ಆನೇಕಲ್ : ಬೆಂಗಳೂರು ನಗರ ಜಿಲ್ಲೆಯಲ್ಲಿ ಕಳೆದ ಆರು ತಿಂಗಳಲ್ಲಿ 300 ಎಕರೆ ಸರ್ಕಾರಿ ಜಮೀನನ್ನು ಒತ್ತುವರಿ ತೆರವುಗೊಳಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಗದೀಶ್ ತಿಳಿಸಿದರು.
ಪಟ್ಟಣದ ಪುರಸಭಾ ಕಚೇರಿಯಲ್ಲಿ ಶನಿವಾರ ನಡೆದ ದಲಿತ ಸಂಘಟನೆಗಳ ಹಕ್ಕೋತಾಯಗಳ ಸಭೆಯಲ್ಲಿ ಮಾತನಾಡಿದರು.
ಆನೇಕಲ್ ತಾಲ್ಲೂಕಿನಲ್ಲಿಯೂ 68 ಎಕರೆಗಳ ಒತ್ತುವರಿ ತೆರವುಗೊಳಿಸಲಾಗಿದೆ. ಅರ್ಹ ಫಲಾನುಭವಿಗಳನ್ನು ಗುರುತಿಸಿ 94ಸಿ ಅಡಿಯಲ್ಲಿ ಹಕ್ಕುಪತ್ರ ವಿತರಿಸಲು ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ನಮೂನೆ 53 ಅಡಿಯಲ್ಲಿ ಹಕ್ಕುಪತ್ರಗಳನ್ನು ಪಡೆಯಲು ನ್ಯಾಯಾಲಯದ ಮಾರ್ಗಸೂಚಿಗಳಂತೆ ಬಗರುಕುಂ ಸಾಗುವಳಿದಾರರಿಗೆ ಅನುಕೂಲ ಮಾಡಿಕೊಡಲಾಗುವುದು ಎಂದರು.
ಮುಖಂಡರಾದ ತ್ರಿಪುರ ಸುಂದರಿ ಮಾತನಾಡಿ, ತಾಲ್ಲೂಕು ಕಚೇರಿಯಲ್ಲಿ ಬಡವರ ಕೆಲಸಗಳು ಆಗುತ್ತಿಲ್ಲ. ಜಾತಿ ಪ್ರಮಾಣ ಪತ್ರ ಪಡೆಯಲು ಅಲೆದಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ರಿಯಲ್ ಎಸ್ಟೇಟ್‌ನವರ ಕೆಲಸಗಳು ಸುಗಮವಾಗಿ ಆಗುತ್ತದೆ. ಆದರೆ ಬಡವರ, ದಲಿತರ, ರೈತರ ಕೆಲಸಗಳಿಗೆ ಅಲೆದಾಡಬೇಕಾಗಿದೆ ಎಂದು ದೂರಿದರು.
53ಸಿ ಮತ್ತು 94ಸಿ ಅಡಿಯಲ್ಲಿ ಅರ್ಜಿ ಸಲ್ಲಿಸಿದವರಿಗೆ ಹಕ್ಕುಪತ್ರಗಳನ್ನು ನೀಡಬೇಕು. ಗ್ರಾಮಗಳಲ್ಲಿನ ಸಮುದಾಯ ಭವನವನ್ನು ಅಭಿವೃದ್ಧಿ ಪಡಿಸಲು ಮತ್ತು ಮೂಲಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ವಕೀಲ ಆನಂದ ಚಕ್ರವರ್ತಿ ಒತ್ತಾಯಿಸಿದರು.
ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿಗಳ ಆದೇಶಗಳ ಬಗ್ಗೆ ತನಿಖೆ ನಡೆಸಬೇಕು. ಭ್ರಷ್ಟಾಚಾರದ ಬಗ್ಗೆ ತನಿಖೆ ನಡೆಸಬೇಕು. ರಾಯಸಂದ್ರ ಗ್ರಾಮ ಸುತ್ತಮುತ್ತ ಸುಸಜ್ಜಿತ ಅಂಗನವಾಡಿ ಕಟ್ಟಡ ನಿರ್ಮಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದರು.
ತಹಶೀಲ್ದಾರ್ ಶಶಿಧರ್ ಮಾಡ್ಯಾಳ್, ವಿಶೇಷ ತಹಶೀಲ್ದಾರ್ ಕರಿಯ ನಾಯಕ್ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಭೈರಪ್ಪ, ಭೂ ದಾಖಲೆಗಳ ಇಲಾಖೆಯ ಸಹಾಯಕ ನಿರ್ದೇಶಕ ಮದನ್, ಕ್ಷೇತ್ರ ಶಿಕ್ಷಣಾಧಿಕಾರಿ ಎನ್.ವೆಂಕಟೇಶ್, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲ್ಲೂಕು ಅಧ್ಯಕ್ಷ ಪುರುಷೋತ್ತಮ್ ರೆಡ್ಡಿ ಇದ್ದರು.
ಅಂಬೇಡ್ಕರ್ ಭವನ ಕಾಮಗಾರಿಗೆ ವೇಗ ನೀಡಬೇಕು. ಸಬ್‌ಮಂಗಲ ಗ್ರಾಮದಲ್ಲಿ ಸ್ಮಶಾನಕ್ಕೆ ರಸ್ತೆಯಿಲ್ಲ. ಇದರಿಂದಾಗಿ ಸಾರ್ವಜನಿಕರು ಪರದಾಡುವಂತಾಗಿದೆಬ್ಯಾಟರಾಜು, ಮುಖಂಡ
ಅಂಬೇಡ್ಕರ್ ಭವನ ನಿರ್ಮಾಣಕ್ಕೆ ₹7ಕೋಟಿ
ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸರ್ಕಾರ ₹7 ಕೋಟಿ ಹೆಚ್ಚುವರಿ ಅನುದಾನ ಮಂಜೂರು ಮಾಡಿದೆ. ಅತಿ ಶೀಘ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಂಬೇಡ್ಕರ್ ಭವನವನ್ನು ಉದ್ಘಾಟಿಸಲಿದ್ದಾರೆ. ಸುವರ್ಣ ಸೌಧ ನಿರ್ಮಿಸಲು ಜಾಗ ನಿಗದಿಯಾಗಿದ್ದು ಶೀಘ್ರದಲ್ಲೇ ಗುದ್ದಲಿ ಪೂಜೆ ನರವೇರಿಸಲಾಗುವುದು ಎಂದು ಶಾಸಕ ಬಿ.ಶಿವಣ್ಣ ತಿಳಿಸಿದರು.
63 ಹಕ್ಕೋತ್ತಾಯ ಮಂಡನೆ
ಏಳು ಸಂಘಟನೆಗಳ 163ಕ್ಕೂ ಹೆಚ್ಚು ಹಕ್ಕೋತಾಯಗಳ ಬಗ್ಗೆ ಸಂಘಟನೆಗಳ ಮುಖಂಡರು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ನಮೂನೆ 53 ಮತ್ತು 94 ಸಿ ಅಡಿಯಲ್ಲಿ ಹಕ್ಕುಪತ್ರಗಳನ್ನು ವಿತರಿಸಬೇಕು. ಬೆಂಗಳೂರು ದಕ್ಷಿಣ ಉಪವಿಭಾಗಾಧಿಕಾರಿ ಅಪೂರ್ವ ಬಿದರಿ ಅವರ ಆದೇಶಗಳ ಬಗ್ಗೆ ತನಿಖೆ ನಡೆಸಬೇಕು. ಆನೇಕಲ್ ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ರಾಜಕಾಲುವೆ ಗೋಮಾಳ ಕೆರೆಗಳ ಒತ್ತುವರಿಯಾಗಿದ್ದು ತಾಲ್ಲೂಕು ಆಡಳಿತ ಕ್ರಮವಹಿಸಿ ಒತ್ತುವರಿ ತೆರವುಗೊಳಿಸಬೇಕು. ತಾಲ್ಲೂಕು ಕಚೇರಿಯಲ್ಲಿ ಬಡವರ ರೈತರ ಮತ್ತು ದಲಿತರ ಕೆಲಸಗಳಿಗೆ ಆದ್ಯತೆ ನೀಡಬೇಕು. ಆನೇಕಲ್ ತಾಲ್ಲೂಕಿನ ವಿವಿಧಡೆ ಇತ್ತೀಚಿನ ದಿನಗಳಲ್ಲಿ ಅಕ್ರಮ ಮಧ್ಯ ಮಾರಾಟ ಹೆಚ್ಚಾಗಿದ್ದು ಈ ಬಗ್ಗೆ ಕ್ರಮ ವಹಿಸಬೇಕು ಎಂದು ಸಂಘಟನೆಗಳ ಮುಖಂಡರು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.