ADVERTISEMENT

ದೊಡ್ಡಬಳ್ಳಾಪುರ: ಗ್ರಾಚ್ಯುಟಿ ಹಣಕ್ಕೆ ಒತ್ತಾಯಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2025, 2:08 IST
Last Updated 1 ನವೆಂಬರ್ 2025, 2:08 IST
ದೊಡ್ಡಬಳ್ಳಾಪುರದ ಸಿಡಿಪಿಒ ಕಚೇರಿ ಮುಂದೆ ಅಂಗನವಾಡಿ ಕಾರ್ಯಕರ್ತೆಯರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು
ದೊಡ್ಡಬಳ್ಳಾಪುರದ ಸಿಡಿಪಿಒ ಕಚೇರಿ ಮುಂದೆ ಅಂಗನವಾಡಿ ಕಾರ್ಯಕರ್ತೆಯರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು   

ದೊಡ್ಡಬಳ್ಳಾಪುರ: 2011 ರಿಂದ 2023 ಮಾರ್ಚ್‌ವರೆಗೆ ನಿವೃತ್ತಿಯಾದ ಎಲ್ಲಾ ಅಂಗನವಾಡಿ ಕಾರ್ಯಕರ್ತೆಯರಿಗೂ ಮತ್ತು ಸಹಾಯಕಿಯರಿಗೂ ಗ್ರಾಚ್ಯುಟಿ ಮೊತ್ತ ನೀಡುವಂತೆ ಒತ್ತಾಯಿಸಿ ನಗರದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿರುವ ಸಿಡಿಪಿಒ ಕಚೇರಿ ಆವರಣದಲ್ಲಿ ಅಂಗನವಾಡಿ ಕಾರ್ಯಕರ್ತೆ, ಸಹಾಯಕಿಯರ ಪ್ರತಿಭಟನೆ ನಡೆಸಿದರು.

ಸುಪ್ರೀಂಕೋರ್ಟ್ 2022ರಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಕೆಲಸ ಮಾಡುವ ಎಲ್ಲಾ ಕಾರ್ಯಕರ್ತರು, ಸಹಾಯಕಿಯರಿಗೂ ಕಾಯಿದೆ 1972 ನಿರ್ಬಂಧನೆಗಳು ಅನ್ವಯವಾಗುತ್ತವೆ ಎಂಬ ತೀರ್ಪು ನೀಡಿದೆ. ಈ ತೀರ್ಪು ರಾಜ್ಯದಲ್ಲಿ ಜಾರಿಯಾಗಬೇಕೆಂದು 2023 ಜನವರಿಯಲ್ಲಿ ದೀರ್ಘ ಚಳುವಳಿ ನಡೆಸಲಾಗಿತ್ತು. ಇದರ ಪರಿಣಾಮ ಇಲಾಖೆ ಗ್ರಾಚ್ಯುಟಿ ಜಾರಿ ಮಾಡಿದೆ. ಈ ಆದೇಶವೂ 2011ರಿಂದ -2023ರ ಮಾರ್ಚ್ ತನಕ ನಿವೃತ್ತಿಯಾಗಿರುವ ರಾಜ್ಯದ 10,311 ಅಂಗನವಾಡಿ ಕಾರ್ಯಕರ್ತೆಯರು, 11,980 ಸಹಾಯಕಿಯರಿಗೂ ಅನ್ವಯಿಸಬೇಕು ಎಂದು ಅಂಗನವಾಡಿ ಕಾರ್ಯಕರ್ತೆಯರ ಸಂಘದ ಜಿಲ್ಲಾಧ್ಯಕ್ಷೆ ನಳಿನಾಕ್ಷಿ ಆಗ್ರಹಿಸಿದರು.

ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆಯ ಸಚಿವರೊಂದಿಗೆ ಸಭೆ ನಡೆಸಿ ಸುಮಾರು ₹183 ಕೋಟಿ ಅನುದಾನ ಬಿಡುಗಡೆಗಾಗಿ ಹಣಕಾಸು ಇಲಾಖೆಗೆ ಕಳುಹಿಸಲಾಗಿತ್ತು. ಆದರೆ ಹಣಕಾಸು ಇಲಾಖೆ ಈ ಅನುದಾನ ಬಿಡುಗಡೆ ಮಾಡದೇ ಸತಾಯಿಸುತ್ತಿದೆ. ಇದರಿಂದ ನಿವೃತ್ತರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ. ಕೂಡಲೇ ಅನುದಾನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದರು.

ADVERTISEMENT

ತಾಲ್ಲೂಕು ಅಂಗನವಾಡಿ ಕಾರ್ಯಕರ್ತೆಯರ ಸಂಘದ ಅಧ್ಯಕ್ಷೆ ನಾಗಮಣಿ, ನಾನಾ ಬೇಡಿಕೆ ಈಡೇರಿಸಿಕೊಳ್ಳಲು ಸಾಕಷ್ಟು ಹೋರಾಟ ಮಾಡಿಕೊಂಡು ಬರಲಾಗುತ್ತಿದೆ. ಅದರಲ್ಲೂ ಸರ್ಕಾರ ನೀಡುವ ಕಡಿಮೆ ವೇತನದಲ್ಲಿ ಕರ್ತವ್ಯ ನಿರ್ವಹಿಸಲಾಗುತ್ತಿದೆ. ಸರ್ಕಾರ ಗ್ರಾಚ್ಯುಟಿ ಹಣ ಬಿಡುಗಡೆ ಮಾಡಿದರೆ ಸಾಕಷ್ಟು ಜನರಿಗೆ ಔಷಧಿಗಳು, ಆಹಾರಕ್ಕೆ ಅನುಕೂಲವಾಗಲಿದೆ. ಆದ್ದರಿಂದ ಆದಷ್ಟು ಬೇಗ ಫಲಾನುಭವಿಗಳಿಗೆ ಹಣ ಬಿಡುಗಡೆ ಮಾಡಬೇಕು ಎಂದು ಮನವಿ ಮಾಡಿದರು.

ಅಂಗನವಾಡಿ ನೌಕರರಾದ ಸಾವಿತ್ರಮ್ಮ, ಗಿರಿಜಾ ಸೇರಿದಂತೆ ಅನೇಕರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.