ಆನೇಕಲ್: ಪಟ್ಟಣದ ಸುಭಾಷ್ ನಗರದಲ್ಲಿ ಎನ್.ಎಸ್.ಅಶ್ವಥನಾರಾಯಣ ಚಾರಿಟಬಲ್ ಟ್ರಸ್ಟ್ ವತಿಯಿಂದ ಅಣ್ಣಮ್ಮ, ಮಾರಮ್ಮ ಮತ್ತು ಚೌಡೇಶ್ವರಿ ದೇವಿ ಉತ್ಸವ ವೈಭವದಿಂದ ನಡೆಯಿತು.
ನಗರದೇವತೆ ಅಣ್ಣಮ್ಮ ದೇವಿ ಉತ್ಸವದ ಪ್ರಯುಕ್ತ ದೀಪೋತ್ಸವದಲ್ಲಿ ಪಟ್ಟಣದ ನೂರಾರು ಮಂದಿ ಮಹಿಳೆಯರು ಪಾಲ್ಗೊಂಡಿದ್ದರು.
ಗ್ರಾಮದೇವತೆಗಳ ಉತ್ಸವ ಮತ್ತು ಊರಹಬ್ಬ ಕಳೆದ ಮೂರು ದಿನಗಳಿಂದ ವಿಜೃಂಭಣೆಯಿಂದ ನಡೆಯಿತು. ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಿಸಲು ನೂರಾರು ಮಂದಿ ಸಾರ್ವಜನಿಕರು ಪಾಲ್ಗೊಂಡಿದ್ದರು. ಬೆಂಗಳೂರು ನಗರ ದೇವತೆ ಅಣ್ಣಮ್ಮ ದೇವಿ ಮತ್ತು ಗ್ರಾಮದೇವಿಯರಿಗೆ ವಿಶೇಷ ಪೂಜೆ ಆಯೋಜಿಸಲಾಗಿತ್ತು. ನೂರಾರು ಮಂದಿ ಮಹಿಳೆಯರು ದೇವಿಯ ದರ್ಶನ ಪಡೆದು ಮಡಿಲಕ್ಕಿ ಸಲ್ಲಿಸಿ ತಮ್ಮ ಭಕ್ತಿಯನ್ನು ಸಮರ್ಪಿಸಿದರು.
ದೇವಿಯರಿಗೆ ಭಾನುವಾರ ಸಂಜೆ ವಿಶೇಷ ಪೂಜೆ ಸಲ್ಲಿಸಿ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿ ಸ್ವಸ್ಥಾನಕ್ಕೆ ಕಳುಹಿಸಿಕೊಡಲಾಯಿತು. ಭಾನುವಾರ ಸಂಜೆ ಮಳೆಯ ನಡುವೆಯೂ ನಡೆದ ದೇವಿಯರ ಮೆರವಣಿಗೆ ಗಮನ ಸೆಳೆಯಿತು.
ಭಕ್ತರು ದೇವಿಯರ ಉತ್ಸವ ಮೂರ್ತಿಯನ್ನು ಹೊತ್ತವರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ತಮಟೆ, ಡೋಲಿನ ನಾದಕ್ಕೆ ತಕ್ಕಂತೆ ದೇವಿಯರನ್ನು ಹೊತ್ತು ಸ್ವಸಸ್ಥಾನಕ್ಕೆ ಕಳುಹಿಸಿದರು. ತಮಟೆಯ ಸದ್ದಿಗೆ ಯುವತಿಯರು ನೃತ್ಯ ಮಾಡಿ ಸಂಭ್ರಮಿಸಿದರು.
ಶಾಸಕ ಬಿ.ಶಿವಣ್ಣ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೊಡ್ಡಹಾಗಡೆ ಹರೀಶ್, ಪುರಸಭಾ ಸದಸ್ಯರಾದ ಎನ್.ಎಸ್.ಪದ್ಮನಾಭ, ಮುನಾವರ್, ರಾಜೇಂದ್ರ ಪ್ರಸಾದ್, ಕವಿತಾ ಅಶ್ವಥ್‌ನಾರಾಯಣ್, ಪ್ರಸಾದ್, ಮುಖಂಡರಾದ ಮಲ್ಲಿಕಾರ್ಜುನ್, ನಂಜುಂಡಿ, ಗಣೇಶ್, ಲಕ್ಷ್ಮೀನಾರಾಯಣ್, ಮುರಳಿ, ರಘು, ಅಭಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.