ADVERTISEMENT

ಆನೇಕಲ್ | ಸಾಲ ಮರಳಿಸದ ಮಹಿಳೆಯರ ಮೇಲೆ ಹಲ್ಲೆ, ವೃದ್ಧನನ್ನು ಕೂಡಿ ಹಾಕಿ ಕಿರುಕುಳ

​ಪ್ರಜಾವಾಣಿ ವಾರ್ತೆ
Published 1 ಜುಲೈ 2022, 10:51 IST
Last Updated 1 ಜುಲೈ 2022, 10:51 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಆನೇಕಲ್ (ಬೆಂಗಳೂರು ಗ್ರಾಮಾಂತರ ಜಿಲ್ಲೆ): ಸರ್ಜಾಪುರ ಪೊಲೀಸ್‌ ಠಾಣೆ ವ್ಯಾಪ್ತಿಯ ನೆರಿಗಾ ಗ್ರಾಮದಲ್ಲಿ ಸಾಲ ಹಿಂದಿರುಗಿಸಲಿಲ್ಲ ಎಂಬ ಕಾರಣಕ್ಕೆ ಮಹಿಳೆಯರಿಬ್ಬರ ಮೇಲೆ ಹಲ್ಲೆ ನಡೆಸಿ, ಬಟ್ಟೆ ಹರಿದು ಹಾಕಲಾಗಿದೆ.

ನೆರಿಗಾ ಗ್ರಾಮದ ಸುಬ್ಬಾರೆಡ್ಡಿ ಅವರ ಪುತ್ರಿಯರಾದ ಶಾಂತಿಪ್ರಿಯ ಮತ್ತು ಭಾನುಪ್ರಿಯ ಅವರ ಮೇಲೆ ಆರೋಪಿಗಳಾದ ರಾಮಕೃಷ್ಣಾ ರೆಡ್ಡಿ, ಇಂದಿರಮ್ಮ ಮತ್ತು ಇವರ ಮಗ ಸುನೀಲ್‌ ಕುಮಾರ್‌ ಹಲ್ಲೆ ಮಾಡಿದ್ದಾರೆ ಎಂದು ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.

ಶಾಂತಿಪ್ರಿಯ ಅವರು ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಐದು ವರ್ಷಗಳ ಹಿಂದೆ ₹1 ಲಕ್ಷ ಸಾಲ ಪಡೆದಿದ್ದರು. ಇದಕ್ಕೆ ನಿಯಮಿತವಾಗಿ ಬಡ್ಡಿ ಪಾವತಿಸಿದ್ದರು. ಕೋವಿಡ್‌–19 ನಂತರ ಬಡ್ಡಿ ಪಾವತಿಸಿರಲಿಲ್ಲ ಎನ್ನಲಾಗಿದೆ. ಹಣ ವಸೂಲಿ ಮಾಡಲು ಬಂದ ರಾಮಕೃಷ್ಣಾರೆಡ್ಡಿ, ಇಂದಿರಮ್ಮ ಮತ್ತು ಸುನೀಲ್‌ ಅವರು ಶಾಂತಿಪ್ರಿಯ ಅವರ ತಂದೆ ಸುಬ್ಬಾರೆಡ್ಡಿ ಅವರನ್ನು ಕೊಠಡಿಯಲ್ಲಿ ಕೂಡಿಹಾಕಿದ್ದಾರೆ. ಬಳಿಕ ಶಾಂತಿಪ್ರಿಯ ಅವರ ಮೇಲೆ ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ. ಈ ಸಂದರ್ಭದಲ್ಲಿ ಬಿಡಿಸಲು ಬಂದ ಭಾನುಪ್ರಿಯ ಅವರ ಬಟ್ಟೆ ಹರಿದು ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ADVERTISEMENT

ವರ್ಷಕ್ಕೆ ₹1 ಲಕ್ಷಕ್ಕೆ ಶೇ 30ರಷ್ಟು ಬಡ್ಡಿ ಹಾಕಿ ಒಟ್ಟು ₹11 ಲಕ್ಷ ಪಾವತಿಸಬೇಕು ಎಂದು ಹೇಳುತ್ತಿದ್ದಾರೆ. ಸಾಲ ವಾಪಸ್‌ ನೀಡುವುದಾಗಿ ತಿಳಿಸಿದರೂ ಸಹ ಹಲ್ಲೆ ನಡೆಸಿದ್ದಾರೆ ಎಂದು ಶಾಂತಿಪ್ರಿಯ ಆರೋಪಿಸಿದ್ದಾರೆ.

‘ಈಘಟನೆ ನಡೆದ ನಂತರ ಭಾನುವಾರ ಠಾಣೆಗೆ ಬಂದಿದ್ದರು. ಆದರೆ ಮಾತುಕತೆ ಮಾಡಿ ವಿವಾದ ಬಗೆಹರಿಸಿಕೊಳ್ಳುವುದಾಗಿ ಹೊರಟು ಹೋದರು. ನಂತರ ಸೋಮವಾರ ಬಂದು ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ರಾಮಕೃಷ್ಣಾ ರೆಡ್ಡಿ ಮತ್ತು ಸುನೀಲ್‌ ಅವರನ್ನು ಬಂಧಿಸಲಾಗಿದೆ’ ಎಂದು ಸರ್ಜಾಪುರ ಪೊಲೀಸ್‌ ಠಾಣೆಯ ಸರ್ಕಲ್‌ ಇನ್‌ಸ್ಪೆಕ್ಟರ್‌ ರಾಘವೇಂದ್ರ ಇಮ್ರಾಪುರ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.