ADVERTISEMENT

ಆನೇಕಲ್‌: ಸಂಚಾರ ನಿಯಮ ‘ಗಾಳಿಗೆ’: ಹೈರಾಣದ ಜನತೆ

ವಾಹನ ದಟ್ಟಣೆಯಿಂದ ಹೈರಾಣದ ಆನೇಕಲ್‌ ಜನತೆ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2026, 4:35 IST
Last Updated 20 ಫೆಬ್ರುವರಿ 2026, 4:35 IST
ಆನೇಕಲ್‌ನ ದೇವರಕೊಂಡಪ್ಪ ವೃತ್ತದಲ್ಲಿನ ವಾಹನ ದಟ್ಟಣೆ
ಆನೇಕಲ್‌ನ ದೇವರಕೊಂಡಪ್ಪ ವೃತ್ತದಲ್ಲಿನ ವಾಹನ ದಟ್ಟಣೆ   

ಆನೇಕಲ್:  ಪಟ್ಟಣ ಸಂಚಾರ ಅವ್ಯವಸ್ಥೆ ನೋಡಿದರೆ, ಇಲ್ಲಿನ ಸವಾರರು ಸಂಚಾರ ನಿಯಮಗಳನ್ನು ಗಾಳಿಗೆ ತೋರಿದಂತೆ ಕಾಣುತ್ತದೆ. ಸುರಕ್ಷತೆ ಹಾಗೂ ಸುಗಮ ಸಂಚಾರಕ್ಕೆ ಇರುವ ನಿಯಮಗಳನ್ನ ಪಾಲಿಸದ ಕಾರಣ ವಾಹನ ದಟ್ಟಣೆ, ಅಪಘಾತ ಹಾಗೂ ಅಡ್ಡದಿಡ್ಡಿ ವಾಹನ ಸಂಚಾರ ಹೆಚ್ಚಾಗುತ್ತಿದೆ.

ಅಪ್ರಾಪ್ತ ವಯಸ್ಸಿನ ಬಾಲಕರ ವಾಹನ ಚಾಲನೆ, ಎಲ್ಲೆಂದಲ್ಲಿ ವಾಹನ ನಿಲುಗಡೆಯಿಂದಾಗಿ ಸಂಚಾರ ವ್ಯವಸ್ಥೆ ಮತ್ತಷ್ಟು ಹದಗೆಟ್ಟಿದೆ. ಸಂಚಾರ ಪೊಲೀಸರು ವಾಹನಗಳ ತಪಾಸಣೆ ನಡೆಸುತ್ತಿಲ್ಲ. ಹೀಗಾಗಿ ಹೆಲ್ಮೆಟ್‌ ಧರಿಸದ, ಪರವಾನಗಿ ಹಾಗೂ ವಿಮೆ ಇಲ್ಲದವರು ರಾಜಾರೋಷವಾಗಿ ಸಂಚಾರ ಮಾಡುತ್ತಿದ್ದಾರೆ.

ಪಟ್ಟಣದಲ್ಲಿ ಕಳೆದ ಆರೇಳು ತಿಂಗಳಿನಿಂದ ವಾಹನ ದಟ್ಟಣೆ ತೀವ್ರವಾಗಿದೆ. ನಿತ್ಯ ಸಂಜೆ 5.30ರ ನಂತರ ಆನೇಕಲ್‌ ಪಟ್ಟಣದೊಳಗಡೆ ಕಾಲಿಡಲು ಸಹ ವಾಹನ ಸವಾರರು ಭಯಬೀಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಒಮ್ಮೊಮ್ಮೆ ವಾಹನ ದಟ್ಟಣೆಯಿಂದ ನಿಂತಲೇ ಅರ್ಧ ತಾಸು ನಿಲ್ಲಬೇಕಿದೆ. ರಸ್ತೆಗಳಿಯುವ ವಾಹನಗಳ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಇದಕ್ಕೆ ಬೇಕಾದ ರಸ್ತೆ ಸುಸ್ಥಿತಿ, ವಾಹನ ನಿಲುಗಡೆ ಸೇರಿದಂತೆ ಯಾವುದೇ ವ್ಯವಸ್ಥೆ ನೋಡಿಕೊಳ್ಳುವವರು ಇಲ್ಲ. ಇದರಿಂದಾಗಿಯೇ ಆನೇಕಲ್‌ ಸಂಚಾರ ವ್ಯವಸ್ಥೆ ಅವ್ಯಸ್ಥೆಯಾಗಿದೆ.

ADVERTISEMENT

ದೇವರಕೊಂಡಪ್ಪ ವೃತ್ತ, ಬಸ್‌ ನಿಲ್ದಾಣ, ತಿಲಕ್‌ ವೃತ್ತ, ಶಿವಾಜಿ ವೃತ್ತದಲ್ಲಿ ವಾಹನ ದಟ್ಟಣೆ ವಿಪರೀತವಾಗಿರುತ್ತದೆ. ಪ್ರತಿ ದಿನ ಸಂಜೆಯಾಗುತ್ತಿದ್ದಂತೆ ವಾಹನಗಳ ಅಬ್ಬರದಿಂದ ಸ್ಥಳೀಯರು ಹಾಗೂ ಪಾದಚಾರಿಗಳು ಓಡಾಡಲು ಸಹ ಸಾಧ್ಯವಿಲ್ಲ. ಬೆಳಗ್ಗೆ ಸಂಜೆ ಆನೇಕಲ್‌ ಪಟ್ಟಣದ ರಸ್ತೆಗಳಲ್ಲಿ ಸಂಚರಿಸಲು ಪರದಾಡುತ್ತಿದ್ದಾರೆ. ಗಾರ್ಮೆಂಟ್ಸ್‌ ವಾಹನಗಳು, ಬಸ್‌ಗಳು, ದ್ವಿಚಕ್ರ ವಾಹನಗಳು ಹೆಚ್ಚಾಗಿರುವುದರಿಂದ ರಸ್ತೆ ದಟ್ಟಣೆ ಮತ್ತು ಅಪಘಾತಗಳು ಹೆಚ್ಚಾಗುತ್ತಿದೆ.

ಅಡ್ಡಾದಿಡ್ಡಿ ವಾಹನ ನಿಲುಗಡೆ : ಪಟ್ಟಣದಲ್ಲಿ ರಸ್ತೆ ದಟ್ಟಣೆ ಹೆಚ್ಚಾಗಲು ಅಡ್ಡಾದಿಡ್ಡಿ ವಾಹನ ನಿಲುಗಡೆಯೇ ಪ್ರಮುಖ ಕಾರಣ. ಬಹುತೇಕ ಎಲ್ಲಾ ವೃತ್ತಗಳು, ತಾಲ್ಲೂಕು ಕಚೇರಿಯ ರಸ್ತೆಗಳಲ್ಲಿ ಎಲ್ಲಂದರಲ್ಲಿ ವಾಹನಗಳನ್ನು ನಿಲ್ಲಿಸುತ್ತಿದ್ದಾರೆ. ಇದರಿಂದಾಗಿ ವಾಹನ ದಟ್ಟಣೆ ಹೆಚ್ಚಾಗಿದೆ.

ಹೆಚ್ಚಾಗುತ್ತಿರುವ ಅಪಘಾತ: ಪಟ್ಟಣದಲ್ಲಿ ಅಪಘಾತಗಳ ಸಂಖ್ಯೆ ಸಹ ಹೆಚ್ಚಾಗುತ್ತಿದೆ. ಫೆ.17ರಂದು ಸರ್ಕಾರಿ ಶಾಲಾ ಶಿಕ್ಷಕಿಯೊಬ್ಬರಿಗೆ ಟ್ರ್ಯಾಕ್ಟರ್‌ ಡಿಕ್ಕಿ ಹೊಡೆದು ಸ್ಥಳದಲ್ಲೇ ಮೃತಪಟ್ಟಿದ್ದವು. ವಾಹನ ದಟ್ಟಣೆ ಮತ್ತು ಪೊಲೀಸರ ನಿಗಾ ಇಲ್ಲದೇ ಇರುವುದರಿಂದ ಸುಗಮವಾಗಿ ಓಡಾಟ ನಡೆಸಲು ಸಹ ಸಾಧ್ಯವಾಗುತ್ತಿಲ್ಲ.

ಆನೇಕಲ್‌ ಗಾಂಧಿ ವೃತ್ತದಲ್ಲಿ ಎಲ್ಲೆಂದರಲ್ಲಿ ವಾಹನ ನಿಲುಗಡೆ
ಆನೇಕಲ್‌ನಲ್ಲಿ ಅಡ್ಡಾದಿಡ್ಡಿ ವಾಹನ ನಿಲುಗಡೆ
ಆನೇಕಲ್ ಪುರಸಭೆ ಮತ್ತು ಆನೇಕಲ್ ಪೊಲೀಸರು ಬೈಕ್‌ ನಿಲುಗಡೆಗೆ ನಿಗದಿತ ಜಾಗ ಗುರುತಿಸಬೇಕು. ಜತೆಗೆ ವಾಹನ ಸವಾರರು ಸಂಚಾರ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು
ವೆಂಕಟೇಶ್ ಸ್ಥಳೀಯ ನಿವಾಸಿ

ಸಮಸ್ಯೆ ಪರಿಹಾರಕ್ಕೆ ಸಾರ್ವಜನಿಕರ ಸಲಹೆ

ಆನೇಕಲ್‌ ಪಟ್ಟಣವು ಬೆಂಗಳೂರಿನ ಸನಿಹದಲ್ಲಿದ್ದು ವಾಹನಗಳ ಓಡಾಟ ಹೆಚ್ಚಾಗುತ್ತಿದೆ. ಹಾಗಾಗಿ ಸಂಚಾರ ಪೊಲೀಸ್‌ ಠಾಣೆಯ ಅವಶ್ಯಕ ಇದೆ. ಕಾನೂನು ಮತ್ತು ಸುವ್ಯವಸ್ಥೆಯ ನಡುವೆ ಪೊಲೀಸರು ಸಂಚಾರ ನಿಯಮಗಳ ಪಾಲನೆಗೆ ಹೆಚ್ಚು ಸಮಯ ನೀಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಪ್ರತ್ಯೇಕ ಸಂಚಾರ ಠಾಣೆ ಅಗತ್ಯವಾಗಿದೆ. ಪಟ್ಟಣದಲ್ಲಿರುವ ಏಕ ಮುಖ ರಸ್ತೆಗಳಲ್ಲಿ ವಾಹನಗಳು ಸಂಚರಿಸುವುದನ್ನು ತಡೆಯಬೇಕು. ಕೆಎಸ್‌ಆರ್‌ಟಿಸಿ ಮತ್ತು ಬಿಎಂಟಿಸಿ ಬಸ್‌ಗಳ ನಿಲುಗಡೆಗೂ ಸೂಕ್ತ ಜಾಗ ಕಲ್ಪಿಸಬೇಕು. ಇದರಿಂದಗಿ ಪಟ್ಟಣದಲ್ಲಿ ಸುಗಮ ಸಂಚಾರಕ್ಕೆ ಅನುಕೂಲವಾಗುತ್ತದೆ ಎಂದು ಸ್ಥಳೀಯರ ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.