ADVERTISEMENT

ಭೂ ಸ್ವಾಧೀನ ವಿರೋಧಿ ಹೋರಾಟಕ್ಕೆ 138 ದಿನ: ಸೊಳ್ಳೆಪುರದಲ್ಲಿ ರೈತರ ಸಭೆ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2025, 2:20 IST
Last Updated 24 ನವೆಂಬರ್ 2025, 2:20 IST
ಆನೇಕಲ್‌ ತಾಲ್ಲೂಕಿನ ಸೊಳ್ಳೆಪುರದಲ್ಲಿ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ವತಿಯಿಂದ ಆಯೋಜಿಸಿದ್ದ ರೈತರ ಸಭೆ ಆಯೋಜಿಸಲಾಗಿತ್ತು
ಆನೇಕಲ್‌ ತಾಲ್ಲೂಕಿನ ಸೊಳ್ಳೆಪುರದಲ್ಲಿ ಭೂಸ್ವಾಧೀನ ವಿರೋಧಿ ಹೋರಾಟ ಸಮಿತಿ ವತಿಯಿಂದ ಆಯೋಜಿಸಿದ್ದ ರೈತರ ಸಭೆ ಆಯೋಜಿಸಲಾಗಿತ್ತು   

ಆನೇಕಲ್: ತಾಲ್ಲೂಕಿನ ಸರ್ಜಾಪುರ ಹೋಬಳಿಯಲ್ಲಿ ಕೆಐಎಡಿಬಿ ಭೂಸ್ವಾಧೀನ ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ 138 ದಿನ ಪೂರೈಸಿದ್ದು, ಭಾನುವಾರ ತಾಲೂಕಿನ ಸೊಳ್ಳೆಪುರದಲ್ಲಿ ರೈತರ ಸಭೆ ನಡೆಯಿತು.

‘ರಕ್ತ ಕೊಟ್ಟೆವು ಒಂದಿಂಚು ಭೂಮಿ ಸಹ ನೀಡುವುದಿಲ್ಲ. ಇದು ತಾಯಾಣೆ’ ಎಂಬ ಘೋಷಣೆಯು ರೈತರ ಪ್ರಮುಖ ಧ್ಯೇಯವಾಗಬೇಕು. ಕೃಷಿ ಭೂಮಿ ಉದ್ಯಮಿಗಳಿಗೆ ಸೇರಿದರೆ ಅದು ಸರಕು, ರೈತರದ್ದದ್ದಾರೆ ಅದು ಬದುಕು. ಸರ್ಕಾರ ರೈತರ ಭೂಮಿಗಳ ಮೇಲೆ ಕಣ್ಣಾಕುವುದನ್ನು ಬಿಡಬೇಕು ಎಂದು ಸಂಯುಕ್ತ ಹೋರಾಟ ಕರ್ನಾಟಕ ವೇದಿಕೆಯ ಬಡಗಲಪುರ ನಾಗೇಂದ್ರ ಎಂದು ಒತ್ತಾಯಿಸಿದರು.

ಸರ್ಜಾಪುರ ಹೋಬಳಿಯಲ್ಲಿ ರೈತರ ಹೋರಾಟ ಗೆಲ್ಲುವುದು ಸೂರ್ಯ ಚಂದ್ರ ಇರುವಷ್ಟೇ ಸತ್ಯ ಎಂದರು.

ADVERTISEMENT

ರೈತರ ಭೂಮಿ ಉಳಿಸಲು ಕಳೆದ ಒಂದುವರೆ ವರ್ಷದಿಂದ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಬಹಿರಂಗ ಸಭೆ ನಡೆಸುತ್ತಿದ್ದಾರೆ. ಆದರೆ ಸರ್ಕಾರ ಕಣ್ತರೆಯದಿರುವುದು ಖಂಡನೀಯ. ನಾವೇ ಮತ ನೀಡಿ ವಿಧಾನಸೌಧ ಮತ್ತು ಲೋಕಸಭೆ ಕಳಿಸಿರುವ ನಾಯಕರು ನಮ್ಮ ಭೂಮಿಯನ್ನೇ ಕಿತ್ತುಕೊಳ್ಳುತ್ತಿರುವುದು ಸರಿಯಲ್ಲ ಎಂದು ಸಂಯುಕ್ತ ಹೋರಾಟ ಕರ್ನಾಟಕದ ವರಲಕ್ಷ್ಮಿ ಆಕ್ರೋಶ ವ್ಯಕ್ತಪಡಿಸಿದರು.

ಸರ್ಕಾರಗಳು ರೈತರ ಭೂಮಿ ಕಿತ್ತುಕೊಂಡು ಅವರನ್ನು ಬೀದಿಗೆ ತಂದಿದೆ. ಸರ್ಕಾರಗಳು ಪ್ರಜಾಪ್ರಭುತ್ವದ ಮುಖ್ಯ ಉದ್ದೇಶವನ್ನೇ ಮರೆತು ರೈತರನ್ನು ಗುಲಾಮರನ್ನಾಗಿಸಲು ಹೊರಟಿದೆ. ರೈತರ ಭೂಮಿಗಳನ್ನು ಕೈಗಾರಿಕೆಗಳಿಗೆ ನೀಡಿ ರಾಗಿ ಅಕ್ಕಿ ಮತ್ತು ಆಹಾರಧಾನ್ಯಗಳನ್ನು ಎಲ್ಲಿ ಬೆಳೆಯಬೇಕು ಎಂಬುದನ್ನು ಸರ್ಕಾರ ತಿಳಿಸಬೇಕು ಎಂದರು.

ರೈತರ ಮೇಲಿನ ಶೋಷಣೆಯನ್ನು ಎಂದಿಗೂ ಸಹಿಸಲಾಗುವುದಿಲ್ಲ. ಭೂಮಿ ಸ್ವಾಧೀನ ಪ್ರಕ್ರಿಯೆಯು ರೈತರ ಮೇಲಿನ ಗೌರವವನ್ನು ಕಡಿಮೆ ಮಾಡುತ್ತಿದೆ. ರೈತರ ಭೂಮಿಗಳ ಮೇಲೆ ದೌರ್ಜನ್ಯ ನಡೆಯುತ್ತಿರುವುದನ್ನು ಪ್ರತಿಯೊಬ್ಬರು ಸಹ ಖಂಡಿಸಬೇಕು ಎಂದು ರೈತ ಮುಖಂಡ ಚಂದ್ರಾರೆಡ್ಡಿ ಹೇಳಿದರು.

ಸಂಯುಕ್ತ ಕರ್ನಾಟಕದ ನೂರ್‌ ಶ್ರೀಧರ್‌, ಯಶವಂತ್‌, ಭೂಸ್ವಾದೀನ ವಿರೋಧಿ ಹೋರಾಟ ಸಮಿತಿ ಅಧ್ಯಕ್ಷ ದೇವರಾಜರೆಡ್ಡಿ, ಗೌರವ ಅಧ್ಯಕ್ಷ ರಾಮಚಂದ್ರರೆಡ್ಡಿ, ಸಮಿತಿಯ ಜಯಪ್ರಕಾಶ್‌, ಚಿನ್ನಪ್ಪ.ವೈ.ಚಿಕ್ಕಹಾಗಡೆ, ಹಂದೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಗಣ, ಸಮಿತಿಯ ಗಮನ ಮಹಿಳಾ ಒಕ್ಕೂಟದ ಮಮತಾ, ರಾಮಪ್ಪ, ಪುಷ್ಪ, ಹರೀಶ್‌ ಅಣ್ಣಯ್ಯ, ಅಶೋಕ್‌ ರೆಡ್ಡಿ, ಶ್ರೀನಾಥ್‌ ರೆಡ್ಡಿ, ಕೇಶವರೆಡ್ಡಿ, ಪರಶುರಾಮ್‌, ಉಮಾ, ಮಂಜುಳ, ನಾಗೇಶ್‌ ರೆಡ್ಡಿ, ಸೋಮಶೇಖರರೆಡ್ಡಿ, ನಂಜುಂಡರೆಡ್ಡಿ, ಬಾಬುಪ್ರಸಾದ್‌ ರೆಡ್ಡಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.