ADVERTISEMENT

ಭಯದಲ್ಲೇ ತರಗತಿಗೆ ಹಾಜರು

ಪೋಷಕರ ಒಪ್ಪಿಗೆ ಪತ್ರದೊಂದಿಗೆ ಕಾಲೇಜಿಗೆ ಹಾಜರು, ಕೋವಿಡ್ ಪರೀಕ್ಷೆ

​ಪ್ರಜಾವಾಣಿ ವಾರ್ತೆ
Published 18 ನವೆಂಬರ್ 2020, 2:01 IST
Last Updated 18 ನವೆಂಬರ್ 2020, 2:01 IST
ತರಗತಿಯಲ್ಲಿ ಕುಳಿತು ಕೋವಿಡ್‌ ಮಾರ್ಗದರ್ಶಿ ಸೂಚನೆಗಳನ್ನು ಆಲಿಸುತ್ತಿರುವ ವಿದ್ಯಾರ್ಥಿಗಳು
ತರಗತಿಯಲ್ಲಿ ಕುಳಿತು ಕೋವಿಡ್‌ ಮಾರ್ಗದರ್ಶಿ ಸೂಚನೆಗಳನ್ನು ಆಲಿಸುತ್ತಿರುವ ವಿದ್ಯಾರ್ಥಿಗಳು   

ದೊಡ್ಡಬಳ್ಳಾಪುರ: ಲಾಕ್‌ಡೌನ್‌ ತೆರವಾದ 8 ತಿಂಗಳ ನಂತರ ತಾಲ್ಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿಗಳು ಮಂಗಳವಾರದಿಂದಲೇ ಉತ್ಸಾಹದಿಂದ ಕಾಲೇಜಿಗೆ ಆಗಮಿಸಿ ಕೋವಿಡ್‌ ಪರೀಕ್ಷೆಗೆ ಒಳಗಾದರು.

ಆದರೆ, ಸತತ ಮೂರು ದಿನಗಳ ರಜೆಯಿಂದಾಗಿ ಖಾಸಗಿ ಕಾಲೇಜುಗಳು ತರಗತಿ ಅರಂಭಕ್ಕೆ ಅಗತ್ಯ ಸಿದ್ಧತೆ ಕೈಗೊಳ್ಳದೆ ಇದ್ದ ಕಾರಣದಿಂದಾಗಿ ಗುರುವಾರದಿಂದ ತರಗತಿಗಳು ಪ್ರಾರಂಭಿಸಲು ಸಿದ್ಧತೆ ಆರಂಭಿಸಿವೆ.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಹೂ ನೀಡಿ ಸ್ವಾಗತ ಕೋರಲಾಯಿತು. ಕಾಲೇಜು ಶಿಕ್ಷಣ ಇಲಾಖೆ ನೀಡಿರುವ ಕೊವಿಡ್-19 ಮಾರ್ಗದರ್ಶಿ ಸೂಚನೆಯಂತೆ ಸಿದ್ಧತೆ ಕೈಗೊಳ್ಳಲಾಗಿತ್ತು. ಕಾಲೇಜಿನ ಕೊಠಡಿಗಳಿಗೆ ಸ್ಯಾನಿಟೈಸರ್ ಮಾಡಲಾಗಿದ್ದು, ಕಾಲೇಜಿನ ಎಲ್ಲ ಬೋಧಕರು ಹಾಗೂ ಬೋಧಕೇತರ ಸಿಬ್ಬಂದಿಗೂ ಕೋವಿಡ್ ಪರೀಕ್ಷೆ ಮಾಡಲಾಗಿತ್ತು.

ADVERTISEMENT

ಮಂಗಳವಾರ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಉಚಿತವಾಗಿ ಕೋವಿಡ್ ಪರೀಕ್ಷೆ ಕೈಗೊಳ್ಳಲಾಯಿತು. ತರಗತಿಗಳಿಗೆ ಬರುವ ಪ್ರತಿಯೊಬ್ಬ ವಿದ್ಯಾರ್ಥಿ ಪೋಷಕರಿಂದ ಒಪ್ಪಿಗೆ ಪತ್ರಕ್ಕೆ ಸಹಿ ಮಾಡಿಸಿಕೊಂಡು ಬರುವುದು ಕಡ್ಡಾಯವಾಗಿತ್ತು. ವಿದ್ಯಾರ್ಥಿಗಳು ಉತ್ಸಾಹದಿಂದ ಕಾಲೇಜಿಗೆ ಆಗಮಿಸಿ, ಕೋವಿಡ್-19 ಮುಂಜಾಗ್ರತೆ ಹಾಗೂ ಪಠ್ಯಕ್ರಮ ಕುರಿತು ಮಾಹಿತಿ ಪಡೆಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಕಾಲೇಜು ಆರಂಭದ ಮೊದಲ ದಿನದ ಕುರಿತು ಮಾಹಿತಿ ನೀಡಿದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಶ್ರೀನಿವಾಸಯ್ಯ, ಮಂಗಳವಾರ ಅಂತಿಮ ಪದವಿ ತರಗತಿಯ 280 ಜನ ವಿದ್ಯಾರ್ಥಿಗಳು ಆಗಮಿಸಿ ಕೋವಿಡ್‌ ಪರೀಕ್ಷೆಗೆ ಒಳಗಾಗಿದ್ದಾರೆ. ಬುಧವಾರ ಮಧ್ಯಾಹ್ನದ ವೇಳೆಗೆ ವರದಿ ಬಂದ ನಂತರ ಆರೋಗ್ಯವಾಗಿರುವ ವಿದ್ಯಾರ್ಥಿಗಳು ಮಾತ್ರ ತರಗತಿಗಳಿಗೆ ಹಾಜರಾಗಲು ತಿಳಿಸಲಾಗಿದೆ. ಎಲ್ಲ 280 ಜನ ವಿದ್ಯಾರ್ಥಿಗಳು ಪೋಷಕರ ಸಹಿ ಒಳಗೊಂಡ ಒಪ್ಪಿಗೆ ಪತ್ರ ಹಾಜರುಪಡಿಸಿದ್ದಾರೆ ಎಂದು.

ಸ್ನಾತಕೋತ್ತರ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ 120 ಜನ ವಿದ್ಯಾರ್ಥಿಗಳ ಪೈಕಿ ಮಂಗಳವಾರ ಯಾರು ಕೂಡ ಕೋವಿಡ್‌ ಪರೀಕ್ಷೆಗೆ ಹಾಜರಾಗಿಲ್ಲ. ಎಲ್ಲ ವಿದ್ಯಾರ್ಥಿಗಳು ಕರೆ ಮಾಡಿ ತಿಳಿಸಲಾಗಿದ್ದು ಕಡ್ಡಾಯವಾಗಿ ಕೋವಿಡ್‌ ಪರೀಕ್ಷೆಗೆ ಒಳಗಾಗುವಂತೆ ತಿಳಿಸಲಾಗಿದೆ. ಪರೀಕ್ಷೆ ಸಂಪೂರ್ಣವಾಗಿ ಉಚಿತವಾಗಿದೆ. ಒಂದು ಕೊಠಡಿಯಲ್ಲಿ 30 ಜನ ವಿದ್ಯಾರ್ಥಿಗಳು ಮಾತ್ರ ಕುಳಿತು ಪಾಠಕೇಳುವಂತೆ ವ್ಯವಸ್ಥೆ ಮಾಡಲಾಗಿದೆ ಎಂದರು.

ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಭಾರತಿ ಶಾಮರಾಜ್‌ ಮಾಹಿತಿ ನೀಡಿ, ಶಿಕ್ಷಣ ಇಲಾಖೆ ಕೋವಿಡ್‌ ಮಾರ್ಗದರ್ಶಿಗಳನ್ನು ಪಾಲಿಸಲಾಗಿದೆ. ಅಂತಿಮ ಪದವಿ ತರಗತಿಯಲ್ಲಿ 48 ಜನ ವಿದ್ಯಾರ್ಥಿನಿಯರ ಪೈಕಿ ಮಂಗಳವಾರ 7 ಜನ ಮಾತ್ರ ಹಾಜರಾಗಿ ಕೋವಿಡ್‌ ಪರೀಕ್ಷೆಗೆ ಒಳಗಾಗಿದ್ದಾರೆ. ಉಳಿದ ವಿದ್ಯಾರ್ಥಿನಿಯರಲ್ಲಿ ಶೇ15 ಜನ ಆನ್‌ಲೈನ್‌ತರಗತಿಗಳಿಗೆ ಹಾಜರಾಗುತ್ತಿದ್ದಾರೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.