ADVERTISEMENT

ಆನೇಕಲ್: ಬದಲಾದ ಕಳ್ಳರ ಕೈ ಚಳಕ

ಆನೇಕಲ್‌ನಲ್ಲಿ 3–4 ತಿಂಗಳಲ್ಲಿ 16 ಕಡೆ ಕಳ್ಳತನ । ಮಂಕುಬೂದಿ ಎರಚಿ ಕೃತ್ಯ । ಬೀಗ ಹಾಕಿದ ಮನೆಗಳೇ ಇವರ ಟಾರ್ಗೆಟ್‌

​ಪ್ರಜಾವಾಣಿ ವಾರ್ತೆ
Published 1 ಡಿಸೆಂಬರ್ 2025, 4:35 IST
Last Updated 1 ಡಿಸೆಂಬರ್ 2025, 4:35 IST
ಆನೇಕಲ್ ತಾಲ್ಲೂಕಿನ ಮುತ್ತಾನಲ್ಲೂರು ದೇವಾಲಯದಲ್ಲಿ ಕಳ್ಳತನದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ
ಆನೇಕಲ್ ತಾಲ್ಲೂಕಿನ ಮುತ್ತಾನಲ್ಲೂರು ದೇವಾಲಯದಲ್ಲಿ ಕಳ್ಳತನದ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ   

ಆನೇಕಲ್: ಇತ್ತೀಚಿನ ತಿಂಗಳಲ್ಲಿ ತಾಲ್ಲೂಕಿನಲ್ಲಿ ಕಳವು ಪ್ರಕರಣಗಳು ಹೆಚ್ಚಾಗಿದ್ದು, ಕಳ್ಳರು ಹೊಸ ತಂತ್ರಗಳ ಮೂಲಕ ತಮ್ಮ ಕೈಚಳಕ ತೋರುತ್ತಿದ್ದಾರೆ. ಲಗ್ನಪತ್ರಿಕೆ ಕೊಡುವ ನೆಪದಲ್ಲಿ, ಮಳಿಗೆಯಲ್ಲಿ ಸಾಮಾನು ಖರೀದಿ ಹಾಗೂ ಶಾಸ್ತ್ರ, ಬುಡುಬುಡಿಕೆ ನೆಪದಲ್ಲಿ ಅರಿವಿಗೆ ಬಾರದಂತೆ ಮಂಕುಬೂದಿ ಎರಚಿ ಕಳವು ಮಾಡುತ್ತಿದ್ದಾರೆ.

ಕಳೆದ ಮೂರ್ನಾಲ್ಕು ತಿಂಗಳುಗಳಲ್ಲಿ ಆನೇಕಲ್‌ ಪೊಲೀಸ್‌ ಉಪವಿಭಾಗದಲ್ಲಿ 16 ಕಳ್ಳತನ ನಡೆದಿದೆ. ಇದರಲ್ಲಿ ಎಂಟು ಮನೆ ಕಳವು, ಐದು ದೇವಾಲಯಗಳಲ್ಲಿ ಕಳವು, 3ಕ್ಕೂ ಹೆಚ್ಚು ಸರಗಳ್ಳತನ ಪ್ರಕರಣಗಳು ಸೇರಿವೆ.

ತಾಲ್ಲೂಕಿನ ನೆರಳೂರು ಗ್ರಾಮದಲ್ಲಿ ಆಹ್ವಾನ ಪತ್ರಿಕೆ ನೀಡುವ ಸೋಗಿನಲ್ಲಿ ಬಂದು ಅಪರಿಚಿತರು 200 ಗ್ರಾಂ ಚಿನ್ನ ಮತ್ತು ನಗದು ಕಳ್ಳತನ ಮಾಡಿದ್ದರು. ಆನೇಕಲ್‌ ಪೊಲೀಸ್‌ ಠಾಣೆ ವ್ಯಾಪ್ತಿಯ ಚಿಕ್ಕಹೊಸಹಳ್ಳಿಯಲ್ಲಿ ಕುಟುಂಬದವರ ಅನುಕೂಲಕ್ಕಾಗಿ ಕಿಟಕಿಯಲ್ಲಿ ಕೀ ಇಡುತ್ತಿದ್ದನ್ನು ಗಮನಿಸಿದ್ದ ಕಳ್ಳರು, ಅದೇ ಕೀ ಬಳಸಿಕೊಂಡು ತಮ್ಮ ಕೈಚಳಕ ತೋರಿದ್ದಾರೆ. ಜಿಗಣಿ ಪೊಲೀಸ್‌ ಠಾಣೆ ವ್ಯಾಪ್ತಿಯ ನಾಯನಹಳ್ಳಿ ಗ್ರಾಮದಲ್ಲಿ ಅಂಗಡಿಯಲ್ಲಿ ಮೊಟ್ಟೆ ಖರೀದಿ ನೆಪದಲ್ಲಿ ಚಿನ್ನದ ಮಾಂಗಲ್ಯ ಸರವನ್ನು ಕಳ್ಳರು ದೋಚಿದ್ದರು.

ADVERTISEMENT

ಆನೇಕಲ್‌ ಮರಿಯಪ್ಪ ಬಡಾವಣೆಯಲ್ಲಿ ಬೀಗ ಹಾಕಿದ್ದ ಮನೆಯ ಬಾಗಿಲು ಮುರಿದು ಕಳವು ಮಾಡಲಾಗಿತ್ತು. ಬೀಗ ಹಾಕಿರುವ ಮನೆಗಳೇ ಕಳ್ಳರ ಟಾರ್ಗೆಟ್‌. ಊರು, ಪ್ರವಾಸ ಹಾಗೂ ತೀರ್ಥ ಕ್ಷೇತ್ರಕ್ಕೆ ಹೋಗುವ ಕುಟುಂಬಗಳ ಮನೆಗೆ ಬೀಗ ಹಾಕಿರುವುದನ್ನು ಗುರುತಿಸುವ ಕಳ್ಳರು. ಮನೆಗಳ ಬಳಿ ಮೂರ್ನಾಲ್ಕು ಬಾರಿ ಓಡಾಡಿ ಬೆಳಗಿನ ಜಾವದಲ್ಲಿ ಮನೆ ಬೀಗ ಮುರಿದು ಕಳವು ಮಾಡುತ್ತಿದ್ದಾರೆ. 

ಮನೆಯ ಗೇಟ್‌ಗಳಿಗೆ ಬೀಗ ಹಾಕಿದ್ದಾಗ ಮನೆಯಲ್ಲಿ ಯಾರು ಇಲ್ಲ ಎಂಬುದು ಖಚಿತಪಡಿಸಿಕೊಳ್ಳುವ ಕಳ್ಳರು ರಾತ್ರಿ ವೇಳೆ ಆ ಮನೆಗಳಲ್ಲಿ ತಮ್ಮ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಸತತ ನಾಲ್ಕೈದು ದಿನ ರಜೆ ಇರುವ ಸಮಯದಲ್ಲಿ  ಕಳ್ಳತನ ಹೆಚ್ಚಾಗಿ ನಡೆಯುತ್ತಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಚಿನ್ನಾಭರಣ ಮತ್ತು ನಗದು ರಕ್ಷಣೆಗೆ ಪ್ರತಿಯೊಬ್ಬರು ಲಾಕರ್‌ ಬಳಸಬೇಕು. ವಿವಿಧ ಬ್ಯಾಂಕ್‌ಗಳಲ್ಲಿ ₹5ರಿಂದ ₹10 ಸಾವಿರಕ್ಕೆ ಲಾಕರ್‌ ಸೌಲಭ್ಯ ಲಭ್ಯ ಇರುತ್ತದೆ. ಮನೆಯಲ್ಲಿ ಚಿನ್ನಾಭರಣ ಇಡುವುದಕ್ಕಿಂತ ಲಾಕರ್‌ನಲ್ಲಿ ಇಟ್ಟರೆ ಸುರಕ್ಷಿತ ಎಂದು ಪೊಲೀಸರು ಸಲಹೆ ನೀಡಿದ್ದಾರೆ.

ಸಿಸಿಟಿವಿ ಕ್ಯಾಮೆರಾಗೂ ಕ್ಯಾರೆ ಅನ್ನದ ಚೆಲಾಕಿಗಳು: ಕಳ್ಳತನ ನಡೆದ ಹಾಗೂ ಸುತ್ತಮುತ್ತ ಸಿಸಿಟಿವಿ ಕ್ಯಾಮೆರಾಗಳು ಇದ್ದರೂ ಕಳ್ಳರು ಅದಕ್ಕೂ ಕಾಣದಂತೆ ಕಳ್ಳತನ ಮಾಡುತ್ತಿದ್ದಾರೆ. ಸಿಸಿಟಿವಿ ಕ್ಯಾಮೆರಾದಲ್ಲಿ ಸುಳಿವು ಸಿಗದಂತೆ ಚೆಲಾಕಿತನ ಪ್ರದರ್ಶಿಸುತ್ತಿದ್ದಾರೆ. ಕೆಲವೆಡೆ ಕಳ್ಳತನ ಮುನ್ನ ಅಥವಾ ಬಳಿಕ ಸಿಸಿಟಿವಿ ಕ್ಯಾಮೆರಾವನ್ನು ಧ್ವಂಸಗೊಳಿಸುತ್ತಿದ್ದಾರೆ. ಆನೇಕಲ್‌ ಮರಿಯಪ್ಪ ಬಡಾವಣೆಯಲ್ಲಿ ಮನೆ ಕಳವು ಸಮಯದಲ್ಲಿ ಕ್ಯಾಮೆರಾ ಧ್ವಂಸಗೊಳಿಸಲಾಗಿದೆ.

ಗೇಟ್‌ಗೆ ಬೀಗ ಹಾಕುವುದೇ ಮುಖ್ಯಕಾರಣ

ಗೇಟ್‌ಗೆ ಬೀಗ ಹಾಕುವುದು ಹಾಗೂ ಕಣ್ಣಿಗೆ ಕಾಣುವ ಹಾಗೇ ದೊಡ್ಡ ಬೀಗಗಳನ್ನ ಬಳಸುತ್ತಿರುವುದರಿಂದಲೇ ಆನೇಕಲ್‌ ಪೊಲೀಸ್‌ ಉಪವಿಭಾಗದಲ್ಲಿ ಮನೆ ಕಳವು ಪ್ರಕರಣ ಹೆಚ್ಚಾಗಿದೆ ಎಂದು ಎಂದು ಡಿವೈಎಸ್ಪಿ ಮೋಹನ್‌ ಕುಮಾರ್‌ ತಿಳಿಸಿದರು. ಕಳ್ಳರ ಕಣ್ಣಿಗೆ ಕಾಣುವಂತೆ ದೊಡ್ಡ ಬೀಗ ಹಾಕುವುದರಿಂದ ಮನೆಯಲ್ಲಿ ಯಾರು ಇಲ್ಲವೆಂಬುದು ಸ್ಪಷ್ಟವಾಗುತ್ತದೆ. ಅಕ್ಕ ಪಕ್ಕದ ಮನೆಗಳು ಗಾಢ ನಿದ್ರೆಯಲ್ಲಿರುವ ಬೆಳಗಿನ ಜಾವದ ಸಂದರ್ಭದಲ್ಲಿ ಕಳ್ಳರು ತಮ್ಮ ಬುದ್ಧಿ ತೋರುತ್ತಿದ್ದಾರೆ. ಮನೆಗಳ ಗೇಟ್‌ಗೆ ಬೀಗ ಹಾಕುವ ಬದಲಿಗೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಬೇಕೆಂದು ಸಲಹೆ ನೀಡಿದ್ದಾರೆ.

ಖದಿಮರಿಗೆ ದೇವರ ಕೃಫೆ 

ಆನೇಕಲ್‌ ತಾಲ್ಲೂಕಿನ ಮೂರು ದೇಗುಲಗಳಲ್ಲಿ ಹುಂಡಿ ಹಣ ಹಾಗೂ ಚಿನ್ನಾಭರಣ ಕಳ್ಳತನ ಆಗಿದೆ. ಆದರೆ ಯಾವ ಪ್ರಕರಣವನ್ನು ಪೊಲೀಸರು ಬೇಧಿಸಿಲ್ಲ ಕಳ್ಳತನ ಆದ ಹಣವನ್ನು ಜಪ್ತಿ ಮಾಡಿಲ್ಲ. ಸೆಪ್ಟೆಂಬರ್‌ ತಿಂಗಳಿನಲ್ಲಿ ಮುತ್ತಾನಲ್ಲೂರು ಗ್ರಾಮದಲ್ಲಿ ಒಂದೇ ದಿನ ಎರಡು ದೇವಾಲಯಗಳಲ್ಲಿ ಹುಂಡಿ ದೇವಿಯ ಚಿನ್ನದ ಆಭರಣ ಸೇರಿದಂತೆ ವಿವಿಧ ಆಭರಣ ಕಳ್ಳತನ ಆಗಿತ್ತು. ಜಿಗಣಿ ಪೊಲೀಸ್‌ ಠಾಣೆ ವ್ಯಾಪ್ತಿಯ ಹರಪನಹಳ್ಳಿ ಬಳಿ ಆಂಜನೇಯ ಸ್ವಾಮಿ ದೇವಾಲಯದಲ್ಲಿ ಹುಂಡಿ ಕಳವು ಮಾಡಿದ್ದರು. ಆನೇಕಲ್‌ ಪೊಲೀಸ್‌ ಠಾಣೆ ವ್ಯಾಪ್ತಿಯ ಗೆರಟಿಗನಬೆಲೆಯಲ್ಲಿಯೂ ದೇವಾಲಯದ ಕಳವು ಆಗಿತ್ತು. ಈ ಸಂಬಂಧ ಇದುವರೆಗೆ ಆರೋಪಿಗಳ ಬಂಧನ ಆಗಿಲ್ಲ. ಕಳ್ಳರ ಮೇಲೂ ದೇವರ ಕೃಪೆ ಇದ್ದಂತೆ ತೋರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.