
ಆನೇಕಲ್: ಕಳೆದ ಒಂದು ವಾರದಿಂದ ತಾಲ್ಲೂಕಿನ ಕಾಡಂಚಿನ ಗ್ರಾಮಗಳ ನೀಲಗಿರಿ ತೋಪುಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳ ಹಿಂಡು ಭಾನುವಾರ ಮುತ್ಯಾಲಮಡುವು ಸಮೀಪದಲ್ಲಿ ರಸ್ತೆಯಲ್ಲಿ ಕಾಣಿಸಿಕೊಂಡಿದೆ.
ನೀಲಗಿರಿ ತೋಪಿನಲ್ಲಿ ಅತ್ತಿಂದಿತ್ತ ಓಡಾಡುತ್ತಿರು ಒಂಬತ್ತು ಕಾಡಾನೆಗಳನ್ನು ಕಾಡಿಗೆ ಅಟ್ಟಲು ಅರಣ್ಯ ಇಲಾಖೆ ಸಿಬ್ಬಂದಿ ಇನ್ನಿಲ್ಲದ ಕಸರತ್ತು ಮಾಡುತ್ತಿದ್ದಾರೆ. ಆದರೆ, ಸಿಬ್ಬಂದಿ ಯಾವ ಪ್ರಯತ್ನಗಳೂ ಫಲ ನೀಡಲಿಲ್ಲ. ಇದನ್ನು ಲಕ್ಷ್ಯಕ್ಕೆ ತೆಗೆದುಕೊಳ್ಳದ ಕಾಡಾನೆಗಳ ಹಿಂಡು ನಿಶ್ಚಿಂತೆಯಿಂದ ನಿಂತಿತ್ತು. ಸ್ಥಳದಿಂದ ಒಂದಿನಿತೂ ಕದಲಿಲ್ಲ.
ಕೊನೆಗೆ ಪಟಾಕಿ ಮೊರೆ ಹೋದ ಅರಣ್ಯ ಸಿಬ್ಬಂದಿ ಪಟಾಕಿ ಸಿಡಿಸಿ ಕಾಡಿಗೆ ಓಡಿಸುವ ಪ್ರಯತ್ನ ಮಾಡಿದರು. ಇದರಿಂದ ಮತ್ತಷ್ಟು ಕೆರಳಿದ ಕಾಡಾನೆಗಳ ಹಿಂಡು ಘೀಳಿಡುತ್ತ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಪ್ರತಿದಾಳಿ ನಡೆಸಿದವು. ಆನೆಗಳ ಸಿಟ್ಟು ಅರಿತ ಅರಣ್ಯ ಸಿಬ್ಬಂದಿ ಸ್ಥಳದಿಂದ ಓಟ ಕಿತ್ತು ಪ್ರಾಣ ರಕ್ಷಿಸಿಕೊಂಡರು.
ಮುತ್ಯಾಲಮಡುವು ಸಮೀಪ ಮನೆಯ ಮುಂದೆ ನಿಲ್ಲಿಸಿದ್ದ ಎರಡು ಬೈಕ್ ಕಾಡಾನೆಗಳ ಸಿಟ್ಟಿಗೆ ಪುಡಿ, ಪುಡಿಯಾಗಿವೆ.
ಆಹಾರ ಅರಸಿ ಕಾಡಿನಿಂದ ಬಂದಿರುವ ಕಾಡಾನೆಗಳ ಹಿಂಡು ವಾರದಿಂದ ಆನೇಕಲ್ ತಾಲ್ಲೂಕಿನ ವಿವಿಧ ಭಾಗಗಳಲ್ಲಿ ಕಾಣಿಸಿಕೊಳ್ಳುತ್ತಿದ್ದು, ರಾಗಿಯ ಬೆಳೆಯನ್ನು ನಾಶಪಡಿಸಿವೆ.
ಮೆಣಸಿಗನಹಳ್ಳಿ, ಮುತ್ಯಾಲಮಡುವು ಸೇರಿದಂತೆ ತಾಲ್ಲೂಕಿನ ಅರಣ್ಯದಂಚಿನ ಗ್ರಾಮಗಳ ಸುತ್ತಮುತ್ತ ಕಾಣಿಸಿಕೊಂಡಿರುವ ಕಾಡಾನೆಗಳ ಹಿಂಡು ಆಗಾಗ ರಸ್ತೆ ಬದಿಗಳಲ್ಲಿ ಪ್ರತ್ಯಕ್ಷವಾಗುತ್ತಿದೆ. ಇದರಿಂದಾಗಿ ವಾಹನ ಸವಾರರು, ಪಾದಚಾರಿಗಳು ಆತಂಕದಲ್ಲಿ ರಸ್ತೆಯಲ್ಲಿ ಸಂಚರಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.