ಆನೇಕಲ್: ‘ನಮ್ಮ ಶಾಲೆ ನಮ್ಮ ಜವಾಬ್ದಾರಿ’ ಎಂಬ ಸರ್ಕಾರದ ಯೋಜನೆಗೆ ಸಾಕ್ಷಿ ಎಂಬಂತೆ ಆನೇಕಲ್ ತಾಲ್ಲೂಕಿನ ಶೆಟ್ಟಿಹಳ್ಳಿಯಲ್ಲಿ ತಾವು ಓದಿದ ಸರ್ಕಾರಿ ಶಾಲೆಗೆ ಹೈಟೆಕ್ ಸ್ಪರ್ಶ ನೀಡುವ ಮೂಲಕ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಮ್ಮ ಹುಟ್ಟೂರಿಗೆ ಕೊಡುಗೆ ನೀಡಿದ್ದಾರೆ.
ಸಾರಿಗೆ ಮತ್ತು ಮುಜರಾಯಿ ಸಚಿವ ಖಾತೆ ಸಚಿವ ರಾಮಲಿಂಗಾರೆಡ್ಡಿ ಅವರು 1958-59ನೇ ಸಾಲಿನಲ್ಲಿ ಆನೇಕಲ್ ತಾಲ್ಲೂಕಿನ ಮರಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಶೆಟ್ಟಿಹಳ್ಳಿ ಗ್ರಾಮದಲ್ಲಿ ವ್ಯಾಸಂಗ ಮಾಡಿದ್ದರು. ತಾವು ವ್ಯಾಸಂಗ ಮಾಡಿದ ಶಾಲೆ ಶಿಥಿಲಗೊಂಡಿತ್ತು. ಕೆಲ ವರ್ಷಗಳ ಹಿಂದೆ ಶಾಲೆ ಮುಚ್ಚಿ ಹೋಗಿತ್ತು. ಗ್ರಾಮಸ್ಥರು ಬೇರೆ ಗ್ರಾಮಗಳ ಶಾಲೆಗಳಿಗೆ ವಿದ್ಯಾರ್ಥಿಗಳನ್ನು ಕಳುಹಿಸುತ್ತಿದ್ದರು. ಗ್ರಾಮದಲ್ಲಿ ಮತದಾನಕ್ಕೆ ಸಹ ಒಂದು ಕೇಂದ್ರವಿರಲಿಲ್ಲ. ಹಾಗಾಗಿ ಗ್ರಾಮದಲ್ಲಿ ಸರ್ಕಾರಿ ಶಾಲೆಗೆ ಪುನರ್ ಜೀವ ನೀಡುವ ಚಿಂತನೆ ನಡೆಸಿ ಇದಕ್ಕಾಗಿ ತಮ್ಮ ಸ್ನೇಹಿತರ ಜೊತೆಗೂಡಿ ಅಂದಾಜು ₹1 ಕೋಟಿ ವೆಚ್ಚದಲ್ಲಿ ಶೆಟ್ಟಿಹಳ್ಳಿಯಲ್ಲಿ ಸುಸಜ್ಜಿತವಾದ ಕಟ್ಟಡ ನಿರ್ಮಿಸಿದ್ದು, ಮೇ 30ರಂದು ಶಾಲೆಯ ಕಟ್ಟಡ ಉದ್ಘಾಟನೆಗೊಳ್ಳಲಿದೆ.
ಕೀ ಫೌಂಡೇಷನ್ ಮೂಲಕ ಪೂರ್ವ ಪ್ರಾಥಮಿಕ ಶಾಲೆ ಎಲ್‌ಕೆಜಿ ಮತ್ತು ಯುಕೆಜಿ ತರಗತಿ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಎಲ್‌ಕೆಜಿಯಿಂದ 5ನೇ ತರಗತಿವರೆಗೆ ಪ್ರಾರಂಭದಲ್ಲಿ ತರಗತಿಗಳನ್ನು ಪ್ರಾರಂಭಿಸಲಾಗುತ್ತದೆ ಎಂದು ಸಚಿವ ರಾಮಲಿಂಗಾರೆಡ್ಡಿ ಅವರು ತಿಳಿಸಿದರು.
ನವೀಕೃತ ಶಾಲೆ ಉದ್ಘಾಟನೆಯ ಸಿದ್ಧತೆ ಪರಿಶೀಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಲೆಯಲ್ಲಿ ಎಲ್ಲಾ ಸೌಲಭ್ಯಗಳನ್ನು ಕಲ್ಪಿಸಲಾಗಿದೆ. ಸುಸಜ್ಜಿತ ಕೊಠಡಿಗಳು, ಸ್ಮಾರ್ಟ್ ಕ್ಲಾಸ್‌ಗಳು, ಪ್ಲೇ ಏರಿಯಾ, ಕಂಪ್ಯೂಟರ್ ಕೊಠಡಿ, ಶೌಚಾಲಯ, ಅಡುಗೆ ಕೋಣೆ, ಪ್ರಾರ್ಥನಾ ಸಭಾಂಗಣ, ಪೀಠೋಪಕರಣಗಳು ಸೇರಿದಂತೆ ಎಲ್ಲಾ ಸೌಲಭ್ಯ ಕಲ್ಪಿಸಲಾಗಿದೆ. ಶಿಕ್ಷಣ ಇಲಾಖೆಯು ಶಿಕ್ಷಕರನ್ನು ನೇಮಿಸಿದೆ. ಅಗತ್ಯವಿದ್ದಲ್ಲಿ ಶಿಕ್ಷಕರ ಸೌಲಭ್ಯವನ್ನು ವೈಯಕ್ತಿಕವಾಗಿ ನೀಡಲಾಗುವುದು ಎಂದರು.
ಇಂಗ್ಲಿಷ್ ಕಲಿಕೆಗೆ ಸಹ ಅವಕಾಶ ಕಲ್ಪಿಸಲಾಗಿದೆ. ತಾವು ಓದಿದ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡಬೇಕೆಂಬ ಸಂಕಲ್ಪ ನಮ್ಮದಾಗಿದೆ. ಗ್ರಾಮದ ಎಲ್ಲರೂ ಸರ್ಕಾರಿ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸುವ ಮೂಲಕ ಸಹಕರಿಸಬೇಕು. ಶಾಲೆಯಲ್ಲಿ ದಾಖಲಾತಿ ಹೆಚ್ಚಾಗುವ ನಿಟ್ಟಿನಲ್ಲಿ ಪ್ರಯತ್ನ ನಡೆಸಲಾಗುವುದು. ಮುಂಬರುವ ದಿನಗಳಲ್ಲಿ ಅವಶ್ಯಕತೆಯಿದ್ದರೆ ಹಿರಿಯ ಪ್ರಾಥಮಿಕ ಶಾಲೆಯನ್ನು ತೆರೆಯಲು ಚಿಂತನೆ ನಡೆಸಲಾಗುವುದು ಎಂದು ರಾಮಲಿಂಗಾರೆಡ್ಡಿ ಅವರು ತಿಳಿಸಿದರು.
ಬೆಂಗಳೂರಿನ ಜಯನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಭೈರಸಂದ್ರ, ಗುರಪ್ಪನಪಾಳ್ಯ, ಮಾರೇನಹಳ್ಳಿ ಶಾಲೆಗಳನ್ನು ಸುಸಜ್ಜಿತಗೊಳಿಸಲಾಗಿದೆ. ಬಿಟಿಎಂ ವಿಧಾನಸಭಾ ಕ್ಷೇತ್ರದ 23 ಸರ್ಕಾರಿ ಶಾಲೆಗಳ ನವೀಕರಣ, ಸಬಲೀಕರಣ ಕಾರ್ಯ ಮಾಡಲಾಗಿದೆ. ಸುಸಜ್ಜಿತ ಸೌಲಭ್ಯ ವ್ಯವಸ್ಥೆ ಮಾಡಲಾಗಿದೆ ಎಂದರು.
ನಾನು ಓದಿದ ಶಾಲೆಯನ್ನು ಬೆಂಗಳೂರಿನ ಶಾಲೆಗಳಂತೆ ಸಜ್ಜುಗೊಳಿಸಬೇಕೆಂಬ ಸಂಕಲ್ಪ ನಮ್ಮದು. ಈ ದಿಕ್ಕಿನಲ್ಲಿ ಹೆಜ್ಜೆ ಇಡಲಾಗಿದೆ– ರಾಮಲಿಂರಾರೆಡ್ಡಿ ಸಚಿವ
ಸರ್ಕಾರಿ ಶಾಲೆ ಗ್ರಾಮದ ಆಸ್ತಿ. ನಮ್ಮೂರಿನ ಸರ್ಕಾರಿ ಶಾಲೆ ಮುಚ್ಚಿದ್ದರಿಂದ ಏನೋ ಕಳೆದುಕೊಂಡ ಅನುಭವವಾಗಿತ್ತು. ಶಾಲೆ ಶಿಥಿಲವಾಗಿ ಅಸ್ತಿತ್ವವನ್ನೇ ಕಳೆದುಕೊಂಡಿತ್ತು. ಗ್ರಾಮಕ್ಕೆ ನೂತನ ಶಾಲಾ ಕಟ್ಟಡ ನಿರ್ಮಾಣವಾಗಿರುವುದು ಸಂತಸ ತಂದಿದೆ– ವನಿತಾ ಗ್ರಾಮ ಪಂಚಾಯಿತಿ ಸದಸ್ಯೆ
ಸಹಪಾಠಿಗಳೊಂದಿಗೆ ಶಾಲೆ ದಿನ ಮೆಲಕು
ನೂತನ ಕಟ್ಟಡದ ಉದ್ಘಾಟನೆಯ ಪೂರ್ವಸಿದ್ದತೆ ವೀಕ್ಷಿಸಲು ಗ್ರಾಮಕ್ಕೆ ಆಗಮಿಸಿದ್ದ ಸಚಿವ ರಾಮಲಿಂಗಾರೆಡ್ಡಿ ಅವರು ತಮ್ಮ ಸಹಪಾಠಿಗಳೊಂದಿಗೆ ಶಾಲಾ ದಿನಗಳನ್ನು ಮೆಲುಕು ಹಾಕಿದರು. ಶಾಲೆಯ ಕೊಠಡಿಯಲ್ಲಿ ತಮ್ಮ ಸಹಪಾಠಿಗಳಾಗಿದ್ದವರ ಜೊತೆ ವಿದ್ಯಾರ್ಥಿಗಳಂತೆ ಕುಳಿತು ಖುಷಿ ಪಟ್ಟರು. ‘ಹುಟ್ಟೂರಿನ ಶಾಲೆಯನ್ನು ಅಭಿವೃದ್ಧಿ ಪಡಿಸಬೇಕೆಂದು ಸಂಕಲ್ಪ ಮಾಡಿದಾಗ ಗ್ರಾಮಸ್ಥರು ಜೊತೆಗೂಡಿದರು. ಗ್ರಾಮ ಪಂಚಾಯಿತಿ ಸದಸ್ಯರಾದ ಪ್ರಭಾಕರರೆಡ್ಡಿ ವನಿತಾ ಹಾಗೂ ಗ್ರಾಮಸ್ಥರು ತಮ್ಮ ಸ್ವಂತ ಮನೆ ಕೆಲಸದಂತೆ ಕಟ್ಟಡ ನಿರ್ಮಾಣದಲ್ಲಿ ಜೊತೆಯಾದರು. ಕೆಲ ವಿಧಾನ ಪರಿಷತ್ ಸದಸ್ಯರು ಸಹಕಾರ ನೀಡಿದರು’ ಎಂದು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.