
ಆನೇಕಲ್: ಇಲ್ಲಿಗೆ ಸಮೀಪದ ತಮಿಳುನಾಡಿನ ಗಡಿಗ್ರಾಮ ಬ್ಯಾಲಕೆರೆಯಲ್ಲಿ ಶನಿವಾರ ಕಾಡಾನೆ ದಾಳಿಯಲ್ಲಿ ರೈತರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಬ್ಯಾಲಕೆರೆಯ ಪುಟ್ಟಸ್ವಾಮಿ ಮೃತ ರೈತ. ಬ್ಯಾಲಕೆರೆಯಿಂದ ಗುಮ್ಮಳಾಪುರಕ್ಕೆ ಕಾಲ್ನಡಿಗೆಯಲ್ಲಿ ಹೊರಟಿದ್ದ ಪುಟ್ಟಸ್ವಾಮಿ ಮೇಲೆ ಕಾಡಾನೆ ಏಕಾಏಕಿ ದಾಳಿ ನಡೆಸಿತು.
ಆನೇಕಲ್ ತಾಲ್ಲೂಕಿನ ಸೋಲೂರಿನಲ್ಲಿ ಶನಿವಾರ ಬೆಳಗಿನ ಜಾವ ಒಂದು ಮರಿ ಆನೆಯೊಂದಿಗೆ ಪ್ರತ್ಯಕ್ಷವಾಗಿದ್ದ ನಾಲ್ಕು ಕಾಡಾನೆಗಳನ್ನು ಅರಣ್ಯ ಇಲಾಖೆಯ ಸಿಬ್ಬಂದಿ ಪಟಾಕಿ ಹೊಡೆದು ತಮಿಳುನಾಡಿಗೆ ಓಡಿಸಿದ್ದರು.
ಸೋಲೂರು ಗ್ರಾಮದಿಂದ ತಮಿಳುನಾಡಿನ ಗುಮ್ಮಳಾಪುರ ಮಾರ್ಗವಾಗಿ ಕಾಡಾನೆಗಳು ಓಡಾಡಿವೆ. ಕೆಲವು ಕಡೆ ಹೊರತುಪಡಿಸಿದರೆ ದೊಡ್ಡ ಮಟ್ಟದಲ್ಲಿ ಯಾವುದೇ ಬೆಳೆ ಹಾನಿ ಆಗಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ಸೋಲೂರು, ಮೆಣಸಿಗನಹಳ್ಳಿ, ವಣಕನಹಳ್ಳಿ ಸೇರಿದಂತೆ ಕಸಬಾ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಕಾಡಾನೆಗಳ ಉಪಟಳ ಕಳೆದ ಕೆಲವು ವಾರಗಳಿಂದ ಹೆಚ್ಚಾಗಿದೆ. ಮುತ್ಯಾಲಮಡುವು ಸೇರಿದಂತೆ ವಿವಿಧೆಡೆ 10ಕ್ಕೂ ಹೆಚ್ಚು ಕಾಡಾನೆಗಳು ಜ.12ರಂದು ದಾಳಿ ನಡೆಸಿ, ಬೆಳೆ ಹಾನಿ ಮಾಡಿದ್ದವು.
ಅರಣ್ಯ ಇಲಾಖೆಯ ಡಿಆರ್‌ಎಫ್‌ಒ ಶಿವರಾಜು, ಸಿಬ್ಬಂದಿ ಚಿನ್ನಸ್ವಾಮಿ, ನಿಂಗಯ್ಯ, ಬಸವಲಿಂಗಪ್ಪ, ಶ್ರೀನಿವಾಸ್ ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.
ಕಾಡಾನೆಗಳು ನಾಡಿನತ್ತ ಬರುವುದನ್ನು ತಪ್ಪಿಸಲು ಅರಣ್ಯ ಇಲಾಖೆ ಸಿಬ್ಬಂದಿ ಅತ್ಯಾಧುನಿಕ ತಂತ್ರಜ್ಞಾನ ಬಳಸಬೇಕು. ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ ಎಂಬಂತೆ ಕಷ್ಟ ಪಟ್ಟು ಬೆಳೆದ ಬೆಳೆಯನ್ನು ಆನೆಗಳು ಒಂದೇ ನಿಮಿಷದಲ್ಲಿ ಹಾಳು ಮಾಡುತ್ತವೆ.-ಗುರುಮೂರ್ತಿ ಸೋಲೂರಿನ ರೈತ
ಹುಚ್ಚಾಟ ನಿಭಾಯಿಸುವುದೇ ಕಷ್ಟ ವಿಡಿಯೊ ಮಾಡಲು ಯುವಕರ ಗುಂಪು ಕಾಡಾನೆಗಳ ಸಮೀಪಕ್ಕೆ ಹೋಗುತ್ತಿದ್ದನ್ನು ತಡೆದ ಅರಣ್ಯ ಇಲಾಖೆಯ ಸಿಬ್ಬಂದಿ ಆನೆ ಬಳಿ ಹೋಗದಂತೆ ಸೂಚನೆ ನೀಡಿದರು. ಅರಣ್ಯ ಇಲಾಖೆಯ ಸಿಬ್ಬಂದಿಗೆ ಕಾಡಾನೆ ಓಡಿಸುವುದರ ಜೊತೆಗೆ ಸ್ಥಳೀಯರನ್ನು ನಿಭಾಯಿಸುವುದೇ ದೊಡ್ಡ ತಲೆನೋವಾಗಿತ್ತು. ಪ್ರತಿ ಬಾರಿ ಕಾಡಾನೆ ಹಿಂಡು ಕಾಣಿಸಿಕೊಂಡಾಗ ತಂಡೋಪತಂಡ ಯುವಕರು ಕಿರುಚಾಡುತ್ತಾ ಕಾಡಾನೆಗಳ ಚಿತ್ರ ಸೆರೆ ಹಿಡಿಯಲು ಹೋಗುತ್ತಾರೆ. ಪ್ರತಿ ಬಾರಿ ಅರಣ್ಯ ಇಲಾಖೆಯ ಸಿಬ್ಬಂದಿ ಎಚ್ಚರಿಕೆ ನೀಡಿದರೂ ಕೇಳುವುದಿಲ್ಲ.
ಹಳ್ಳಕ್ಕೆ ಬಿದ್ದ ಮರಿಯಾನೆ ರಕ್ಷಿಸಿದ ತಾಯಾನೆ ಸೋಲೂರು ಬಳಿ ಶನಿವಾರ ಬೆಳ್ಳಂ ಬೆಳಗ್ಗೆ ಕಾಡಾನೆಗಳು ಪ್ರತ್ಯಕ್ಷವಾಗಿದ್ದವು. ಸಾರ್ವಜನಿಕರ ಕೂಗಾಟಕ್ಕೆ ಗಾಬರಿಗೊಂಡಿದ್ದ ಕಾಡಾನೆಗಳು ಜೋರಾಗಿ ಓಡಾಡುತ್ತಿದ್ದವು. ಈ ಸಂದರ್ಭದಲ್ಲಿ ಹಿಂಡಿನಲ್ಲಿದ್ದ ಮರಿಯಾನೆಯೊಂದು ಹಳ್ಳಕ್ಕೆ ಬಿತ್ತು ಮೇಲೆಳಲು ಕಷ್ಟಪಡುತ್ತಿತ್ತು. ಈ ಸಂದರ್ಭದಲ್ಲಿ ತಾಯಾನೆಯು ಮರಿಯಾನೆಗೆ ಸಹಾಯ ಮಾಡಿ ಸೋಂಡಿಲಿನಿಂದ ಮೇಲೆಕ್ಕೆತ್ತಿ ಜೊತೆಯಲ್ಲಿ ಕರೆದು ಹೋಯಿತು. ಇದಾದ ನಂತರ ತಾಯಾನೆ ಮರಿಯಾನೆಯನ್ನು ಎಲ್ಲಿಯೂ ಒಬ್ಬಂಟಿ ಮಾಡದೇ ಜೊತೆಯಲ್ಲಿಯೇ ಸಾಗುತ್ತಿದ್ದ ದೃಶ್ಯ ಕಂಡು ಬಂದಿತು.
- ಭೂತಾನಹಳ್ಳಿಯಲ್ಲಿ ಒಂಟಿ ಸಲಗ ಬನ್ನೇರುಘಟ್ಟ ಸಮೀಪದ ಭೂತಾನಹಳ್ಳಿಯಲ್ಲಿ ಒಂಟಿ ಸಲಗವೊಂದು ಶುಕ್ರವಾರ ಸಂಜೆ ಕಂಡು ಬಂದಿದೆ. ಭೂತಾನಹಳ್ಳಿ ಅಮೃತಮಹಲ್ ಕಾವಲ್ ಸೇರಿದಂತೆ ವಿವಿಧೆಡೆ ಕಳೆದ ಒಂದು ವಾರದಿಂದ ಒಂಟಿ ಸಲಗವೊಂದು ಓಡಾಡುತ್ತಿದೆ. ಇತ್ತೀಚಿಗೆ ರಾಗಿಹಳ್ಳಿ ಬಳಿ ಇದೇ ಒಂಟಿ ಸಲಗ ಗ್ರಾಮದ ಬೀದಿಗಳಲ್ಲಿ ಓಡಾಡಿ ದ್ವಿಚಕ್ರ ವಾಹನವೊಂದನ್ನು ಜಖಂಗೊಳಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.