ADVERTISEMENT

ದೊಡ್ಡಬಳ್ಳಾಪುರ ನಗರಸಭೆ ಚುನಾವಣೆ: ಪಕ್ಷೇತರರ ಮನವೊಲಿಕೆಗೆ ಯತ್ನ

ಇಂದು ನಾಮಪತ್ರ ವಾಪಸ್‌ಗೆ ಕೊನೆಯ ದಿನ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2021, 9:23 IST
Last Updated 26 ಆಗಸ್ಟ್ 2021, 9:23 IST

ದೊಡ್ಡಬಳ್ಳಾಪುರ: ಸೆ.3ರಂದು ನಗರಸಭೆಗೆ ನಡೆಯುವ ಚುನಾವಣೆಗೆ ನಾಮಪತ್ರ ಹಿಂದಕ್ಕೆ ಪಡೆಯಲು ಆ. 26ರಂದು ಕೊನೆಯ ದಿನವಾಗಿದೆ. ಪಕ್ಷೇತರರಾಗಿ ನಾಮಪತ್ರ ಸಲ್ಲಿಸಿರುವ ಅಭ್ಯರ್ಥಿಗಳಿಂದ ಉಮೇದುವಾರಿಕೆ ಹಿಂದಕ್ಕೆ ಪಡೆದು ತಮ್ಮಗೆ ಬೆಂಬಲ ಸೂಚಿಸುವಂತೆ ಮನವೊಲಿಕೆ ಕಸರತ್ತು ಆರಂಭವಾಗಿದೆ.

ಪಕ್ಷದ ಅಧಿಕೃತ ಚಿಹ್ನೆಯ ಮೇಲೆ ಸ್ಪರ್ಧಿಸಿರುವ ಅಭ್ಯರ್ಥಿಗಳು ಒಂದೊಂದು ಮತವನ್ನು ಕ್ರೋಡೀಕರಿಸಿಕೊಳ್ಳುವ ಉದೇಶದಿಂದ ಪಕ್ಷೇತರ ಅಭ್ಯರ್ಥಿಗಳನ್ನು ತಮ್ಮತ್ತ ಸೆಳೆದುಕೊಳ್ಳುವ ಪ್ರಯತ್ನ ತೆರೆಮರೆಯಲ್ಲಿ ಬಿರುಸುಗೊಂಡಿದೆ. ಅದರಲ್ಲೂ ಹಿಂದುಳಿದ ವರ್ಗ ‘ಎ’ ಮಹಿಳಾ ಅಭ್ಯರ್ಥಿಗೆ ಮೀಸಲಾಗಿರುವ ವಾರ್ಡ್‌ಗಳಲ್ಲಿನ ಚುನಾವಣಾ ಪ್ರಚಾರವಂತೂ ತಾರಕಕ್ಕೆ ಮುಟ್ಟಿದೆ.

ಈ ಹಿಂದೆ ನಗರಸಭಾ ಚುನಾವಣೆಯ ನಂತರ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಮೀಸಲಾತಿ ನಿಗದಿಯಾಗುತಿತ್ತು. ಹೀಗಾಗಿ ಚುನಾವಣೆಯಲ್ಲಿ ಸ್ಪರ್ಧಿಸುವ ಎಲ್ಲರಿಗೂ ಅಧ್ಯಕ್ಷ ಸ್ಥಾನದ ಕುರ್ಚಿ ಮೇಲೆ ಸಹಜವಾಗಿಯೇ ಆಸೆ ಇದ್ದೇ ಇರುತ್ತಿತ್ತು. ಆದರೆ, ಈ ಬಾರಿ ಚುನಾವಣೆಗೂ ಮುನ್ನವೆ ಅಂದರೆ ಒಂದು ವರ್ಷದ ಹಿಂದೆ ಇಡೀ ರಾಜ್ಯದ ಸ್ಥಳೀಯ ಸಂಸ್ಥೆಗಳಿಗೆ ಮೀಸಲಾತಿ ನಿಗದಿಯಾದಾಗಲೇ ಮೊದಲ ಎರಡುವರೆ ವರ್ಷಗಳಿಗೆ ನಗರಸಭೆಯ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ‘ಎ’ ಮಹಿಳಾ ಅಭ್ಯರ್ಥಿ, ಉಪಾಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳಾ ಅಭ್ಯರ್ಥಿಗೆ ಮೀಸಲಾಗಿದೆ.

ADVERTISEMENT

ನಗರಸಭೆಯ 31 ವಾರ್ಡ್‌ಗಳ ಪೈಕಿ 8 ವಾರ್ಡ್‌ಗಳು ಹಿಂದುಳಿದ ವರ್ಗ ‘ಎ’ ಮಹಿಳಾ ಅಭ್ಯರ್ಥಿಗೆ ಮೀಸಲಾಗಿವೆ. ಹೀಗಾಗಿ ಎಲ್ಲಾ ರಾಜಕಿಯ ಪಕ್ಷಗಳ ಕಣ್ಣು ಸಹ 8 ವಾರ್ಡ್‌ಗಳ ಮಹಿಳಾ ಅಭ್ಯರ್ಥಿಗಳ ಮೇಲೆಯೇ ನೆಟ್ಟಿದೆ.

ನಗರಸಭೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಬಂದರು ಸಹ ಹಿಂದುಳಿದ ವರ್ಗ ‘ಎ’ ಮಹಿಳಾ ಅಭ್ಯರ್ಥಿ ಇಲ್ಲದೇ ಹೋದರೆ ಅಧಿಕಾರದ ಚುಕ್ಕಾಣಿ ಕೈತಪ್ಪಲಿದೆ. ಹೀಗಾಗಿಯೇ ಎಲ್ಲಾ ರಾಜಕೀಯ ಪಕ್ಷಗಳ ಹೆಚ್ಚಿನ ಆಸಕ್ತಿ ಹಿಂದುಳಿದ ವರ್ಗ ‘ಎ’ ಮಹಿಳಾ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲೇ ಬೇಕು ಎನ್ನುವ ಹಠ ಕಾಣುತ್ತಿದೆ.

ಪುರುಷ ಸದಸ್ಯರಲ್ಲಿ ಕುಂದಿದ ಉತ್ಸಾಹ:ಎಷ್ಟೇ ಶ್ರಮವಹಿಸಿ ಸದಸ್ಯರಾಗಿ ಆಯ್ಕೆಯಾದರು ಮೊದಲ ಅವಧಿಯ ಎರಡುವರೆ ವರ್ಷಗಳ ಕಾಲ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನ ಪುರುಷ ಸದಸ್ಯರಿಗೆ ಲಭ್ಯವಿಲ್ಲ. ಇದರ ಪರಿಣಾಮ ಚುನಾವಣೆ ಸಂದರ್ಭದಲ್ಲಿ ಪುರುಷ ಸದಸ್ಯರಲ್ಲಿ ಕಾಣುತ್ತಿದ್ದ ಚುನಾವಣಾ ರಣೋತ್ಸವ ಈಗ ಕಣ್ಮರೆಯಾಗಿದೆ.

ಪ್ರಸ್ತುತ 135 ನಾಮಪತ್ರ:ಸದ್ಯಕ್ಕೆ 31 ವಾರ್ಡ್‌ಗಳ ನಗರಸಭೆ ಚುನಾವಣಾ ಕಣದಲ್ಲಿ 135 ಜನರ ನಾಮಪತ್ರಗಳು ಪುರಸ್ಕೃತವಾಗಿವೆ. ಇವುಗಳ ಪೈಕಿ ಪಕ್ಷೇತರರ ಸಂಖ್ಯೆಯೇ
ಹೆಚ್ಚಾಗಿದೆ.

2013ರ ನಗರಸಭಾ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೂ ಸ್ಪಷ್ಟ ಬಹುಮತ ಬಾರದೇ ಹೋದಾಗ ಪಕ್ಷೇತರ ಸದಸ್ಯರಾಗಿ ಆಯ್ಕೆಯಾಗಿದ್ದವರಿಗೆ ಇನ್ನಿಲ್ಲದ ಬೇಡಿಕೆ ಬಂದಿತ್ತು. ಪಕ್ಷೇತರ ನಿಷೇಧ ಕಾಯ್ದೆಯಿಂದಾಗಿ ‘ಬಿ’ ಫಾರಂ ಪಡೆದು ಆಯ್ಕೆಯಾಗಿದ್ದ ಸದಸ್ಯರು ಪಕ್ಷ ಸೂಚಿಸಿದವರಿಗೆ ಮತ ಹಾಕಲೇ ಬೇಕಾಗಿತ್ತು.

ಹೀಗಾಗಿ ಪಕ್ಷೇತರ ಸದಸ್ಯರಾಗಿ ಆಯ್ಕೆಯಾದವರು ತಮ್ಮ ಸ್ವಂತ ನಿರ್ಣಯದ ಮೇಲೆ ನಿರ್ಧಾರ ಕೈಗೊಳ್ಳಬಹುದು ಎನ್ನುವ ಭಾವನೆ ಬಹುತೇಕರ ಸ್ಪರ್ಧಿಗಳಲ್ಲಿ ಮೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.