತೆ ಸಂಬಂಧಿಸಿದ ಎಲ್ಲ ಇಲಾಖೆ ಅಧಿಕಾರಿಗಳು ಜಂಟಿ ಸಮೀಕ್ಷೆ ನಡೆಸುವಂತೆ ಪತ್ರ ಬರೆಯಲಾಗುವುದು ಕೆಐಎಡಿಬಿ ಜಿಲ್ಲಾಧಿಕಾರಿ ದಯಾನಂದ ಭಂಡಾರಿ ಭರವಸೆ ನೀಡಿದರು. ಜಂಟಿ ಸಮೀಕ್ಷೆ ನಡೆಸಲು ಬರುವ ಅಧಿಕಾರಿಗಳ ತಂಡಕ್ಕೆ ರೈತರು ಮತ್ತು ಸ್ಥಳೀಯರು ಸಹಕಾರ ನೀಡಬೇಕು ಎಂದು ಅವರು ಮನವಿ ಮಾಡಿದರು.  ಅಂತಿಮ ಅಧಿಸೂಚನೆಯಾಗಿರುವ 600 ಎಕರೆ ಭೂಮಿಯ ಪಹಣಿಯಲ್ಲಿ ಕೆಐಎಡಿಬಿ ಹೆಸರು ನಮೂದಾಗಿದೆ. ಪಹಣಿಯಲ್ಲಿ ನಮೂದಾಗಿರುವ ಕೆಐಎಡಿಬಿ ಹೆಸರು ತೆಗೆಯಲು ಎರಡರಿಂದ ಮೂರು ದಿನಗಳಲ್ಲಿ ಕ್ರಮ ವಹಿಸಲಾಗುವುದು ಎಂದು ಭರವಸೆ ನೀಡಿದರು. ಭೂಸ್ವಾಧೀನ ಕುರಿತು ನಿರ್ಮಾಣವಾಗಿರುವ ಗೊಂದಲ ಪರಿಹಾರಕ್ಕೆ ಸರ್ಕಾರದ ಮಟ್ಟದಲ್ಲಿ ಅಂತಿಮ ನಿರ್ಧಾರವಾಗಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.