ಆನೇಕಲ್: ತಾಲ್ಲೂಕಿನ ಅತ್ತಿಬೆಲೆ ಮುಖ್ಯ ರಸ್ತೆಯಾಗಿರುವ ಅತ್ತಿಬೆಲೆ-ಬಳ್ಳೂರು ಕ್ರಾಸ್ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದ, ಗುಂಡಿಮಯ ರಸ್ತೆಯಲ್ಲಿ ವಾಹನ ಸವಾರರು ಸರ್ಕಸ್ ಮಾಡುತ್ತಾ ವಾಹನ ಚಲಾಯಿಸುತ್ತಿದ್ದಾರೆ.
ಎರಡು ಕಿ.ಮೀ. ವರೆಗೂ ರಸ್ತೆ ಗುಂಡಿಗಳಿಂದ ತುಂಬಿದ್ದು, ಸಂಚಾರದ ಯೋಗ್ಯತೆ ಕಳೆದುಕೊಂಡಿದೆ. ಎರಡು ಮೂರು ಕಿ.ಮೀ. ಸಂಚರಿಸಲು 25–30 ನಿಮಿಷ ಹಿಡಿಯುತ್ತದೆ.
ಆನೇಕಲ್, ಬಳ್ಳೂರು ಸೇರಿದಂತೆ ವಿವಿಧೆಡೆಯಿಂದ ಅತ್ತಿಬೆಲೆಗೆ ಬರುವವರು ಇದೇ ರಸ್ತೆ ಬಳಸುತ್ತಾರೆ. ಯಾವುದೇ ಪರ್ಯಾಯ ಮಾರ್ಗಗಳಲ್ಲಿದೇ ಸಾರ್ವಜನಿಕರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಅತ್ತಿಬೆಲೆ ಸುತ್ತಮುತ್ತಲಿನ ಗ್ರಾಮಗಳಿಗೆ ತೆರಳಲು ಸಮಸ್ಯೆಯಾಗಿದೆ.
ರಸ್ತೆಗಳೆಂದರೆ ಸುಗಮ ಸಂಚಾರಕ್ಕೆ ಪೂರಕವಾಗಬೇಕು. ಆದರೆ ಅತ್ತಿಬೆಲೆಯ ಮುಖ್ಯ ರಸ್ತೆಯು ಸಂಪೂರ್ಣ ಹದಗೆಟ್ಟಿದ್ದು, ರಸ್ತೆ ಗುಂಡಿಗಳ ಮಧ್ಯೆ ರಸ್ತೆ ಹುಡುಕಿಕೊಂಡು ಸಂಚರಿಸಬೇಕಿದೆ. ಒಂದು ಬಾರಿ ರಸ್ತೆ ಗುಂಡಿಗಳನ್ನು ಮುಚ್ಚಿಸಲಾಗಿತ್ತು. ಆದರೆ ಮತ್ತೆ ರಸ್ತೆ ಗುಂಡಿಗಳು ಬಾಯ್ತೆರೆದಿವೆ. ತೆಪೆ ಹಾಕುವುದನ್ನು ಬಿಟ್ಟು ಹೊಸದಾಗಿ ಸುಸಜ್ಜಿತ ರಸ್ತೆ ನಿರ್ಮಿಸುವ ಮೂಲಕ ಶಾಶ್ವತ ಪರಿಹಾರ ಕಲ್ಪಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಅತ್ತಿಬೆಲೆ ಆನೇಕಲ್ ತಾಲ್ಲೂಕಿನ ಗಡಿಭಾಗ. ತಮಿಳುನಾಡಿನ ಹೊಸೂರಿಗೆ ಕೂಗಳತೆಯ ದೂರದಲ್ಲಿದೆ. ಕೈಗಾರಿಕಾ ಪ್ರದೇಶ ಆಗಿರುವುದರಿಂದ ಪ್ರತಿನಿತ್ಯ ಕಾರ್ಮಿಕರು, ಯುವಕರು ಇದೇ ರಸ್ತೆಯಲ್ಲಿ ಸಂಚರಿಸುತ್ತಾರೆ. ಹಲವಾರು ಶಾಲಾ, ಕಾಲೇಜುಗಳಿವೆ. ತಮಿಳುನಾಡು ಸೇರಿದಂತೆ ಆನೇಕಲ್ ತಾಲ್ಲೂಕಿನ ವಿವಿಧೆಡೆಗೆ ಈ ರಸ್ತೆ ಸಂಪರ್ಕ ಕಲ್ಪಿಸುತ್ತದೆ. ಆದರೆ ಗುಂಡಿಗಳಿಂದಲೇ ಸಂಚಾರ ತಂತಿ ಮೇಲಿನ ನಡಿಗೆಯಂತಿದೆ ಎನ್ನುತ್ತಾರೆ ಸವಾರರು.
ಹದಗೆಟ್ಟ ರಸ್ತೆಯಲ್ಲಿ ನಿಧಾನಗತಿ ಸಂಚಾರದಿಂದ ಕೆಲವೊಮ್ಮೆ ಕಿ.ಮೀ ಗಟ್ಟಲೇ ವಾಹನ ದಟ್ಟಣೆ ಉಂಟಾಗಿರುತ್ತದೆ. ಇತ್ತೀಚಿಗೆ ಸುರಿಯುತ್ತಿರುವ ಭಾರಿ ಮಳೆಯಿಂದ ರಸ್ತೆ ಗುಂಡಿಗಳಲ್ಲಿ ನೀರು ತುಂಬಿಕೊಂಡು ದ್ವಿಚಕ್ರ ವಾಹನ ಸವಾರರು ಪರದಾಡುವಂತಾಯಿತು.
ಅತ್ತಿಬೆಲೆ ಮುಖ್ಯ ರಸ್ತೆಯಲ್ಲಿ ಗುಂಡಿಗಳಿಂದ ಅಪಘಾತಗಳು ಹೆಚ್ಚಾಗುತ್ತಿವೆ. ಧೂಳು ಮತ್ತು ಗುಂಡಿಗಳ ಕಾರುಬಾರಿನಿಂದ ವಾಹನ ಸವಾರರು ಪರಿತಪಿಸುತ್ತಿದ್ದಾರೆ.
ಆನೇಕಲ್‌ನಿಂದ ಟಿವಿಎಸ್ ಕ್ರಾಸ್‌ವರೆಗೂ ಸುಗಮ ರಸ್ತೆ ಇದೆ. ರಸ್ತೆ ಗುಂಡಿಗಳು ಆರಂಭವಾದಾಗ ಅತ್ತಿಬೆಲೆ ಪ್ರಾರಂಭವಾಯಿತು ಎಂಬುದು ಖಾತರಿಯಾಗುತ್ತದೆ.ಮಹೇಶ್ ವಾಹನ ಸವಾರ
ಅತ್ತಿಬೆಲೆಯ ಮುಖ್ಯ ರಸ್ತೆಯಲ್ಲಿ ಸಂಚರಿಸಲು ಯೋಗ್ಯವಾದ ರಸ್ತೆ ನಿರ್ಮಿಸಬೇಕು. ರಸ್ತೆ ಗುಂಡಿಯಿಂದ ಅಪಘಾತಗಳು ಹೆಚ್ಚಾಗಿವೆ. ದ್ವಿಚಕ್ರ ವಾಹನ ಸಂಚರಿಸಲು ಸಹ ಆಗದಂತಹ ಪರಿಸ್ಥಿತಿಯಿದೆಸುಮನ್ ಅತ್ತಿಬೆಲೆ ನಿವಾಸಿ
ಐದಾರು ವರ್ಷ ಕಳೆದರೂ ಮುಗಿಯದ ಕಾಮಗಾರಿ ಅತ್ತಿಬೆಲೆ-ಟಿವಿಎಸ್ ಬಳ್ಳೂರು ಕ್ರಾಸ್‌ನ ವೃತ್ತದಲ್ಲಿ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮದಿಂದ ನಡೆಯುತ್ತಿರುವ ಮೇಲ್ಸೇತುವೆ ನಿರ್ಮಾಣ ಕಾಮಗಾರಿ ಐದಾರು ವರ್ಷ ಕಳೆದರೂ ಮುಗಿದಿಲ್ಲ. ದೊಡ್ಡ ದೊಡ್ಡ ಪಿಲ್ಲರ್‌ಗಳು ಬಿಟ್ಟರೆ ಕಾಮಗಾರಿ ಮುಂದಿನ ಹಂತಕ್ಕೆ ತಲುಪಲೇ ಇಲ್ಲ. ಇದರಿಂದಾಗಿ ರಸ್ತೆಯಲ್ಲಿ ವಾಹನ ದಟ್ಟಣೆ ಹೆಚ್ಚಾಗಿದೆ. ರಸ್ತೆ ಗುಂಡಿಗಳನ್ನು ಮುಚ್ಚಿಸಿ ಡಾಂಬರೀಕರಣ ಮಾಡಿ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂಬುದು ಸ್ಥಳೀಯರ ಬೇಡಿಕೆಯಾಗಿದೆ.
ನೂರಾರು ಕಿ.ಮೀ ಸಂಚರಿಸಿದ ಅನುಭವ
ಅತ್ತಿಬೆಲೆ ಮುಖ್ಯ ರಸ್ತೆಯಲ್ಲಿ ರಸ್ತೆ ಗುಂಡಿಗಳೇ ಹೆಚ್ಚಾಗಿದೆ. ಇದರಿಂದ ಪ್ರತಿನಿತ್ಯ ಪರದಾಡುವಂತಾಗಿದೆ. ಶಾಲಾ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳು ಭಯದಿಂದ ಸಂಚರಿಸಬೇಕಾಗಿದೆ. ಎರಡು ಮೂರು ಕಿ.ಮೀ ಸಂಚರಿಸಿದರೆ ನೂರಾರು ಕಿ.ಮೀ. ಸಂಚರಿಸಿದ ಭಾಸವಾಗುತ್ತದೆ. ರಸ್ತೆ ಗುಂಡಿಗಳನ್ನು ಮುಚ್ಚಿಸಿ ಸಾರ್ವಜನಿಕರ ಸುಗಮ ಸಂಚಾರಕ್ಕೆ ಅನವು ಮಾಡಿಕೊಡಬೇಕು
-ಸುನೀಲ್ ಸಹಾಯಕ ಪ್ರಾಧ್ಯಾಪಕ ದಾಸನಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.