ADVERTISEMENT

ಮಳೆ ಬಂದರೆ ಕೆಸರು ಗದ್ದೆ, ಬಿಸಿಲಿದ್ದರೆ ಗೋಮಾಳ: ಆನೇಕಲ್ ಕ್ರೀಡಾಂಗಣದ ಅವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2025, 2:19 IST
Last Updated 27 ಅಕ್ಟೋಬರ್ 2025, 2:19 IST
ಕೆಸರುಗದ್ದೆ ಅಲ್ಲ, ಇದು ಆನೇಕಲ್ ತಾಲ್ಲೂಕು ಕ್ರೀಡಾಂಗಣ
ಕೆಸರುಗದ್ದೆ ಅಲ್ಲ, ಇದು ಆನೇಕಲ್ ತಾಲ್ಲೂಕು ಕ್ರೀಡಾಂಗಣ   

ಆನೇಕಲ್: ಮಳೆ ಬಂದರೆ ಕೆಸರು ಗದ್ದೆ, ಬೇಸಿಗೆ ಕಾಲದಲ್ಲಿ ಗೋಮಾಳ, ಚಳಿಗಾಲದಲ್ಲಿ ಹುಲ್ಲುಗಾವಲು...

–ಇದು ಕಾಲಕ್ಕೆ ತಕ್ಕಂತೆ ಬದಲಾಗುವ ಆನೇಕಲ್ ತಾಲ್ಲೂಕು ಕ್ರೀಡಾಂಗಣದ ದುಸ್ಥಿತಿ. ಇಲ್ಲಿ ಕ್ರೀಡಾಕೂಟ ನಡೆದದ್ದಕ್ಕಿಂತ ಹೆಚ್ಚಾಗಿ ಹಸುಗಳನ್ನು ಮೇಯಿಸಿದ್ದೆ ಹೆಚ್ಚು. ಇದರ ನಡುವೆ ಹಾಗೂ ಸೌಲಭ್ಯ ಕೊರತೆಯಲ್ಲೂ ಕ್ರೀಡಾಪಟುಗಳು ಆಟ ಆಡಬೇಕಿದೆ.

ಮಳೆ ಬಂದರೆ ಕ್ರೀಡಾಂಗಣದಲ್ಲಿ ಪುಟಾಣಿಗಳ ನೀರಾಟ, ಯುವಕರು ಮೀನು ಹಿಡಿಯುತ್ತಾರೆ. ಮಳೆ ಏನಾದರೂ ನಿಂತರವಾಗಿ ಸುರಿದರೆ ಕ್ರೀಡಾಂಗಣ ಮತ್ತೆ ಕೆರೆಯಾಗಿ ಬದಲಾಗುವ ಎಲ್ಲ ಲಕ್ಷಣವು ಇದೆ. ಹೀಗಾದರೆ ಕ್ರೀಡಾಚಟುವಟಿಕೆಗಳು ಶಾಶ್ವತವಾಗಿ ನಿಂತು ಹೋಗುವ ಸಾಧ್ಯತೆ ಹೆಚ್ಚಿದೆ.

ADVERTISEMENT

ರಾಜ್ಯ ರಾಜಧಾನಿಯ ಭಾಗವಾಗಿರುವ ಆನೇಕಲ್‌ನಲ್ಲಿ ಸೂಕ್ತ ಕ್ರೀಡಾಂಗಣ ಇಲ್ಲದಿರುವುದು, ಇರುವ ಕ್ರೀಡಾಂಗಣದ ನಿರ್ವಹಣೆ ಕೊರತೆ ಹಾಗೂ ಸೌಲಭ್ಯ ಇಲ್ಲದಿರುವುದು ಕ್ರೀಡಾಪಟುಗಳು, ವಿದ್ಯಾರ್ಥಿಗಳು ಹಾಗೂ ಸ್ಥಳೀಯರಲ್ಲಿ ಅಸಮಾಧಾನ ಮೂಡಿಸಿದೆ.

ಆನೇಕಲ್‌ ಚಿಕ್ಕಕೆರೆಯು ಪಟ್ಟಣದ ಪ್ರಮುಖ ಜಲಮೂಲವಾಗಿತ್ತು. ಮಳೆಯ ಕೊರತೆ ಮತ್ತು ಜಲಮೂಲಗಳು ಮುಚ್ಚಿಹೋಗಿದ್ದರಿಂದ ಕೆರೆ ತನ್ನ ಅಸ್ತಿತ್ವ ಕಳೆದುಕೊಂಡಿತ್ತು. ಇದರಿಂದ ಚಿಕ್ಕಕೆರೆಯ ಜಾಗದ 10ಎಕರೆ ಪ್ರದೇಶದಲ್ಲಿ ತಾಲ್ಲೂಕು ಕ್ರೀಡಾಂಗಣ ನಿರ್ಮಾಣವಾಯಿತು. ಆದರೆ ಕ್ರೀಡಾಂಗಣವನ್ನು ವೈಜ್ಞಾನಿಕವಾಗಿ ಅಭಿವೃದ್ಧಿ ಪಡಿಸಲಿಲ್ಲ. ಇದರಿಂದ ಮಳೆ ಬಂದರೆ ಕ್ರೀಡಾಂಗಣ ತನ್ನ ಮೂಲ ಸ್ವರೂಪಕ್ಕೆ ಹೋಗುತ್ತದೆ. ಮಳೆ ನೀರು ಸಂಗ್ರಹವಾಗಿ ಕೆರೆಯಂತಾಗುತ್ತದೆ. ನೀರು ಹೊರ ಹೋಗಲು ಸೂಕ್ತ ಜಾಗ ಇಲ್ಲದೆ ಕ್ರೀಡಾಂಗಣದಲ್ಲೇ ಸಂಗ್ರಹವಾಗುತ್ತದೆ. ಆಗ ಕ್ರೀಡಾಂಗಣ ಒಣಗುವವರೆಗೂ ಕಾಯಬೇಕು. ಇಲ್ಲವೇ ಕೆಸರು ಗದ್ದೆಯಂತಹ ಮೈದಾನದಲ್ಲಿ ಆಟ ಆಡಬೇಕು.

ಕ್ರೀಡಾಂಗಣ ಅಭಿವೃದ್ಧಿಪಡಿಸುವ ವೇಳೆ ಅಗತ್ಯ ಮೂಲಸೌಕರ್ಯ ಕಲ್ಪಿಸಿಲ್ಲ. ಅಲ್ಲದೆ ಮೈದಾನದ ನಿರ್ವಹಣೆ ಬಗ್ಗೆ ಯಾರು ತಲೆಕೆಡಿಸಿಕೊಂಡಿಲ್ಲ. ಹೀಗಾಗಿ ಕ್ರೀಡಾಂಗಣ ನಿರ್ಲಕ್ಷ್ಯಕ್ಕೆ ಒಳಗಾಗಿದೆ. ಇರುವ ಅವ್ಯವಸ್ಥೆಯ ನಡುವೆಯೂ ಮಕ್ಕಳು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ.

ಈ ಮೈದಾನವನ್ನು ಕ್ರೀಡಾಂಗಣವೆಂದು ಗುರುತಿಸಲು ಎರಡು ಕಡೆ ಇರುವ ಆಸನದ ವ್ಯವಸ್ಥೆ ಮಾತ್ರ ಸಾಕ್ಷಿಗುಡ್ಡೆಯಾಗಿದೆ. ಇದನ್ನು ಹೊರತುಪಡಿಸಿದರೆ ಕ್ರೀಡಾಂಗಣ ಎಂದು ಕರೆಸಿಕೊಳ್ಳುವ ಯಾವ ಲಕ್ಷಣವು ಇಲ್ಲ.

ಕ್ರೀಡೆಯಲ್ಲಿ ತೊಡಗಿಸಿಕೊಳ್ಳುಬೇಕೆಂಬ ಹಟ–ಉತ್ಸಾಹದಿಂದ ಯುವಕರೆಲ್ಲ ಸೇರಿ ಕ್ರೀಡಾಂಗಣದ ಒಂದು ಭಾಗದಲ್ಲಿ ಹುಲ್ಲು ಕಿತ್ತುಹಾಕಿ, ಸ್ವಚ್ಛಗೊಳಿಸಿ ಕಬಡ್ಡಿ ಆಡುತ್ತಿದ್ದಾರೆ.

ಕ್ರೀಡಾಂಗಣದ ಒಳ ಹೋಗಲು ಸಹ ದಾರಿ ಇಲ್ಲದೇ ದುಸ್ಥಿತಿ ನಿರ್ಮಾಣವಾಗಿದೆ. ಬಾಲಕರು ಕಬಡ್ಡಿಯಾಡಲು ತಮ್ಮ ಚಪ್ಪಲಿಗಳನ್ನು ಗೇಟ್‌ನಲ್ಲಿಯೇ ತೆಗೆದು ಕೈಯಲ್ಲಿ ಹಿಡಿದುಕೊಂಡು ಮಳೆ ನೀರು, ಕೆಸರು ದಾಟಿ ಕ್ರೀಡಾಂಗಣದೊಳಗೆ ಬರಬೇಕು. ಕ್ರೀಡಾಂಗಣದ ಸುತ್ತಲೂ ಮಳೆಯ ನೀರು ಸಂಗ್ರಹವಾದರೆ ಆಟ ಆಡಲು ಆಗುವುದಿಲ್ಲ.

ಪಟ್ಟಣದಲ್ಲಿ ಹಲವು ಪದವಿ ಮತ್ತು ಪದವಿ ಪೂರ್ವ ಕಾಲೇಜುಗಳಿವೆ. ಯುವಕರ ಕ್ರೀಡೆಗೆ ಸೂಕ್ತ ಜಾಗ ಮತ್ತು ಸೌಲಭ್ಯ ಕಲ್ಪಿಸಬೇಕೆಂಬ ಬೇಡಿಕೆ ಇದೆ. ಆದರೆ ತಾಲ್ಲೂಕು ಕ್ರೀಡಾಂಗಣದಲ್ಲಿ ಕ್ರೀಡೆಗಳನ್ನು ನಡೆಸಲು ಸಾಧ್ಯವಿಲ್ಲ. ಮಳೆ ಬಂದಾಗ ಕ್ರೀಡಾಂಗಣ ಕೆರೆಯಾಗುತ್ತದೆ. ಮಳೆಯ ನೀರು ಸರಾಗವಾಗಿ ಹರಿಯಲು ಸೂಕ್ತ ಜಾಗವಿಲ್ಲ. ರಾಜಕಾಲುವೆ ಅಭಿವೃದ್ಧಿ ಪಡಿಸಿ ಮಳೆಯ ನೀರು ಕ್ರೀಡಾಂಗಣಕ್ಕೆ ಬಾರದಂತೆ ಕ್ರಮ ವಹಿಸಬೇಕು ಎಂಬುದು ಸ್ಥಳೀಯ ಕ್ರೀಡಾಪಟುಗಳ ಬೇಡಿಕೆಯಾಗಿದೆ.

ಮಳೆ ಬಂದಾಗ ಆನೇಕಲ್ ಕ್ರೀಡಾಂಗಣ ಕೆಸರು ಗದ್ದೆಯಾಗುತ್ತದೆ
ಹುಲ್ಲುಗಾಲು ಅಲ್ಲ ಇದು ಆನೇಕಲ್‌ ಕ್ರೀಡಾಂಗಣ (ಮಳೆಗಾಲ ಹೊರತುಪಡಿಸಿ ಉಳಿದ ಕಾಲದಲ್ಲಿ ಕ್ರೀಡಾಂಗಣವು ಹುಲ್ಲುಗಾವಲಿನಂತಾಗಿರುತ್ತದೆ) 
ಸೌಲಭ್ಯ ಕೊರತೆಯ ನಡುವೆ ಕಬಡ್ಡಿ 
ಆನೇಕಲ್ ತಾಲ್ಲೂಕು ಕ್ರೀಡಾಂಗಣದಲ್ಲಿ ಚಿಣ್ಣರ ನೀರಾಟ
ತಾಲ್ಲೂಕು ಕ್ರೀಡಾಂಗಣದಲ್ಲಿ ನೀರು ತುಂಬಿದೆ ಎಎಸ್‌ಬಿ ಮೈದಾನವು ವಾಹಲು ನಿಲುಗಡೆ ತಾಣ ಮತ್ತು ವಾಹನ ಚಾಲನ ತರಬೇತಿಯ ಜಾಗವಾಗುತ್ತಿದೆ. ಹೀಗಾಗಿ ಕ್ರೀಡಾಭ್ಯಾಸ ಮಾಡುವುದಾದರೂ ಎಲ್ಲಿ?
ಜಗದೀಶ್‌ ಕ್ರೀಡಾಪಟು
ತಾಲ್ಲೂಕು ಕ್ರೀಡಾಂಗಣದಲ್ಲಿ ನೀರು ತುಂಬಿದೆ ಎಎಸ್‌ಬಿ ಮೈದಾನವು ವಾಹಲು ನಿಲುಗಡೆ ತಾಣ ಮತ್ತು ವಾಹನ ಚಾಲನ ತರಬೇತಿಯ ಜಾಗವಾಗುತ್ತಿದೆ. ಹೀಗಾಗಿ ಕ್ರೀಡಾಭ್ಯಾಸ ಮಾಡುವುದಾದರೂ ಎಲ್ಲಿ?
ಜಗದೀಶ್‌ ಕ್ರೀಡಾಪಟು
ಆನೇಕಲ್‌ ತಾಲ್ಲೂಕು ಕ್ರೀಡಾಂಗಣ ಎಎಸ್‌ಬಿ ಮೈದಾನ ಮತ್ತು ಸರ್ಜಾಪುರದಲ್ಲಿ ಕ್ರೀಡಾಂಗಣ ನಿರ್ಮಿಸಲು ಕ್ರೀಡಾ ಸಚಿವರಿಗೆ ಮನವಿ ಸಲ್ಲಿಸಲಾಗಿದೆ. ತಾಲ್ಲೂಕು ಕ್ರೀಡಾಂಗಣವನ್ನು ವೈಜ್ಞಾನಿಕವಾಗಿ ನಿರ್ಮಿಸಲು ₹10ಕೋಟಿ ಅನುದಾನ ಕೋರಲಾಗುವುದು
ಬಿ.ಶಿವಣ್ಣ ಶಾಸಕ

ಮತ್ತೆ ಕೆರೆಯಾಗಲಿ ಹೊಸ ಕ್ರೀಡಾಂಗಣ ನಿರ್ಮಿಸಿ 

ಮಳೆ ನೀರು ಕ್ರೀಡಾಂಗಣಕ್ಕೆ ಹರಿಯಬಾರದು. ಹರಿದರೂ ಹೊರಗೆ ಹೋಗುವಂತೆ ವ್ಯವಸ್ಥೆ ಮಾಡಬೇಕು. ಪ್ರತಿ ಮಳೆ ಬಳಿಕವು ಕ್ರೀಡಾಂಗಣವನ್ನು ಕೆಲ ದಿನಗಳಲ್ಲೆ ವಿವಿಧ ಆಟಕ್ಕೆ ಸಿದ್ಧಪಡಿಸಬೇಕು. ನಿತ್ಯ ನಿರ್ವಹಣೆ ಮಾಡಬೇಕು. ಅಗತ್ಯ ಮೂಲಸೌಕರ್ಯವನ್ನು ತುರ್ತಾಗಿ ಕಲ್ಪಿಸಬೇಕೆಂಬುದು ಕ್ರೀಡಾಪಟುಗಳ ಆಗ್ರಹ. 

ಇಲ್ಲವೇ ಕ್ರೀಡಾಂಗಣವನ್ನು ಮತ್ತೆ ಕೆರೆಯಾಗಿ ಪರಿವರ್ತಿಸಿ ಬೇರೆ ಕಡೆ ಸೂಕ್ತ ಜಾಗದಲ್ಲಿ ಹೊಸದಾಗಿ ಕ್ರೀಡಾಂಗಣ ನಿರ್ಮಾಣ ಮಾಡಬೇಕೆಂದು ಒತ್ತಾಯ. ಜಲಕ್ರೀಡೆ ಮೀನು ಸಾಕಣಿಕೆಗೆ ಸೂಕ್ತ ಕೆರೆ ಪ್ರದೇಶವನ್ನು ಕ್ರೀಡಾಂಗಣವಾಗಿ ಅಭಿವೃದ್ಧಿಪಡಿಸಿದ ಪರಿಣಾಮ ಪ್ರತಿ ಮಳೆಗೆ ಕ್ರೀಡಾಂಗಣ ಕೆರೆಯಂತೆ ಆಗುತ್ತದೆ. ಜೋರು ಮಳೆಯಾದರೆ ಕ್ರೀಡಾಂಗಣದಲ್ಲಿ ಜಲಕ್ರೀಡೆ ನಡೆಸಬಹುದು. ಮೀನುಮರಿಗಳನ್ನು ಬಿಟ್ಟು ಮೀನು ಸಾಕಣಿಕೆ ಮಾಡಬಹುದು ಎಂದು ವ್ಯಂಗವಾಡುತ್ತಾರೆ ಸ್ಥಳೀಯರು.

ಕರಗಿತು ಆಸೆ–ಆಕಾಂಕ್ಷೆ

ಆನೇಕಲ್‌ನ ಚಿಕ್ಕಕೆರೆಯನ್ನು 1991ರಲ್ಲಿ ಕ್ರೀಡಾಂಗಣವಾಗಿ ‍ಪರಿವರ್ತಿಸಲು ತೀರ್ಮಾನ ಕೈಗೊಂಡು ಸರ್ವೆ ನಂ.248ರಲ್ಲಿ 42 ಎಕರೆ ಜಮೀನಿನ ಪೈಕಿ 10 ಎಕರೆಯನ್ನು ತಾಲ್ಲೂಕು ಕ್ರೀಡಾಂಗಣಕ್ಕೆ ಮೀಸಲಿಡಲಾಯಿತು. ಈ ನಿರ್ಧಾರದ ಹತ್ತು ವರ್ಷದ ಬಳಿಕ ಕ್ರೀಡಾಂಗಣ ನಿರ್ಮಾಣವಾಯಿತು. ಹಲವು ವರ್ಷಗಳ ಬಳಿಕ 2009 ಮಾರ್ಚ್‌ 2ರಂದು ಆನೇಕಲ್‌ ತಾಲ್ಲೂಕು ಕ್ರೀಡಾಂಗಣ ಉದ್ಘಾಟನೆಯಾಯಿತು. ಕ್ರೀಡಾಂಗಣದ ಉದ್ಘಾಟನೆಯೊಂದಿಗೆ ಯುವಕರಲ್ಲಿ ವಿದ್ಯಾರ್ಥಿಗಳು ಕ್ರೀಡೆಗಳ ತರಬೇತಿ ಪಡೆಯುವ ಹೊಸ ಹುಮ್ಮಸ್ಸು ಮೂಡಿತ್ತು. ಕ್ರೀಡಾಂಗಣ ಉದ್ಘಾಟನೆಯಾಗಿದ್ದು ಹೊರತುಪಡಿಸಿ ಇನ್ಯಾವುದೇ ಕ್ರೀಡಾ ಚಟುವಟಿಕೆಗಳು ಇಲ್ಲಿ ನಡೆಯಲಿಲ್ಲ. ಇದರೊಂದಿಗೆ ಯುವಕರಲ್ಲಿ ಮೂಡಿದ್ದ ಆಸೆ ಆಕಾಂಕ್ಷೆಗಳು ಮಳೆ ನೀರಲ್ಲಿ ಕರಗಿ ಹೋದವು.

ಮತ್ತೊಂದು ಮೈದಾನದ ಕತೆ

ಆನೇಕಲ್‌ ಪಟ್ಟಣದಲ್ಲಿ ತಾಲ್ಲೂಕು ಕ್ರೀಡಾಂಗಣ ಸ್ಥಿತಿ ಕೆರೆಯಾಗಿದ್ದರೆ ಮತ್ತೊಂದು ಕ್ರೀಡಾಂಗಣ ಎಎಸ್‌ಬಿ ಮೈದಾನವು ವಾಹನ ನಿಲುಗಡೆಯ ತಾಣವಾಗಿದೆ. ಬೆಳಗ್ಗೆಯೆಲ್ಲಾ ವಾಹನಗಳ ದಂಡು ಸಂಜೆಯಾಗುತ್ತಿದ್ದಂತೆ ಪತಿಯಿಂದ ಪತ್ನಿಗೆ ದ್ವಿಚಕ್ರ ವಾಹನ ತರಬೇತಿ ನೀಡುವ ಕೇಂದ್ರವಾಗಿ ಬದಲಾಗುತ್ತದೆ. ಈ ನಡುವೆ ಯುವಕರು ಕ್ರಿಕೆಟ್‌ ಕಬಡ್ಡಿ ಸೇರಿದಂತೆ ಆಟೋಟಗಳನ್ನು ಆಡಲು ಜಾಗವೇ ಇಲ್ಲದಂತಾಗಿದೆ. ಎಎಸ್‌ಬಿ ಮೈದಾನಕ್ಕೆ ವಾಹನಗಳ ನಿಷೇಧಿಸಬೇಕೆಂದು ಆನೇಕಲ್‌ ಕೇಶವ ಒತ್ತಾಯಿಸಿದ್ದಾರೆ.

ಸೌಲಭ್ಯ ಕಲ್ಪಿಸಿ 

ಆನೇಕಲ್‌ ತಾಲ್ಲೂಕಿನಲ್ಲಿ ಏಕೈಕ ಕ್ರೀಡಾಂಗಣ ಇದಾಗಿದ್ದು ಇಲ್ಲಿ ಅಥ್ಲೆಟಿಕ್ಸ್ ಟ್ರ್ಯಾಕ್ ಸುತ್ತಲೂ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ವೇದಿಕೆ ಒಳಾಂಗಣ ಕ್ರೀಡಾಂಗಣ ವಾಲಿಬಾಲ್ ಮತ್ತು ಟೆನಿಸ್ ಕೋರ್ಟ್ ಸೇರಿದಂತೆ ವಿವಿಧ ಸೌಕರ್ಯ ಕಲ್ಪಿಸುವ ಅಗತ್ಯತೆಯಿದೆ. ಯುವಕರಿಗೆ ಜಿಮ್‌ ಹೊರಾಂಗಣ ಕ್ರೀಡಾಂಗಣ ಸೇರಿದಂತೆ ಹಲವು ಸೌಲಭ್ಯಗಳನ್ನು ಕಲ್ಪಿಸಬೇಕು ಜಿ.ಶಾಲಿನಿ ಕ್ರೀಡಾಪಟು ಸೋಲೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.