ಆನೇಕಲ್ ತಾಲ್ಲೂಕಿನ ಅತ್ತಿಬೆಲೆ ಮುಖ್ಯರಸ್ತೆಯಲ್ಲಿ ಗುಂಡಿ ಬಿದ್ದಿರುವುದು
ಆನೇಕಲ್: ತಾಲ್ಲೂಕಿನ ಅತ್ತಿಬೆಲೆಯಲ್ಲಿ ಮುಖ್ಯ ರಸ್ತೆಗಳಲ್ಲಿಯೇ ರಸ್ತೆಯಲ್ಲಿ ಗುಂಡಿ ಬಿದ್ದಿದ್ದರಿಂದ ಸಾರ್ವಜನಿಕರ ಸುಗಮ ಸಂಚಾರಕ್ಕೆ ತೊಂದರೆಯಾಗಿದೆ. ಮಳೆಯಿಂದಾಗಿ ರಸ್ತೆ ಗುಂಡಿಗಳಲ್ಲಿ ನೀರು ತುಂಬಿದ್ದು ದ್ವಿಚಕ್ರ ವಾಹನ ಸವಾರರು ವಾಹನ ಚಲಾಯಿಸಲು ಪರದಾಡುವಂತಾಗಿದೆ.
ಅತ್ತಿಬೆಲೆ ರಸ್ತೆಯಲ್ಲಿ ಗುಂಡಿಗಳೇ ಸ್ವಾಗತ ನೀಡುತ್ತಿವೆ. ಟಿವಿಎಸ್ ಕ್ರಾಸ್‌ನಿಂದ ಅತ್ತಿಬೆಲೆಗೆ ಸಂಪರ್ಕ ಕಲ್ಪಿಸುವ ರಸ್ತೆ ಅಲ್ಲಲ್ಲಿ ಗುಂಡಿಗಳು ಬಿದ್ದಿದ್ದು ಸಾರ್ವಜನಿಕರು ಓಡಾಡಲು ಸಾಧ್ಯವಾಗುತ್ತಿಲ್ಲ. ಕಾರು, ಲಾರಿಗಳು ಹಳ್ಳದಲ್ಲಿ ಬಿದ್ದು ಎದ್ದಂತೆ ಭಾಸವಾಗುತ್ತಿದೆ ಎಂದು ಕಾರು ಚಾಲಕರೊಬ್ಬರು ಪ್ರಜಾವಾಣಿಗೆ ತಿಳಿಸಿದರು.
ಅತ್ತಿಬೆಲೆಯ ಮುಖ್ಯರಸ್ತೆಯಲ್ಲಿ ಎರಡು ಕಿ.ಮೀ ಗೂ ಹೆಚ್ಚು ದೂರ ಗುಂಡಿಗಳು ತುಂಬಿವೆ. ಅತ್ತಿಬೆಲೆಗೆ ಬರುವಷ್ಟರಲ್ಲಿ ದ್ವಿಚಕ್ರ ವಾಹನ ಸವಾರರು ತಂತಿಯ ಮೇಲಿನ ನಡಿಗೆಯಂತೆ ಓಡಾಡಬೇಕಿದೆ. ಅತ್ತಿಬೆಲೆಯ ಮುಖ್ಯ ರಸ್ತೆಯಲ್ಲಿಯೇ ಗುಂಡಿಗಳು ಬಿದ್ದಿರುವುದರಿಂದ ಸಾರ್ವಜನಿಕರು ಓಡಾಡಲು ಸಮಸ್ಯೆಯಾಗುತ್ತಿದೆ. ಹಾಗಾಗಿ ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಕ್ರಮ ವಹಿಸಿ ರಸ್ತೆ ಗುಂಡಿ ಮುಚ್ಚಿಸಬೇಕು ಮತ್ತು ಸಾರ್ವಜನಿಕರ ಸುಗಮ ಸಂಚಾರಕ್ಕೆ ಅವಕಾಶ ನೀಡಬೇಕು ಎಂದು ಸ್ಥಳೀಯ ನಿವಾಸಿ ಸುನೀಲ್ ಒತ್ತಾಯಿಸಿದರು.
ಅತ್ತಿಬೆಲೆಯಿಂದ ಆನೇಕಲ್, ಬಳ್ಳೂರು ಮತ್ತು ತಮಿಳುನಾಡಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹದಗೆಟ್ಟಿದ್ದು ಸಾರ್ವಜನಿಕರ ಓಡಾಡಲಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ರಸ್ತೆ ದಟ್ಟಣೆ ಮತ್ತು ಅಪಘಾತ ಹೆಚ್ಚಾಗಿದೆ. ಹಾಗಾಗಿ ರಸ್ತೆಯನ್ನು ಅಭಿವೃದ್ಧಿ ಪಡಿಸಬೇಕು ಎಂಬುದು ಸ್ಥಳೀಯರು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.