ADVERTISEMENT

ದೊಡ್ಡಬಳ್ಳಾಪುರ, ದೇವನಹಳ್ಳಿ ಬರಪೀಡಿತ ತಾಲ್ಲೂಕು ಘೋಷಣೆಗೆ ರೈತ ಸಂಘದ ಒತ್ತಾಯ

ಬಾರದ ವಾಡಿಕೆ ಮಳೆ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2018, 13:01 IST
Last Updated 15 ಅಕ್ಟೋಬರ್ 2018, 13:01 IST
ಪ್ರವಾಸಿ ಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ರೈತ ಮುಖಂಡರು
ಪ್ರವಾಸಿ ಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ರೈತ ಮುಖಂಡರು   

ದೇವನಹಳ್ಳಿ: ಮುಂಗಾರು ಮತ್ತು ಹಿಂಗಾರು ವಾಡಿಕೆ ಮಳೆ ಕೈಕೊಟ್ಟಿರುವ ಪರಿಣಾಮ ಸರ್ಕಾರ ಜಿಲ್ಲೆಯ ದೊಡ್ಡಬಳ್ಳಾಪುರ ಮತ್ತು ದೇವನಹಳ್ಳಿ ತಾಲ್ಲೂಕನ್ನು ಬರಪೀಡಿತವೆಂದು ಘೋಷಣೆ ಮಾಡಬೇಕೆಂದು ರೈತ ಸಂಘ ಒಕ್ಕೊರಲಿನಿಂದ ಒತ್ತಾಯಿಸಿತು.

ಪ್ರವಾಸಿ ಮಂದಿರದಲ್ಲಿ ಸೋಮವಾರ ನಡೆದ ರೈತ ಸಂಘದ ಜಿಲ್ಲಾ ಕಾರ್ಯಕಾರಣಿ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆಂಚನಗೌಡ, ಹೊಸಕೋಟೆ ತಾಲ್ಲೂಕನ್ನು ಈಗಾಗಲೇ ಬರಪೀಡಿತವೆಂದು ಸರ್ಕಾರ ಘೋಷಣೆ ಮಾಡಿದೆ. ಇತರೆ ತಾಲ್ಲೂಕುಗಳನ್ನು ಕಡೆಗಣಿಸಿರುವ ಉದ್ದೇಶವೇನು ಎಂಬುದು ಗೊತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬರಪೀಡಿತ ಎಂಬುದರ ಸಮೀಕ್ಷೆ ಮಾಡುವುದೇ ಅವೈಜ್ಞಾನಿಕ. ಬೆಂಗಳೂರು ನಗರದಲ್ಲಿ ಕುಳಿತು ಉಪಗ್ರಹ ಮೂಲಕ ಮಾಹಿತಿ ಪಡೆಯಲಾಗುತ್ತದೆ. ಒಂದು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಲ್ಪಸ್ವಲ್ಪ ಮಳೆಯಾದರೆ ಬೇರೆ ಕಡೆ ಒಂದು ಹನಿ ನೀರು ಬಿದ್ದಿರುವುದಿಲ್ಲ. ಬಿತ್ತನೆ ಪೈರು ಒಣಗುತ್ತಿದೆ, ಜಮೀನುಗಳಿಗೆ ತೆರಳಿ ಕೃಷಿ ಅಧಿಕಾರಿಗಳು ನಿಖರ ಮಾಹಿತಿ ಪಡೆದು ಸರ್ಕಾರಕ್ಕೆ ಸಲ್ಲಿಸುವಂತಾಗಬೇಕು ಎಂದು ಒತ್ತಾಯಿಸಿದರು.

ADVERTISEMENT

ರೈತ ಸಂಘ ರಾಜ್ಯ ಘಟಕದ ಉಪಾಧ್ಯಕ್ಷ ವೆಂಕಟನಾರಾಯಣಪ್ಪ ಮಾತನಾಡಿ, ಸರ್ಕಾರ ರೈತರ ಸಾಲ ಮನ್ನಾ ಭಾಗ್ಯ ಎಂದು ಘೋಷಣೆ ಮಾಡಿದೆ. ಈವರೆಗೆ ಬಿಡಿಗಾಸು ನೀಡಿಲ್ಲ. ನಾವು ಸರ್ಕಾರವನ್ನೆ ನೆಚ್ಚಿ ಕುಳಿತರೆ ಮಣ್ಣು ತಿನ್ನಬೇಕಾಗುತ್ತದೆ, ಹೋರಾಟದ ಮೂಲಕ ಸರ್ಕಾರಕ್ಕೆ ಚಾಟಿ ಬೀಸುವ ಕೆಲಸವಾಗಬೇಕು ಎಂದರು.

ಪ್ರತಿಯೊಂದು ಇಲಾಖೆ ವ್ಯಾಪ್ತಿಯಲ್ಲಿ ಪ್ರತಿಯೊಬ್ಬ ರೈತ ಕಾವಲುಗಾರನಾಗಿ ಸಚಿವನಂತೆ ಕೆಲಸ ಮಾಡಬೇಕು. ಸರ್ಕಾರದಿಂದ ಬರುವ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಂಡು ರೈತರಿಗೆ ತಲುಪಿಸಬೇಕು ಎಂದರು.

ಗ್ರಾಮ ಶಾಖೆ, ವಿದ್ಯಾರ್ಥಿ ರೈತ ಘಟಕ ಸ್ಥಾಪನೆ, ರೈತರಿಗೆ ಗುರುತಿನ ಚೀಟಿ, ಸಂಘದ ಸಂಘಟನೆ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.

ಜಿಲ್ಲಾ ಘಟಕದ ಕಾರ್ಯದರ್ಶಿ ಪ್ರಕಾಶ್, ತಾಲ್ಲೂಕು ಘಟಕದ ಗೌರವಾಧ್ಯಕ್ಷ ಮುನಿಶ್ಯಾಮಪ್ಪ, ಹಸಿರು ಸೇನೆ ಜಿಲ್ಲಾ ಘಟಕ ಅಧ್ಯಕ್ಷ ನಾರಾಯಣಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.