ADVERTISEMENT

ಕನಕಪುರದಂತೆ ಆನೇಕಲ್‌ ಸಮಗ್ರ ಅಭಿವೃದ್ಧಿ: ಡಿ.ಕೆ. ಶಿವಕುಮಾರ್‌

ಗ್ರೇಟರ್‌ ಬೆಂಗಳೂರಿಗೆ ಆನೇಕಲ್‌ ತಾಲ್ಲೂಕು ಸೇರ್ಪಡೆ । 30 ಎಂಎಲ್‌ಡಿ ಕಾವೇರಿ ನೀರು । ಮೆಟ್ರೊ ವಿಸ್ತರಣೆ– ಡಿಸಿಎಂ ಭರವಸೆ

​ಪ್ರಜಾವಾಣಿ ವಾರ್ತೆ
Published 2 ಮೇ 2025, 13:19 IST
Last Updated 2 ಮೇ 2025, 13:19 IST
ಆನೇಕಲ್ ತಾಲ್ಲೂಕಿನ ಹೆನ್ನಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮವನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಘಾಟಿಸಿದರು
ಆನೇಕಲ್ ತಾಲ್ಲೂಕಿನ ಹೆನ್ನಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಕಾರ್ಯಕ್ರಮವನ್ನು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉದ್ಘಾಟಿಸಿದರು   

ಆನೇಕಲ್: ‘ಆನೇಕಲ್‌ ಮತ್ತು ಕನಕಪುರ ಎರಡು ಕ್ಷೇತ್ರಗಳು ನನಗೆ ಒಂದೇಯಾಗಿದೆ. ಹಾಗಾಗಿ ಸಮಗ್ರ ಅಭಿವೃದ್ಧಿಗೆ ಹಲವು ಯೋಜನೆ ರೂಪಿಸಲಾಗಿದೆ‘ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.

ತಾಲ್ಲೂಕಿನ ಹೊಸಹಳ್ಳಿಯಲ್ಲಿ ಹೆನ್ನಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ, ಉದ್ಘಾಟನೆ ಮತ್ತು ವಿವಿಧ ಯೋಜನೆಯ ಫಲಾನುಭವಿಗಳಿಗೆ ಸೌಲಭ್ಯ ವಿತರಿಸಿ ಮಾತನಾಡಿದರು.

ಆನೇಕಲ್‌ ತಾಲ್ಲೂಕನ್ನು ಗ್ರೇಟರ್‌ ಬೆಂಗಳೂರಿಗೆ ಸೇರ್ಪಡೆಗೊಳಿಸುವ ಬೇಡಿಕೆ ಇದೆ. ರಾಜ್ಯಪಾಲರು ಗ್ರೇಟರ್‌ ಬೆಂಗಳೂರಿಗೆ ಅನುಮತಿ ನೀಡಿದ್ದಾರೆ. ಎಲ್ಲಾ ಪಕ್ಷದ ಶಾಸಕರ ಸಭೆ ನಡೆಸಿ ಗ್ರೇಟರ್‌ ಬೆಂಗಳೂರಿನ ಬಗ್ಗೆ ಚರ್ಚೆ ನಡೆಸಲಾಗುವುದು ಎಂದರು.

ADVERTISEMENT

ಸಂಪೂರ್ಣ ಆನೇಕಲ್‌ ತಾಲ್ಲೂಕಿಗೆ 30ಎಂಎಲ್‌ಡಿ ಕಾವೇರಿ ನೀರು ಕಲ್ಪಿಸಲು ಶನಿವಾರ ವಿಶೇಷ ಸಭೆ ನಡೆಯಲಿದೆ. ಆನೇಕಲ್‌, ಸರ್ಜಾಪುರ, ಜಿಗಣಿ, ಬನ್ನೇರುಘಟ್ಟ ಭಾಗಕ್ಕೆ ಮೆಟ್ರೊ ವಿಸ್ತರಿಸಲು ಡಿಪಿಆರ್‌ ತಯಾರಿಸಲಾಗುತ್ತಿದೆ ಎಂದು ತಿಳಿಸಿದರು.

ಹೆನ್ನಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ₹40ಕೋಟಿ ತೆರಿಗೆ ಸಂಗ್ರಹದ ಗುರಿ ಹೊಂದಿದ್ದಾರೆ. ₹25 ಕೋಟಿ  ಸಂಗ್ರಹವಾಗಿದೆ. ₹5.13ಕೋಟಿ ವೆಚ್ಚದಲ್ಲಿ 779 ಮಂದಿ ಫಲಾನುಭವಿಗಳಿಗೆ ಸೌಲಭ್ಯ ಕಲ್ಪಿಸಿರುವುದು ಶ್ಲಾಘನೀಯ. 78 ಕಾಮಗಾರಿಗಳಿಗೆ ಶಂಕುಸ್ಥಾಪನೆ ಮಾಡಲಾಗಿದೆ. 78 ಮಂದಿ ರೈತರಿಗೆ ₹75 ಸಾವಿರ ವೆಚ್ಚದ ಹಸು ನೀಡಿದ್ದಾರೆ. ಲಾಟರಿ ಮೂಲಕ ಅರ್ಹ ಫಲಾನುಭವಿಗಳನ್ನು ಆಯ್ಕೆ ಮಾಡಿರುವುದು ಖುಷಿಯ ವಿಚಾರವಾಗಿದೆ ಎಂದು ಹೇಳಿದರು.

ಸೇವೆಯೇ ಮಾನದಂಡ: ವಿಲಾಸ್‌ ರಾವ್ ದೇಶಮುಖ್‌ ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ಮುಖ್ಯಮಂತ್ರಿಯಾಗಿದ್ದರು. ಬಿ.ಡಿ.ಜತ್ತಿ ಅವರು ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿ ದೇಶದ ರಾಷ್ಟ್ರಪತಿಯಾಗಿದ್ದರು. ಹಾಗಾಗಿ ರಾಜಕೀಯದಲ್ಲಿ ಉತ್ತಮ ಸಾಧನೆ ಮಾಡಲು ಸೇವೆಯೊಂದೇ ಮಾನದಂಡವಾಗಿದೆ. ಹಾಗಾಗಿ ಗ್ರಾಮ ಪಂಚಾಯಿತಿ ಸದಸ್ಯರು ತಮ್ಮ ವ್ಯಾಪ್ತಿಯಲ್ಲಿಉತ್ತಮ ಕಾರ್ಯ ನಿರ್ವಹಿಸಬೇಕು ಎಂದು ಸಲಹೆ ನೀಡಿದರು.

‘ಬೆಲೆ ಏರಿಕೆಯಿಂದಾಗಿ ರೈತರು ಪರದಾಡುವಂತಾಗಿದೆ. ಬೂಸಾ, ಇಂಡಿ, ಗೊಬ್ಬರ ಬೆಲೆ ಏರಿಕೆಯಾಗಿವೆ. ರೈತರಿಗೆ ಅನುಕೂಲವಾಗುವಂತೆ ಹಾಲಿನ ಪ್ರೋತ್ಸಾಹ ಬೆಲೆಯನ್ನು ₹4 ಏರಿಕೆ ಮಾಡಿದ್ದೇವೆ. ಇದನ್ನು ಅರ್ಥ ಮಾಡಿಕೊಳ್ಳದ ಬಿಜೆಪಿಯವರು ಜನಾಕ್ರೋಶ ಸಭೆ ಮಾಡುತ್ತಿದ್ದಾರೆ. ಹೆನ್ನಾಗರ ಗ್ರಾಮ ಪಂಚಾಯಿತಿಯಲ್ಲಿ ಹೈನುಗಾರಿಕೆ ಪ್ರೋತ್ಸಾಹಿಸಲು ₹5 ನೀಡುತ್ತಿರುವುದು ಶ್ಲಾಘನೀಯ ಎಂದರು.

ಸಚಿವ ರಾಮಲಿಂಗಾರೆಡ್ಡಿ, ಆನೇಕಲ್‌ ಕ್ಷೇತ್ರದ ಶಾಸಕ ಬಿ.ಶಿವಣ್ಣ, ವಿಧಾನ ಪರಿಷತ್‌ ಸದಸ್ಯ ರಾಮೋಜಿಗೌಡ, ಮಾಜಿ ಸಂಸದ ಡಿ.ಕೆ.ಸುರೇಶ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲತಾ ಕುಮಾರಿ, ಬಮೂಲ್‌ ಮಾಜಿ ಅಧ್ಯಕ್ಷ ಆರ್‌.ಕೆ.ರಮೇಶ್, ಟಿಎಪಿಸಿಎಂಎಸ್‌ ಅಧ್ಯಕ್ಷ ಎಂ.ಬಾಬುರೆಡ್ಡಿ, ಪಂಚಾಯಿತಿ ಅಧ್ಯಕ್ಷ ರಾಮಸ್ವಾಮಿರೆಡ್ಡಿ, ಸ್ಥಾಯಿ ಸಮಿತಿ ಅಧ್ಯಕ್ಷ ಕಿರಣ್‌, ಮಾಜಿ ಅಧ್ಯಕ್ಷ ಕೇಶವರೆಡ್ಡಿ, ಮುನಿರತ್ನಮ್ಮ ಮುನಿರಾಜು, ಪ್ರಸನ್ನಕುಮಾರ್‌, ಮಹೇಶ್‌ ಇದ್ದರು.

ಆನೇಕಲ್ ತಾಲ್ಲೂಕಿನ ಹೆನ್ನಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ರಾಸುಗಳನ್ನು ವಿತರಿಸಲಾಯಿತು
ಆನೇಕಲ್ ತಾಲ್ಲೂಕಿನ ಹೆನ್ನಾಗರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ತ್ರಿಚಕ್ರಗಳನ್ನು ವಿತರಿಸಲಾಯಿತು

ರಾಜ್ಯಕ್ಕೆ ಮಾದರಿ ಪಂಚಾಯಿತಿ ಹೆನ್ನಾಗರ ಗ್ರಾಮ ಪಂಚಾಯಿತಿಯು ರಾಜ್ಯಕ್ಕೆ ಮಾದರಿ ಗ್ರಾಮ ಪಂಚಾಯಿತಿಯಾಗಿದೆ. ಮಹಾತ್ಮ ಗಾಂಧೀಜಿ ಅವರ ಆಶಯಗಳನ್ನು ಈಡೇರಿಸಿದ ಕೀರ್ತಿ ಹೆನ್ನಾಗರಕ್ಕೆ ಸಲ್ಲುತ್ತದೆ. ಗ್ರಾಮ ಪಂಚಾಯಿತಿಗೆ ಪ್ರೋತ್ಸಾಹ ನೀಡಲು ಸರ್ಕಾರ ಪಂಚಾಯಿತಿ ಜೊತೆ ನಿಲ್ಲಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.

ಕಾಂಗ್ರೆಸ್‌ನದ್ದು ಬದುಕಿನ ರಾಜಕಾರಣ ‘ಬಿಜೆಪಿಯವರು ಭಾವನೆಗಳ ಮೇಲೆ ರಾಜಕಾರಣ ಮಾಡುತ್ತಾರೆ. ಕಾಂಗ್ರೆಸ್‌ನವರು ಬದುಕಿನ ಮೇಲೆ ರಾಜಕಾರಣ ಮಾಡುತ್ತೇವೆ. ಗೃಹ ಲಕ್ಷ್ಮೀ ಯೋಜನೆಯಡಿ ಆನೇಕಲ್‌ ತಾಲ್ಲೂಕಿಗೆ 16 ಕೋಟಿ ರೂ. ಹಣ ಬರುತ್ತದೆ. 1.22 ಕೋಟಿ ಮಹಿಳೆಯರಿಗೆ ಗೃಹ ಲಕ್ಷ್ಮೀ ಯೋಜನೆ ದೊರೆಯುತ್ತಿದೆ. ಗೃಹ ಜ್ಯೋತಿ ಶಕ್ತಿ ಯೋಜನೆಗಳ ಸಮರ್ಪಕ ಅನುಷ್ಠಾನವಾಗುತ್ತಿದೆ ಎಂದು ಡಿ.ಕೆ. ಶಿವಕುಮಾರ್‌ ಹೇಳಿದರು. ಪೆಟ್ರೋಲ್‌ ಡಿಸೇಲ್‌ ಬೆಲೆ ಏರಿಕೆ ಮಾಡಿರುವ ಕೇಂದ್ರದ ಬಿಜೆಪಿ ಸರ್ಕಾರ ಮುಂದಿನ ದಿನಗಳಲ್ಲಿ ಮನೆ ಕಟ್ಟಲು ಸಹ ಜಿಎಸ್‌ಟಿ ವಿಧಿಸಲಿದೆ. ಬೆಲೆ ಏರಿಕೆಗೆ ಕಾರಣರಾದವರಿಗೆ ಜನತೆ ತಕ್ಕ ಪಾಠ ಕಲಿಸಲಿದ್ದಾರೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಕಲ್ಯಾಣ ಪಥ ಯೋಜನೆಯಡಿ ಅಭಿವೃದ್ಧಿಗೆ ಕಾರ್ಯಕ್ಕೆ ಭೂಮಿ ಪೂಜೆ ನೆರವೇರಿಸಲಾಗಿದೆ ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.