ADVERTISEMENT

ಪುರಸಭೆ ಸದಸ್ಯ ರವಿ ಕೊಲೆ ಪ್ರಕರಣ: ಆರೋಪಿ ಕಾಲಿಗೆ ಗುಂಡೇಟು

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2024, 7:02 IST
Last Updated 1 ಆಗಸ್ಟ್ 2024, 7:02 IST
ಆನೇಕಲ್‌ ಪುರಸಭೆ ಸದಸ್ಯ ರವಿ ಕೊಲೆ ಪ್ರಕರಣದ ಆರೋಪಿ ಕಾರ್ತೀಕ ಕಾಲಿಗೆ ಪೊಲೀಸರು ಗುಂಡು ಹೊಡೆದಿದ್ದಾರೆ
ಆನೇಕಲ್‌ ಪುರಸಭೆ ಸದಸ್ಯ ರವಿ ಕೊಲೆ ಪ್ರಕರಣದ ಆರೋಪಿ ಕಾರ್ತೀಕ ಕಾಲಿಗೆ ಪೊಲೀಸರು ಗುಂಡು ಹೊಡೆದಿದ್ದಾರೆ   

ಆನೇಕಲ್: ಪುರಸಭೆ ಸದಸ್ಯ ರವಿ ಕೊಲೆ ಪ್ರಕರಣದ ಆರೋಪಿ ಕಾರ್ತೀಕ್‌ ಅಲಿಯಾಸ್‌ ಜೆಕೆಯ ಕಾಲಿಗೆ ಪೊಲೀಸರು ಮೈಸೂರಮ್ಮನ ದೊಡ್ಡಿಯ ಬಳಿ ಬುಧವಾರ ಬೆಳಗಿನ ಜಾವ ಗುಂಡು ಹೊಡೆದಿದ್ದಾರೆ.

ಜುಲೈ 24ರಂದು ಪುರಸಭೆ ಸದಸ್ಯ ರವಿ ಕೊಲೆಯಾಗಿತ್ತು. ಕೊಲೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳು ಬೆಂಗಳೂರಿನ ನ್ಯಾಯಾಲಯದಲ್ಲಿ ಶರಣಾಗಿದ್ದರು. ಕೊಲೆಯ ಮತ್ತೊಬ್ಬ ಆರೋಪಿ ಕಾರ್ತೀಕ್‌ ಅಲಿಯಾಸ್‌ ಜೆಕೆ ತಲೆಮರೆಯಿಸಿಕೊಂಡಿದ್ದರು. ಆರೋಪಿ ಬಂಧನಕ್ಕಾಗಿ ಆನೇಕಲ್‌ ಪೊಲೀಸರು ಎರಡು ತಂಡ ರಚಿಸಿಕೊಂಡು ಕಾರ್ಯಾಚರಣೆ ಕೈಗೊಂಡಿದ್ದರು.

‘ತಾಲ್ಲೂಕಿನ ಮೈಸೂರಮ್ಮನ ದೊಡ್ಡಿಯಲ್ಲಿ ಆರೋಪಿ ಇರುವ ಖಚಿತ ಮಾಹಿತಿಯ ಮೇರೆಗೆ ಬುಧವಾರ ಬೆಳಗಿನ ಜಾವ ದಾಳಿ ನಡೆಸಿದಾಗ ಆರೋಪಿ ತಪ್ಪಿಸಿಕೊಳ್ಳಲು ಯತ್ನಿಸಿದ. ಹಲವು ಬಾರಿ ಸೂಚನೆ ನೀಡಿದರೂ ಶರಣಾಗಲಿಲ್ಲ. ಎರಡು ಸುತ್ತು ಗಾಳಿಯಲ್ಲಿ ಗುಂಡು ಹಾರಿಸಲಾಯಿತು. ಆರೋಪಿಯನ್ನು ಹಿಡಿಯಲು ಹೋದ ಪೊಲೀಸ್‌ ಕಾನ್‌ಸ್ಟೇಬಲ್‌ ಸುರೇಶ್‌ ಮೇಲೆ ಕಾರ್ತೀಕ್‌ ಹಲ್ಲೆ ನಡೆಸಲು ಮುಂದಾದ’.

‘ಈ ಸಂದರ್ಭದಲ್ಲಿ ಆನೇಕಲ್‌ ಇನ್‌ಸ್ಪೆಕ್ಟರ್‌ ತಿಪ್ಪೇಸ್ವಾಮಿ ಆರೋಪಿ ಕಾಲಿಗೆ ಗುಂಡು ಹಾರಿಸಿದರು. ಗುಂಡು ಬಲಗಾಲಿಗೆ ನಾಟಿ ಗಾಯವಾಗಿ ಆರೋಪಿ ಕುಸಿದು ಬಿದ್ದರು. ಕೂಡಲೇ ವಶಕ್ಕೆ ಪಡೆದು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಯ ವಿರುದ್ಧ ಆನೇಕಲ್‌, ಅತ್ತಿಬೆಲೆ, ಕುಂಬಳಗೋಡು, ಬನ್ನೇರುಘಟ್ಟ ಸೇರಿದಂತೆ ವಿವಿಧೆಡೆ ಪೊಲೀಸ್‌ ಠಾಣೆಯಲ್ಲಿ 13 ಪ್ರಕರಣ ದಾಖಲಾಗಿವೆ. ಆತನ ಎಲ್ಲಾ ಠಾಣೆಗಳಲ್ಲಿಯೂ ರೌಡಿಶೀಟರ್‌ ತೆರೆಯಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ಎಎಸ್ಪಿ ನಾಗರಾಜು, ಡಿವೈಎಸ್ಪಿ ಮೋಹನ್‌ ಕುಮಾರ್ ಸ್ಥಳಕ್ಕೆ ಭೇಟಿ ನೀಡಿದ್ದರು.

ಆರೋಪಿಗೆ ಗುಂಡೇಟು ಹೊಡೆದ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು
ಕಾರ್ತೀಕ್‌ ಅಲಿಯಾಸ್‌ ಜೆಕೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.