ADVERTISEMENT

ವೈಭವದ ಆನೇಕಲ್ ತಿಮ್ಮರಾಯಸ್ವಾಮಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2024, 5:08 IST
Last Updated 16 ಏಪ್ರಿಲ್ 2024, 5:08 IST
ಆನೇಕಲ್‌ ತಿಮ್ಮರಾಯಸ್ವಾಮಿ ರಥೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು
ಆನೇಕಲ್‌ ತಿಮ್ಮರಾಯಸ್ವಾಮಿ ರಥೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು   

ಆನೇಕಲ್ : ಆನೇಕಲ್‌ ಅಧಿದೈವ ತಿಮ್ಮರಾಯಸ್ವಾಮಿ ರಥೋತ್ಸವ ಸೋಮವಾರ ವಿಜೃಂಭಣೆಯಿಂದ ನಡೆಯಿತು.

ತಾಲ್ಲೂಕಿನ ವಿವಿಧೆಡೆಯಿಂದ ಆಗಮಿಸಿದ್ದ ಭಕ್ತರು ವೈಭವದ ರಥೋತ್ಸವಕ್ಕೆ ಸಾಕ್ಷಿಯಾದರು. ಬಿಸಿಲಿನ ಬೇಗೆಯನ್ನು ಲೆಕ್ಕಿಸದೇ ಬೆಳಗಿನಿಂದಲೂ ಜನಸ್ತೋಮ ಜಮಾಯಿಸಿತ್ತು.

ಮಂಗಳವಾರ ಮಧ್ಯಾಹ್ನ 1.45ಸುಮಾರಿಗೆ ತಿಮ್ಮರಾಯಸ್ವಾಮಿ ಉತ್ಸವ ಮೂರ್ತಿಗೆ ದೇವಾಲಯದ ಪ್ರಧಾನ ಅರ್ಚಕ ಕೆ.ರಾಮಚಂದ್ರ ಭಟ್ಟ ಅವರು ವಿಶೇಷ ಪೂಜೆ ಸಲ್ಲಿಸಿದ ನಂತರ ರಥದಲ್ಲಿ ಉತ್ಸವ ಮೂರ್ತಿಯನ್ನು ಕುಳ್ಳರಿಸಲಾಯಿತು.

ADVERTISEMENT

ಮೂರ್ತಿಯನ್ನು ರಥದಲ್ಲಿ ಕುಳ್ಳರಿಸುತ್ತಿದ್ದಂತೆ ನೆರೆದಿದ್ದ ಅಪಾರ ಸಂಖ್ಯೆಯ ಭಕ್ತರು ಗೋವಿಂದ..ಗೋವಿಂದಾ... ಎಂದು ಜಯಘೋಷ ಮಾಡಿ ದವನ ಚುಚ್ಚಿದ ಬಾಳೆಹಣ್ಣನ್ನು ತೇರಿಗೆ ಅರ್ಪಿಸುವ ಮೂಲಕ ಭಕ್ತಿ ಸಮರ್ಪಿಸಿದರು.

ರಥೋತ್ಸವದ ಅಂಗವಾಗಿ ತಿಮ್ಮರಾಯಸ್ವಾಮಿಗೆ ಅಭಿಷೇಕ, ವಿಶೇಷ ಅಲಂಕಾರ ಮಾಡಲಾಗಿತ್ತು. ದೇವಾಲಯವು ವಿಶೇಷ ಹೂವುಗಳಿಂದ ಕಂಗೊಳಿಸುತ್ತಿತ್ತು. ಭಕ್ತರ ದಂಡು ಆನೇಕಲ್‌ನ ತಿಮ್ಮರಾಯಸ್ವಾಮಿ ದೇವಾಲಯದ ಆವರಣದಲ್ಲಿ ಜಮಾಯಿಸಿತ್ತು. ಆನೇಕಲ್‌ ತಾಲ್ಲೂಕು, ತಮಿಳುನಾಡಿನ ಹೊಸೂರು, ಥಳಿ, ಬಾಗಲೂರು ಸೇರಿದಂತೆ ವಿವಿಧೆಡೆಯಿಂದ ಭಕ್ತರು ಉತ್ಸವದಲ್ಲಿ ಪಾಲ್ಗೊಂಡಿದ್ದರು. 

ಜಾತ್ರೆಯಿಂ ಆನೇಕಲ್‌-ಹೊಸೂರು ರಸ್ತೆ ವಾಹನ ದಟ್ಟಣೆ ಉಂಟಾಗಿತು.

ಗಮನ ಸೆಳೆದ ನೂರಾರು ಅರವಂಟಿಕೆಗಳು: ರಥೋತ್ಸವದಲ್ಲಿ ನೂರಾರು ಅರವಂಟಿಕೆಗಳನ್ನು ಸ್ಥಾಪಿಸಲಾಗಿತ್ತು. ನೀರು ಮಜ್ಜಿಗೆ, ಪಾನಕ, ಕೋಸಂಬರಿ ವಿತರಿಸಿ ಭಕ್ತರ ಬಿಸಿಲಿನ ಬೇಗೆ ತಣಿಸಲಾಯಿತು. ಆನೇಕಲ್‌ನಿಂದ ಎರಡು ಕಿ.ಮೀ.ಗೂ ಹೆಚ್ಚು ದೂರ ನೂರಾರು ಅರವಂಟಿಕೆ ಸ್ಥಾಪಿಸಲಾಗಿತ್ತು. ಕಸಬಾ ಹೋಬಳಿಯ ವಿವಿಧ ಗ್ರಾಮಗಳಿಂದ ಭಕ್ತರು ಟ್ರ್ಯಾಕ್ಟರ್‌ಗಳ ಮೂಲಕ ಅರವಂಟಿಕೆಗಳನ್ನು ತಂದಿದ್ದರು.

ರಥೋತ್ಸವ ಪ್ರಯುಕ್ತ ಸ್ವಾಮಿಗೆ ವಿಶೇಷ ಅಲಂಕಾರ
ರಥೋತ್ಸವದ ಪ್ರಯುಕ್ತ ದನಗಳ ಜಾತ್ರೆ ನಡೆಯಿತು

ಗಮನ ಸೆಳೆದ ದನಗಳ ಜಾತ್ರೆ

ರಥೋತ್ಸವದ ಪ್ರಯುಕ್ತ ದನಗಳ ಜಾತ್ರೆ ಆಯೋಜಿಸಲಾಗಿತ್ತು. ತಾಲ್ಲೂಕಿನ ವಿವಿಧೆಡೆಯಿಂದ ರಾಸುಗಳು ಜಾತ್ರೆಯಲ್ಲಿ ಪಾಲ್ಗೊಂಡಿದ್ದವು. ರಥೋತ್ಸವದಲ್ಲಿ ಪಾಲ್ಗೊಂಡಿದ್ದ ಭಕ್ತರು ರಾಸುಗಳನ್ನು ವೀಕ್ಷಿಸಿ ಖುಷಿಪಟ್ಟರು. ರಥೋತ್ಸವದ ಅಂಗವಾಗಿ ಏಪ್ರಿಲ್‌ 16ರ ಸಂಜೆ ಶಿವರಾಮಯ್ಯ ಅವರ ಕುಟುಂಬದವರಿಂದ ವೈರಮುಡಿ ಉತ್ಸವ ಏರ್ಪಡಿಸಲಾಗಿದೆ. ಶೇಷವಾಹನೋತ್ಸವ ಸೂರ್ಯಮಂಡಲೋತ್ಸವ ಮತ್ತು ಬಾಣಬಿರುಸು ಕಾರ್ಯಕ್ರಮ ನಡೆಯಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.