
ಆನೇಕಲ್: ತಾಲ್ಲೂಕಿನ ಕೂಗುರು ಗ್ರಾಮದ ಗೃಹಿಣಿಯೊಬ್ಬರು ಕಜ್ಜಾಯ ಕೊಡುವುದಾಗಿ ವೃದ್ಧೆಯನ್ನು ವಾರದ ಹಿಂದೆ ಮನೆಗೆ ಕರೆದು ಕೊಂದು ಮೂಟೆಯಲ್ಲಿ ತುಂಬಿಟ್ಟಿದ್ದರು.
ಕೂಗುರು ಗ್ರಾಮದ ಭದ್ರಮ್ಮ(68) ಎಂಬ ವೃದ್ಧೆಯನ್ನು ಅದೇ ಗ್ರಾಮದ ದೀಪಾ (30) ಎಂಬ ಗೃಹಿಣಿ ಕೊಂದು ಶವವನ್ನು ಮೂಟೆಯಲ್ಲಿ ತುಂಬಿ ಎರಡು ದಿನ ಮನೆಯಲ್ಲಿ ಕಟ್ಟಿದ್ದರು. ಭದ್ರಮ್ಮ ಧರಿಸಿದ್ದ ಚಿನ್ನಾಭರಣಕ್ಕಾಗಿ ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ದೀಪಾ ತಪ್ಪೊಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅ.30ರಿಂದಲೂ ಭದ್ರಮ್ಮ ಕಾಣೆಯಾಗಿದ್ದರು. ವೃದ್ಧೆಗಾಗಿ ಹುಡುಕಾಟ ನಡೆಸಿದ್ದ ಕುಟುಂಬ ಸದಸ್ಯರು ಕೊನೆಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಅಕ್ಕಪಕ್ಕದ ಮನೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದ ದೃಶ್ಯಗಳನ್ನು ಪೊಲೀಸರು ಪರಿಶೀಲಿಸಿದಾಗ ಕಾಣೆಯಾಗುವ ಮೊದಲು ಕೊನೆಯ ಬಾರಿಗೆ ಭದ್ರಮ್ಮ ಅವರು ದೀಪಾ ಮನೆಗೆ ಹೋಗಿದ್ದರು. ಅಲ್ಲಿಂದ ಮರಳಿ ಬಂದಿರುವುದು ಕ್ಯಾಮರಾದಲ್ಲಿ ಸೆರೆಯಾಗಿರಲಿಲ್ಲ. ಪೊಲೀಸರು ಈ ಬಗ್ಗೆ ದೀಪಾನನ್ನು ವಿಚಾರಣೆ ನಡೆಸಿದಾಗ ನೈಜ ಘಟನೆ ಹೊರ ಬಿದ್ದಿದೆ.
ಸರ್ಜಾಪುರ ಇನ್‌ಸ್ಪೆಕ್ಟರ್ ನವೀನ್ ನೇತೃತ್ವದ ತಂಡ ತನಿಖೆ ನಡೆಸಿ ಆರೋಪಿಯನ್ನು ಪತ್ತೆ ಹಚ್ಚಿದೆ. ಶವದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.
ಸ್ಥಳಕ್ಕೆ ಎಎಸ್ಪಿ ವೆಂಕಟೇಶ್ ಪ್ರಸನ್ನ, ಡಿವೈಎಸ್ಪಿ ಮೋಹನ್ ಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
- ಪೊದೆಯಲ್ಲಿ ಶವದ ಮೂಟೆ
ಕಜ್ಜಾಯ ಕೊಡುವುದಾಗಿ ಹೇಳಿ ಭದ್ರಮ್ಮ ಅವರನ್ನು ತನ್ನ ಮನೆಗೆ ಕರೆದೊಯ್ದಿದ್ದ ದೀಪಾ ವೃದ್ಧೆಯ ಮೈಮೇಲಿನ ಚಿನ್ನಾಭರಣ ತೆಗೆದುಕೊಂಡ ಬಳಿಕ ಕೊಲೆ ಮಾಡಿದ್ದರು.ಬಳಿಕ ಶವವನ್ನು ಮೂಟೆ ಕಟ್ಟಿ ಎರಡು ದಿನ ಮನೆಯಲ್ಲಿಯೇ ಇಟ್ಟುಕೊಂಡಿದ್ದರು. ಶವ ಕೊಳೆತು ಮನೆಯಲ್ಲಿ ವಾಸನೆ ಹೆಚ್ಚಾದಾಗ ಮೂಟೆಯಲ್ಲಿ ಕಟ್ಟಿಟ್ಟ ಕಸ ಕೊಳೆತು ನಾರುತ್ತಿದೆ ಎಂದು ಹೇಳಿ ಮಗನ ನೆರವು ಪಡೆದು ಮೂಟೆಯನ್ನು ಸಗಿಸಿದ್ದರು. ದೊಡ್ಡತಿಮ್ಮಸಂದ್ರ ಕೆರೆಯ ಪೊದೆಯಲ್ಲಿ ದೇಹವಿದ್ದ ಮೂಟೆಯನ್ನು ಎಸೆದು ಬಂದಿದ್ದರು. ಏನು ತಿಳಿಯದಂತೆ ಸುಮ್ಮನಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.