ಆನೇಕಲ್: ತಾಲ್ಲೂಕಿನ ಸರ್ಜಾಪುರ ಹೋಬಳಿಯಲ್ಲಿ ಕೆಐಎಡಿಬಿ ಭೂಸ್ವಾಧೀನ ಪ್ರಕ್ರಿಯೆ ವಿರೋಧಿಸಿ ಜ್ಞಾನಜ್ಯೋತಿ ಪಬ್ಲಿಕ್ ಶಾಲೆ ವಿದ್ಯಾರ್ಥಿಗಳು ಮುತ್ತಾನಲ್ಲೂರು ಗ್ರಾಮದಲ್ಲಿ ಜಾಗೃತಿ ಜಾಥಾ ನಡೆಸಿ ರೈತರ ಹೋರಾಟಕ್ಕೆ ಬೆಂಬಲ ಘೋಷಿಸಿದರು.
ತಾಲ್ಲೂಕಿನ ಮುತ್ತಾನಲ್ಲೂರು ಗ್ರಾಮದಲ್ಲಿ ಚಿಣ್ಣರು ಫಲಕ ಹಿಡಿದು ಗ್ರಾಮದ ಬೀದಿ ಬೀದಿಗಳಲ್ಲಿ ಭೂಸ್ವಾಧೀನ ವಿರೋಧ ವ್ಯಕ್ತಪಡಿಸಿದರು.
ಹಸಿರೇ ಉಸಿರು, ರೈತರೇ ಭೂಮಿಯ ಒಡೆಯ, ರೈತರ ಹೋರಾಟಕ್ಕೆ ಜಯವಾಗಲಿ, ನಮ್ಮ ಭೂಮಿ ನಮ್ಮ ಹಕ್ಕು, ರೈತರನ್ನು ರಕ್ಷಿಸಿ ಪ್ರಜಾಪ್ರಭುತ್ವ ಉಳಿಸಿ, ರೈತರ ಭೂಮಿಯನ್ನು ಉಳಿಸಿ ರೈತರನ್ನು ರಕ್ಷಿಸಿ ಎಂದು ಘೋಷಣೆ ಕೂಗಿದರು. ಮುತ್ತಾನಲ್ಲೂರು ಹೋರಾಟದ ಸ್ಥಳದಲ್ಲಿ ರೈತರ ಪರವಾಗಿ ಚಿಣ್ಣರು ಮಾತನಾಡುವ ಮೂಲಕ ಗಮನ ಸೆಳೆದರು.
ಪರಿಸರ ಮಾಲಿನ್ಯ, ಜನಸಂಖ್ಯಾ ಸ್ಪೋಟ, ಆಹಾರ ಮತ್ತು ರೈತರ ಮಹತ್ವದ ಬಗ್ಗೆ ವಿದ್ಯಾರ್ಥಿಗಳು ಆಕರ್ಷಕವಾಗಿ ಮಾತನಾಡಿದರು. ಪ್ರಾತ್ಯಕ್ಷಿಕೆಯೊಂದಿಗೆ ವಿದ್ಯಾರ್ಥಿಗಳು ರೈತರಿಗೆ ಭೂಮಿಯ ಮಹತ್ವದ ಬಗ್ಗೆ ಮಾಹಿತಿ ನೀಡಿದರು.
ಕೃಷಿ ಮತ್ತು ಕೃಷಿಕ ಈ ದೇಶದ ಆಸ್ತಿಯಾಗಿದ್ದಾರೆ. ಕೈಗಾರಿಕೆಗಳು ಹೆಚ್ಚಾಗುವುದರಿಂದ ಪರಿಸರದ ಮೇಲೆ ಪರಿಣಾಮ ಬೀರುತ್ತದೆ. ಕೈಗಾರಿಕೆಗಳು ಹೆಚ್ಚಾಗುವುದರಿಂದ ನಮ್ಮ ಭೂಮಿಯನ್ನು ಕಳೆದುಕೊಳ್ಳಬೇಕಾಗುತ್ತದೆ. ಹಾಗಾಗಿ ರೈತರ ಭೂಮಿಯನ್ನು ಉಳಿಸುವ ಜವಾಬ್ದಾರಿ ನಮ್ಮ ಮೇಲಿದೆ. ಕೈಗಾರಿಕೆಗಳನ್ನು ಸ್ಥಾಪಿಸುವುದರಿಂದ ಭೂ ಮಾಲಿನ್ಯ, ವಾಯು ಮಾಲಿನ್ಯ, ಜಲ ಮಾಲಿನ್ಯ ಹೆಚ್ಚಾಗುತ್ತದೆ. ಜಲ ಮಲಿನವಾಗುವುದರ ಜೊತೆಗೆ ಭೂಮಿಯು ಸಹ ಮಲಿನವಾಗುತ್ತದೆ ಇದರಿಂದಾಗಿ ನಮ್ಮ ಆಹಾರದ ಮೇಲೂ ಪ್ರಭಾವ ಬೀರುತ್ತದೆ ಎಂದು ವಿದ್ಯಾರ್ಥಿನಿ ಚಿರುಶ್ರೀ ತಿಳಿಸಿದರು.
ರಾಜಕಾರಣಿಗಳದ್ದೇ ಸಾವಿರಾರು ಎಕರೆ ಭೂಮಿಯಿದೆ. ಅದನ್ನು ಬಿಟ್ಟು ರೈತರ ಭೂಮಿಯನ್ನು ಕಿತ್ತುಕೊಳ್ಳುತ್ತಿರುವುದು ಖಂಡನೀಯ. ಕೃಷಿಕ ಮಾತ್ರ ಅನ್ನ ಬೆಳೆಯುತ್ತಾರೆ. ಕೃಷಿಯನ್ನು ತೆಗೆದುಹಾಕಲು ಭೂಮಿ ಕಿತ್ತುಕೊಳ್ಳುತ್ತಿರುವುದು ಖಂಡನೀಯ ಎಂದು ವಿದ್ಯಾರ್ಥಿ ಶಿವನಾರಾಯಣ್ ಹೇಳಿದರು.
ಸರ್ಜಾಪುರ ಹೋಬಳಿಯು ಕೃಷಿಗೆ ಪೂರಕವಾದ ಭೂಮಿ. ಕೈಗಾರಿಕೆಗಳು ಹೊರಸೂಸುವ ಅನಿಲಗಳಿಂದಾಗಿ ಮಾಲಿನ್ಯ ಹೆಚ್ಚಾಗುತ್ತದೆ. ಆನೇಕಲ್ ತಾಲ್ಲೂಕಿನಲ್ಲಿ ಈಗಾಗಲೇ ಐದು ಕೈಗಾರಿಕ ಪ್ರದೇಶಗಳಿರುವುದರಿಂದ ಮತ್ತೊಂದು ಕೈಗಾರಿಕೆಯ ಅವಶ್ಯಕತೆ ಇಲ್ಲ ಎಂದು ಜ್ಞಾನಜ್ಯೋತಿ ಪಬ್ಲಿಕ್ ಶಾಲೆಯ ಮುಖ್ಯಸ್ಥ ಅಜಯ್ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.