
ಅನುಗೊಂಡನಹಳ್ಳಿ(ಹೊಸಕೋಟೆ): ದೇವಲಾಪುರ– ದೇವನಗುಂದಿ ಡಾಂಬರ್ ರಸ್ತೆ ಲೋಕಾರ್ಪಣೆಗೆ ಬಂದಿದ್ದ ಶಾಸಕ ಶರತ್ ಬಚ್ಚೇಗೌಡ ಹಾಗೂ ದೇವನಗುಂದಿ ಗ್ರಾಮ ಪಂಚಾಯಿತಿಯ ಪಿಡಿಒ ಹರೀಶ್ ಅವರನ್ನು ದೇವಲಾಪುರ ಗ್ರಾಮಸ್ಥರು ತರಾಟೆಗೆ ತೆಗೆದುಕೊಂಡರು.
ಗ್ರಾಮಕ್ಕೆ ಸರಿಯಾದ ರಸ್ತೆ ಇಲ್ಲ, ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲ. ದಲಿತರಿಗೆ ಪ್ರತ್ಯೇಕ ಸಮುದಾಯ ಭವನ ಇಲ್ಲ. ಎಲ್ಲಿ ಸಮುದಾಯದ ಕಾರ್ಯಕ್ರಮ ಮಾಡಬೇಕು. 15 ರಿಂದ 20 ದಿನವಾದರೂ ನೀರು ಬರಲ್ಲ. ಗ್ರಾಮ ಪಂಚಾಯಿತಿಗೆ ಮನವಿ ಮಾಡಿಕೊಂಡು ಸಾಕಾಗಿ ಹೋಗಿದೆ. ಗ್ರಾಮ ಪಂಚಾಯಿತಿ ಅಧಿಕಾರಿ ನಿರ್ಲಕ್ಷ್ಯಮತ್ತು ಪಕ್ಷಪಾತ ತೋರುತ್ತಿದ್ದಾರೆ ಎಂದು ದೂರಿದರು.
ನಂತರ ಶಾಸಕ ಶರತ್ ಬಚ್ಚೇಗೌಡ ಅವರನ್ನು ತರಾಟೆಗೆ ತೆಗೆದುಕೊಂಡ ಗ್ರಾಮಸ್ಥರು, ‘ಇನ್ನಾದರೂ ಹುಸಿ ಭರವಸೆ ನೀಡುವುದನ್ನು ಬಿಟ್ಟು ಮೂಲ ಸೌಲಭ್ಯ ಕಲ್ಪಿಸಿಕೊಡಿ. ಕನಿಷ್ಠ ಎರಡು ದಿನಕ್ಕೆ ಒಮ್ಮೆಯಾದರೂ ನೀರು ಬಿಡಲು ಶೀಘ್ರ ವ್ಯವಸ್ಥೆ ಮಾಡಿ. ಗ್ರಾಮದಲ್ಲಿ ನಿಮಗೆ ಹೆಚ್ಚು ಮತ ಬಂದಿವೆ. ನಮ್ಮನ್ನು ಕಡೆಗಣಿಸಬೇಡಿ’ ಎಂದು ಮನವಿ ಮಾಡಿದರು.
ದೇವಲಾಪುರದಿಂದ ದೇವನಗುಂದಿ ತನಕ ₹60 ಲಕ್ಷ ವೆಚ್ಚದ ಡಾಂಬರ ರಸ್ತೆ ಅಭಿವೃದ್ದಿ ಕಾಮಗಾರಿ ಹಾಗೂ ಸಮೇತನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆ. ಮಲ್ಲಸಂದ್ರ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ 648ರ ಮುಖ್ಯ ರಸ್ತೆಯಿಂದ ಡೆಲ್ಲಿ ಪಬ್ಲಿಕ್ ಸ್ಕೂಲ್‌ವರೆಗೆ ಶಾಸಕರ ಅನುದಾನದಲ್ಲಿ ₹20 ಲಕ್ಷ ವೆಚ್ಚದ ಸಿ.ಸಿ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದರು.
ಮುಂದಿನ ದಿನಗಳಲ್ಲಿ ಈ ರಸ್ತೆಯನ್ನು ಕಾಡಗೋಡಿ ಗಡಿವರೆಗೆ 60 ಅಡಿ ಅಗಲದ ರಸ್ತೆಯನ್ನಾಗಿ ಮಾರ್ಪಡಿಸಿ, ವೈಟ್ ಫೀಲ್ಡ್ ಕಡೆಯಿಂದ ಹೊಸಕೋಟೆಗೆ ತಿರುಮಶೆಟ್ಟಿಹಳ್ಳಿ ಮೂಲಕ ಸುತ್ತಿ ಬಳಿಸಿ ಬರುವುದನ್ನು ತಪ್ಪಿಸಲು ಯೋಜನೆ ಸಿದ್ದಪಡಿಸಲಾಗುತ್ತಿದೆ. ಇದರಿಂದ ಸಮಯ, ಹಣ ಎಲ್ಲವೂ ಉಳಿಯಲಿದೆ. ಈ ಕಾಮಗಾರಿಗೆ ಸುಮಾರು ₹3 ರಿಂದ ₹4 ಕೋಟಿ ವೆಚ್ಚ ಆಗಬಹುದೆಂದು ಅಂದಾಜಿಸಲಾಗಿದೆ ಎಂದರು.
ಸಮೇತನಹಳ್ಳಿ ಗ್ರಾ. ಪಂ. ಪಿಡಿಒ ಪ್ರಸಾದ್, ಅಧ್ಯಕ್ಷ ಕಾಂತರಾಜು, ಗುತ್ತಿಗೆದಾರರಾದ ಬ್ಯಾಟೆಗೌಡ ಗೋವಿಂದಪ್ಪ, ಬಾಬು, ಬೋಧನಹೊಸಹಳ್ಳಿ ಪ್ರಕಾಶ್, ಮುತ್ಕೂರು ಮುನಿರಾಜು, ಬಿ.ಕೆ. ಮಂಜುನಾಥ್, ಮಾರೇಗೌಡ, ಶೇಶಪ್ಪ, ವಾಸು ಉಪಸ್ಥಿತರಿದ್ದರು.
ಮುಖ್ಯಮಂತ್ರಿ ಬದಲಾವಣೆ ಕಾಂಗ್ರೆಸ್ ಹೈಕಮಾಂಡ್‌ಗೆ ಬಿಟ್ಟ ವಿಚಾರ. ಯಾರು ಏನೇ ಹೇಳಿದರೂ ಅದು ಅವರ ವೈಯಕ್ತಿಕ ವಿಚಾರವಷ್ಟೇ. ಅದಕ್ಕೆ ಯಾವುದೇ ಮಾನ್ಯತೆ ಮಹತ್ವ ಇರುವುದಿಲ್ಲ
– ಶರತ್ ಬಚ್ಚೇಗೌಡ ಶಾಸಕ ಹೊಸಕೋಟೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.