ADVERTISEMENT

ಹೊಸಕೋಟೆ: ದಲಿತರ ಮೇಲೆ ಹಲ್ಲೆ ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

ಪೊಲೀಸರ ವಿರುದ್ಧ ಪ್ರತಿಭಟನಾ ಸಭೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2020, 13:58 IST
Last Updated 13 ಜನವರಿ 2020, 13:58 IST
ಹೊಸಕೋಟೆ ತಾಲ್ಲೂಕಿನ ಸಾದಪ್ಪನಹಳ್ಳಿಯಲ್ಲಿ ದಲಿತರ ಮೇಲೆ ಹಲ್ಲೆ ಮಾಡಿದ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ದಲಿತ ಪರ ಸಂಘಟನೆಗಳು ನಗರದ ಪೊಲೀಸ್ ಕಛೇರಿಯ ಮುಂದೆ ಚನ್ನ ಕೃಷ್ಣಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಹೊಸಕೋಟೆ ತಾಲ್ಲೂಕಿನ ಸಾದಪ್ಪನಹಳ್ಳಿಯಲ್ಲಿ ದಲಿತರ ಮೇಲೆ ಹಲ್ಲೆ ಮಾಡಿದ ಆರೋಪಿಗಳನ್ನು ಕೂಡಲೇ ಬಂಧಿಸುವಂತೆ ಆಗ್ರಹಿಸಿ ದಲಿತ ಪರ ಸಂಘಟನೆಗಳು ನಗರದ ಪೊಲೀಸ್ ಕಛೇರಿಯ ಮುಂದೆ ಚನ್ನ ಕೃಷ್ಣಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.   

ಹೊಸಕೋಟೆ: ತಾಲ್ಲೂಕಿನ ತಿಮ್ಮಸಂದ್ರ ಮತ್ತು ಸಾದಪ್ಪನಹಳ್ಳಿಯಲ್ಲಿ ದಲಿತರ ಮೇಲೆ ದೌರ್ಜನ್ಯವಾಗಿ ಒಂದು ವಾರ ಕಳೆದಿದ್ದರೂ ಪೊಲೀಸ್ ಇಲಾಖೆ ಇದುವರೆಗೂ ಯಾರನ್ನೂ ಬಂಧಿಸದಿರುವುದು ಇಲಾಖೆಯ ವೈಫಲ್ಯವೆಂದು ಕರ್ನಾಟಕ ಸಮತಾ ಸೈನಿಕ ದಳದ ರಾಜ್ಯ ಘಟಕದ ಅಧ್ಯಕ್ಷ ಬಿ. ಚನ್ನಕೃಷ್ಣಪ್ಪ ಆರೋಪಿಸಿದರು.

ಅವರು ನಗರದ ಡಿವೈಎಸ್ ಪಿ ಕಛೇರಿಯ ಬಳಿ ದಲಿತರ ಮೇಲೆ ಹಲ್ಲೆ ಮಾಡಿದವರನ್ನು ಬಂಧಿಸದ ಪೊಲೀಸರ ವಿರುದ್ಧ ಪ್ರತಿಭಟನಾ ಸಭೆಯಲ್ಲಿ ಮಾತನಾಡುತ್ತಿದ್ದರು.

ನಗರದ ಪ್ರವಾಸಿ ಮಂದಿರದಿಂದ ನೂರಾರು ಸಂಖ್ಯೆಯಲ್ಲಿ ಹೊರಟ ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿ, ‘ಪೊಲೀಸರು ಯಾರನ್ನೂ ಬಂಧಿಸಿಲ್ಲ. ಇದರಿಂದ ಪ್ರತಿಭಟನೆ ಅನಿವಾರ್ಯವಾಯಿತು. ತಾಲ್ಲೂಕಿನಲ್ಲಿ 56 ಸಾವಿರ ಮತದಾರರಿದ್ದೂ ಘಟನೆ ನಡೆದ ಸ್ಥಳಕ್ಕೆ ನಮ್ಮಿಂದ ಓಟು ಪಡೆದ ಶಾಸಕರಾಗಲಿ, ಸಂಸದರಾಗಲಿ ಅಥವಾ ಮಾಜಿ ಶಾಸಕರಾಗಲಿ ಬಂದಿಲ್ಲ’ ಎಂದು ಟೀಕಿಸಿದರು.

ADVERTISEMENT

ಅವರಿಗೆ ಮತ ನೀಡಿದ ನಾವು ಪಶ್ಚಾತ್ತಾಪ ಪಡಬೇಕು. ಜತೆಗೆ ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆಗಲಿ ಸ್ಥಳಕ್ಕೆ ಭೇಟಿಕೊಟ್ಟು ಪರಿಶೀಲಿಸಿಲ್ಲ. ಇದನ್ನು ಗಮನಿಸಿದರೆ ಅವರಿಗೆ ವಿಷಯದ ಬಗ್ಗೆ ನಿರ್ಲಕ್ಷ್ಯ ವಹಿಸಿರುವುದು ತಿಳಿಯುತ್ತದೆ ಎಂದರು.

25 ವರ್ಷಗಳಿಂದ ಸಾದಪ್ಪನಹಳ್ಳಿ ಯಲ್ಲಿ ದಲಿತರ ಮೇಲೆ ಸವರ್ಣೀಯರಿಂದ ನಿರಂತರವಾಗಿ ಹಲ್ಲೆ ನಡೆಯುತ್ತಿದ್ದರೂ ಅದನ್ನು ತಡೆಯುವುದಕ್ಕೆ ಇಲಾಖೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ.ತಕ್ಷಣ ಹಲ್ಲೆ ಮಾಡಿದ ಸವರ್ಣೀಯರಾದ ಗುಂಡಪ್ಪ ಮತ್ತು ಭಕ್ತರಹಳ್ಳಿ ನಂಜಪ್ಪ ಅವರನ್ನು ಕೂಡಲೇ ಬಂಧಿಸಿ ಗಡಿಪಾರು ಮಾಡಬೇಕೆಂದು ಆಗ್ರಹಿಸಿದರು.

ಸಭೆಯಲ್ಲಿ ಪ್ರಗತಿ ಪರ ನಾಯಕ ಚಿನ್ನಸ್ವಾಮಿ, ಅಲ್ಪಸಂಖ್ಯಾತ ಮುಖಂಡ ಹೈದರ್ ಮಾತನಾಡಿದರು ಅನಂತರ ಆರೋಪಿಗಳನ್ನು ತಕ್ಷಣ ಬಂಧಿಸುವಂತೆ ಮನವಿ ಪತ್ರವನ್ನು ನೀಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ಡಿವೈಎಸ್‌ಪಿ ಸಕ್ರಿ, ಯಾವುದೇ ಕಾರಣಕ್ಕೂ ಆರೋಪಿಗಳನ್ನು ರಕ್ಷಿಸುವ ಕೆಲಸವನ್ನು ಇಲಾಖೆ ಮಾಡುವುದಿಲ್ಲ. ಅವರನ್ನು ಬಂಧಿಸಲು ಈಗಾಗಲೇ ಅವರ ಚಲನವಲನಗಳನ್ನು ಗಮನಿಸುತ್ತಿದ್ದೇವೆ. ಶೀಘ್ರವೇ ಅವರನ್ನು ಬಂಧಿಸಿ ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದರು.

ಗ್ರಾಮದಲ್ಲಿ ಜನರು ಶಾಂತಯುತವಾಗಿ ಬದುಕಲು ಪೊಲೀಸ್ ಇಲಾಖೆ ಸಹಕರಿಸುತ್ತದೆ ಎಂದು ಆಶ್ವಾಸನೆ ಇತ್ತರು. ಸಭೆಯಲ್ಲಿ ಭಾಗವಹಿಸಿದ್ದ ದೌರ್ಜನ್ಯಕೊಳಗಾದವರು ತಮಗೆ ಗ್ರಾಮದಲ್ಲಿ ಸೂಕ್ತ ರಕ್ಷಣೆ ನೀಡುವಂತೆ ಪೊಲೀಸರನ್ನು ಕೇಳಿಕೊಂಡರು.

ದರ್ಶನ್, ಸ್ವಾಭಿಮಾನಿ ಸಂಘಟನೆಯ ಶಿವಕುಮಾರ್, ನೂರಾರು ದಲಿತ ಕಾರ್ಯಕರ್ತರು ಮತ್ತು ಮಹಿಳೆಯರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.