ಆನೇಕಲ್ : ಕನ್ನಡ ಜಾಗೃತಿ ವೇದಿಕೆಯಿಂದ ಸ್ವಾಭಿಮಾನಿ ಕನ್ನಡಿಗರ ಸಮಾವೇಶ ಫೆ.4ರಂದು ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯಲಿದೆ ಎಂದು ವೇದಿಕೆಯ ರಾಜ್ಯ ಘಟಕದ ಅಧ್ಯಕ್ಷ ಕೆ.ಮಂಜುನಾಥ ದೇವ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ಮಾಹಿತಿ ಪುಸ್ತಿಕೆಯನ್ನು ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಕರ್ನಾಟಕ ಎಂದು ನಾಮಕರಣಗೊಂಡ ಸುವರ್ಣ ಸಂಭ್ರಮ, ಕರ್ನಾಟಕ ಏಕೀಕರಣದ 68ನೇ ವರ್ಷ ಮತ್ತು ಕನ್ನಡ ಜಾಗೃತಿಯ ವೇದಿಕೆಯು 30ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಮಾವೇಶ ಆಯೋಜಿಸಲಾಗಿದೆ ಎಂದರು.
ಕನ್ನಡ ಜಾಗೃತಿ ವೇದಿಕೆಯು ನೆಲ, ಜಲ ನಾಡು ನುಡಿಯ ವಿಚಾರದಲ್ಲಿ ನಿರಂತರ ಹೋರಾಟಗಳನ್ನು ನಡೆಸುತ್ತಿದೆ. ಕಾವೇರಿ ವಿವಾದ ಸಂದರ್ಭದಲ್ಲಿ ಗಡಿಯಲ್ಲಿ ಹೋರಾಟಗಳನ್ನು ನಡೆಸಿದೆ. ಸಂಘಟನೆಯ ತತ್ವ, ಸಿದ್ಧಾಂತಗಳನ್ನು ಯುವ ಸಮುದಾಯಕ್ಕೆ ತಿಳಿಸುವ ನಿಟ್ಟಿನಲ್ಲಿ ಬೃಹತ್ ಸಮಾವೇಶವನ್ನು ಆಯೋಜಿಸಲಾಗಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕನ್ನಡಪರ ಹೋರಾಟಗಾರ ವಾಟಾಳ್ ನಾಗರಾಜ್ ಕಾರ್ಯಕ್ರಮ ಉದ್ಘಾಟಿಸುವರು. ಸಚಿವರಾದ ರಾಮಲಿಂಗಾರೆಡ್ಡಿ, ಪ್ರಿಯಾಂಕ್ ಖರ್ಗೆ, ಶಿವರಾಜ ತಂಗಡಗಿ, ಶಾಸಕರಾದ ಬಿ.ಶಿವಣ್ಣ, ಅಶೋಕ್ ಪಟ್ಟಣ, ಸಾ.ರಾ.ಗೋವಿಂದು ಭಾಗವಹಿಸುವರು ಎಂದು ಜಾಗೃತಿ ವೇದಿಕೆಯ ಯುವ ಘಟಕದ ಅಧ್ಯಕ್ಷ ಗೌರೀಶ್ ತಿಳಿಸಿದರು.
ಸಂಘಟನೆಯ ಗೌರವ ಅಧ್ಯಕ್ಷ ತಾ.ನಂ.ಕುಮಾರಸ್ವಾಮಿ ಮಾತನಾಡಿ, ಸಾಹಿತಿ ದೇವನೂರು ಮಹದೇವ, ಇತಿಹಾಸಕಾರ ನಂಜರಾಜ ಅರಸ್, ಸೇರಿದಂತೆ ವಿವಿಧ ಸಾಧಕರಿಗೆ ಸನ್ಮಾನ, ಜಾನಪದ ಕಲಾ ಪ್ರದರ್ಶನ ಆಯೋಜಿಸಲಾಗಿದೆ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.