ಆನೇಕಲ್: ತಾಲ್ಲೂಕಿನ ಮಂಚನಹಳ್ಳಿ ಸಮೀಪದ ಉಪಕಾರ್ ಗ್ರೀನ್ ಬಡಾವಣೆಯ ರಸ್ತೆಗಳಿಗೆ ಸಮೀಪದ ಕೆರೆ ಕೋಡಿ ನೀರು ಹರಿಯುತ್ತಿದ್ದು, ಇದನ್ನು ಸರಿಪಡಿಸಬೇಕೆಂದು ಆಗ್ರಹಿಸಿ ಬಡಾವಣೆಯ ನಿವಾಸಿಗಳು ಗುರುವಾರ ಪ್ರತಿಭಟನೆ ನಡೆಸಿದರು.
ಮಂಚನಹಳ್ಳಿಯ ಕಾಡಿ ಕೆರೆಯ ರಾಜಕಾಲುವೆಗಳು ಸ್ವಚ್ಛತೆಯಿಂದ ಕೂಡಿಲ್. ಒತ್ತುವರಿಯಾಗಿರುವುದರಿಂದ ರಾಜಕಾಲುವೆಯಲ್ಲಿ ಹರಿಯಬೇಕಾದ ನೀರು ಉಪಕಾರ್ ಬಡಾವಣೆಯ ರಸ್ತೆಯಲ್ಲಿ ಹರಿಯುತ್ತಿದೆ. ಇದರಿಂದ ಮನೆಗಳಿಗೆ ನೀರು ನುಗ್ಗುತ್ತಿವೆ. ಈ ಬಗ್ಗೆ ಹಲವಾರು ಬಾರಿ ಮಾಯಸಂದ್ರ ಗ್ರಾಮ ಪಂಚಾಯಿತಿ ಮತ್ತು ಉಪಕಾರ್ ಬಡಾವಣೆಯ ಸಿಬ್ಬಂದಿಗೆ ಮನವಿ ಸಲ್ಲಿಸಿದ್ದರೂ ಉಪಯೋಗವಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
₹40-50ಲಕ್ಷ ಹಣ ನೀಡಿ ನಿವೇಶನ ಖರೀದಿಸಿ, ಮನೆ ನಿರ್ಮಿಸಿಕೊಂಡಿದ್ದೇವೆ. ಆದರೆ ರಸ್ತೆಗೆ ಕೆರೆ ನೀರು ಹರಿಯುತ್ತಿರುವುದರಿಂದ ಪರದಾಡುವಂತಾಗಿದೆ. ಕೆರೆಯ ರಾಜಕಾಲುವೆಯ ಒತ್ತುವರಿ ತೆರವುಗೊಳಿಸಬೇಕು ಎಂದು ಉಪಕಾರ್ ಬಡಾವಣೆಯ ನಿವಾಸಿಗಳು ಒತ್ತಾಯಿಸಿದರು.
ಕಾರಿ ಕೆರೆಯ ಕೋಡಿ ನೀರು ಸಂಪೂರ್ಣವಾಗಿ ಉಪಕಾರ್ ಬಡಾವಣೆಗೆ ಹರಿಯುತ್ತಿದೆ. ಕೆರೆಯ ನೀರು ಮನೆಗಳಿಗೆ ಹರಿಯುತ್ತಿರುವುದರಿಂದ ಮನೆಗಳಲ್ಲಿ ಜೀವನ ನಡೆಸುವುದೇ ಕಷ್ಟವಾಗಿದೆ ಎಂದು ಸ್ಥಳೀಯ ಆನಂದ್ ತಿಳಿಸಿದರು.
ಮಳೆ ಬಂದರೆ ಪ್ರತಿಯೊಬ್ಬರಿಗೂ ಖುಷಿ. ಆದರೆ ಉಪಕಾರ್ ನಿವಾಸಿಗಳಿಗೆ ಮಳೆ ಬಂದರೆ ಕಷ್ಟ. ಮಳೆ ನೀರಿನೊಂದಿಗೆ ಕೊಳಚೆಯೂ ಹರಿಯುತ್ತಿದೆ. ಮನೆಗಳಲ್ಲಿ ಮಕ್ಕಳಿಗೆ ಜ್ವರ ಬರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಮಹಿಳೆಯೊಬ್ಬರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.