ಆನೇಕಲ್: ತಾಲ್ಲೂಕಿನ ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯ ಕಮ್ಮಸಂದ್ರದಲ್ಲಿ ಮಾನಸಿಕ ಅಸ್ವಸ್ಥನೊಬ್ಬ ತನ್ನ ಅಣ್ಣನ ಇಬ್ಬರು ಮಕ್ಕಳನ್ನು ಕಬ್ಬಿಣದ ರಾಡ್ ಮತ್ತು ಸುತ್ತಿಗೆಯಿಂದ ಹೊಡೆದು ಕೊಂದಿದ್ದಾನೆ. ಮತ್ತೊಬ್ಬ ಬಾಲಕ ಗಂಭೀರವಾಗಿ ಗಾಯಗೊಂಡಿದ್ದು ಸ್ಥಿತಿ ಗಂಭೀರವಾಗಿದೆ.
ಹಲ್ಲೆಯಲ್ಲಿ ಮೊಹಮ್ಮದ್ ಇಶಾಕ್ (9) ಮತ್ತು ಮಹಮದ್ ಜುನೇದ್ (7) ಮೃತಪಟ್ಟಿದ್ದು, ರೋಹನ್(7) ತಲೆ ಭಾಗಕ್ಕೆ ತೀವ್ರ ಪೆಟ್ಟು ಬಿದ್ದಿದೆ. ಬೆಂಗಳೂರಿನ ನಿಮ್ಹಾನ್ಸ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಕೊಲೆ ಆರೋಪಿ ಖಾಸಿಂನನ್ನು(35) ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಗಾರೆ ಕೆಲಸ ಮಾಡುವ ಚಾಂದ್ ಪಾಷಾ ಕಮ್ಮಸಂದ್ರದ ಮನೆಯಲ್ಲಿ ಪತ್ನಿ, ಮೂವರು ಮಕ್ಕಳು, ತಾಯಿ ಮತ್ತು ತಮ್ಮನ ಜೊತೆ ವಾಸವಿದ್ದರು. ಪತ್ನಿ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡುತ್ತಾರೆ. ದಂಪತಿ ಕೆಲಸಕ್ಕೆ ಮತ್ತು ಪಾಷಾ ತಾಯಿ ಮಾರುಕಟ್ಟೆಗೆ ಹೋಗಿದ್ದರು.
ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಮಕ್ಕಳ ಬಾಯಿಗೆ ಬಟ್ಟೆ ತುರುಕಿದ ಖಾಸಿಂ ಕಬ್ಬಿಣದ ರಾಡ್ ಮತ್ತು ಸುತ್ತಿಗೆಯಿಂದ ಮಕ್ಕಳ ಖಾಸಗಿ ಭಾಗ ಹಾಗೂ ತಲೆಗೆ ಬಲವಾಗಿ ಹೊಡೆದಿದ್ದಾನೆ.
ಮಕ್ಕಳ ಕೂಗಾಟ ಕೇಳಿಸದಂತೆ ಮೂವರ ಬಾಯಿಗೆ ಬಟ್ಟೆ ತುರುಕಿದ್ದರೂ ಮಕ್ಕಳು ಕೂಗು, ಗಲಾಟೆ ಅಕ್ಕಪಕ್ಕದ ಮನೆಯವರಿಗೆ ಕೇಳಿಸಿದೆ. ಅನುಮಾನಗೊಂಡ ಅವರು ಬಾಗಿಲು ತಟ್ಟಿದಾಗ ಖಾಸಿಂ ತೆಗೆಯಲಿಲ್ಲ.
ಆಗ ಬಾಗಿಲು ಒಡೆದು ಒಳ ನುಗ್ಗಿದಾಗ ರಕ್ತದ ಮಡುವಿನಲ್ಲಿ ಬಿದ್ದಿದ್ದ ಮಕ್ಕಳಲ್ಲಿ ಇಬ್ಬರು ಮೃತಪಟ್ಟಿದ್ದರು. ಮತ್ತೊಬ್ಬ ಬಾಲಕ ತೀವ್ರವಾಗಿ ಗಾಯಗೊಂಡಿದ್ದ. ತಕ್ಷಣವೇ ಆತನನ್ನು ಸ್ಥಳೀಯರು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಿದರು.
ಮಾನಸಿಕ ಅಸ್ವಸ್ಥನಾಗಿದ್ದ ಖಾಸಿಂ ಕಳೆದ ತಿಂಗಳು ಮನೆಯಿಂದ ಏಕಾಏಕಿ ಕಾಣೆಯಾಗಿದ್ದ. ತಮ್ಮನನ್ನು ಅಣ್ಣ ಚಾಂದ್ ಪಾಷಾ ಹುಡುಕಿ ಕರೆ ತಂದು ಮನೆಯಲ್ಲಿಯೇ ಇಟ್ಟುಕೊಂಡಿದ್ದ.
ಜಂಟಿ ಪೊಲೀಸ್ ಆಯುಕ್ತ ರಮೇಶ್ ಬಾನೋತ್, ಡಿಸಿಪಿ ಎಂ.ನಾರಾಯಣ್, ಎಸಿಪಿ ಸತೀಶ್, ಇನ್‌ಸ್ಪೆಕ್ಟರ್ ಸೋಮಶೇಖರ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.