ADVERTISEMENT

ಬೆಂಕಿಗೆ ಆಹುತಿಯಾದ ಬಿದಿರು ಮೆಳೆ

ದೊಡ್ಡಬಳ್ಳಾಪುರ: ಕಂಗಾಲಾಗಿ ಓಡಿ ಹೋದ ನವಿಲುಗಳು

​ಪ್ರಜಾವಾಣಿ ವಾರ್ತೆ
Published 31 ಮಾರ್ಚ್ 2020, 14:47 IST
Last Updated 31 ಮಾರ್ಚ್ 2020, 14:47 IST
ಅರಳುಮಲ್ಲಿಗೆ ಕೆರೆ ಅಂಗಳದ ಬಿದಿರುಮೆಳೆಯಲ್ಲಿ  ಬೆಂಕಿ ಹತ್ತಿ ಹುರಿಯುತ್ತಿವುದು
ಅರಳುಮಲ್ಲಿಗೆ ಕೆರೆ ಅಂಗಳದ ಬಿದಿರುಮೆಳೆಯಲ್ಲಿ  ಬೆಂಕಿ ಹತ್ತಿ ಹುರಿಯುತ್ತಿವುದು   

ದೊಡ್ಡಬಳ್ಳಾಪುರ: ತಾಲ್ಲೂಕಿನ ಅರಳುಮಲ್ಲಿಗೆ ಕೆರೆ ಅಂಗಳದಲ್ಲಿ ದಶಕಗಳಿಂದ ಬೆಳೆದು ನಿಂತಿದ್ದ ಬಿದಿರುಮೆಳೆಗಳು ಮಂಗಳವಾರ ಕಿಡಿಗೇಡಿಗಳು ಹಚ್ಚಿರುವ ಬೆಂಕಿಗೆ ಆಹುತಿಯಾಗಿವೆ.

ಬೆಳಿಗ್ಗೆ 12 ಗಂಟೆಗೆ ಸುಮಾರಿಗೆ ಕೆರೆ ಅಂಗಳದಲ್ಲಿ ಕಾಣಿಸಿಕೊಂಡಿರುವ ಬೆಂಕಿ ವ್ಯಾಪಿಸುತ್ತಲೇ ಇದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಬೆಂಕಿ ನಂದಿಸಲು ಹರಸಾಹಸಪಟ್ಟರು. ಆದರೆ ಬೆಂಕಿ ನಿಯಂತ್ರಣಕ್ಕೆ ಬಾರದೆ ಸುಮಾರು ಒಂದೂವರೆ ಗಂಟೆಗಳ ಹುರಿಯಿತು. ಇಂದು ಪೂರ್ವ ದಿಕ್ಕಿನಿಂದ ಬೀಸುತ್ತಿದ್ದ ಸುಳಿಗಾಳಿಯಿಂದಾಗಿ ಬೆಂಕಿ ನಿಯಂತ್ರಣಕ್ಕೆ ತರಲು ಗಂಟೆಗಟ್ಟಲೆ ಸಾಹಸ ಪಡುವಂತಾಗಿತ್ತು. ಬೆಂಕಿ ನಿಯಂತ್ರಣಕ್ಕೆ ಬಂದಿದ್ದರಿಂದ ಕೆರೆ ಅಂಚಿನ ಅರಳುಮಲ್ಲಿಗೆ, ಜಕ್ಜಸಂದ್ರ ಗ್ರಾಮಗಳ ರೈತರ ತೋಟದ ಮನೆಗಳಿಗೂ ವ್ಯಾಪಿಸುವ ಅಪಾಯ ತಪ್ಪಿದೆ.

ಅರಳುಮಲ್ಲಿಗೆ ಕೆರೆ ಅಂಗಳದಲ್ಲಿ ನೂರಾರು ಸಂಖ್ಯೆಯಲ್ಲಿ ನವಿಲುಗಳು ವಾಸವಾಗಿವೆ. ನವಿಲುಗಳು ಈಗ ಮೊಟ್ಟೆಗಳನ್ನು ಇಟ್ಟು ಮರಿಮಾಡುವ ಸಮಯವಾಗಿದೆ. ಬೆಂಕಿ ಬಿದ್ದಿರುವುದರಿಂದ ನವಿಲುಗಳ ಸಂತಾನಕ್ಕೂ ಕಂಟಕವಾಗುವ ಮತ್ತು ನವಿಲುಗಳ ವಾಸಕ್ಕು ತೊಂದರೆ ಎದುರಾಗಿದೆ ಎನ್ನುತ್ತಾರೆ ಕೆರೆ ಅಂಚಿನ ಸ್ಥಳೀಯ ರೈತರು.

ADVERTISEMENT

ಬಾರದ ಅಗ್ನಿಶಾಮಕ ವಾಹನ: ತಾಲ್ಲೂಕಿನ ಬಿಬಿಎಂಪಿ ಕಸ ವಿಲೇವಾರಿ ಘಟಕದ ಕಸದ ರಾಶಿಗಳಿಗೆ ಬೆಂಕಿ ಬಿದ್ದಿದ್ದರಿಂದ ಕಸದ ರಾಶಿಗಳಲ್ಲಿನ ಬೆಂಕಿ ನಂದಿಸುವಲ್ಲಿ ನಿರತವಾಗಿದ್ದವು. ಹೀಗಾಗಿ ಕೆರೆಯಲ್ಲಿನ ಬೆಂಕಿ ನಂದಿಸಲು ಅಗ್ನಿಶಾಮಕ ವಾಹನಗಳು ಬಂದಿರಲಿಲ್ಲ. ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರ ಸಹಾಯದಿಂದಲೇ ಬೆಂಕಿ ಹೆಚ್ಚಿನ ಪ್ರದೇಶಕ್ಕೆ ವ್ಯಾಪಿಸುವುದನ್ನು ತಡೆಯಲಾಗಿದೆ.

ಇಸ್ಪೀಟ್‌ ಆಟಗಾರರಿಂದಲೇ ಬೆಂಕಿ: ನಗರಕ್ಕೆ ಅತ್ಯಂತ ಸಮೀಪ ಹಾಗೂ ರಸ್ತೆ ಬದಿಯಲ್ಲಿಯೇ ಅರಳುಮಲ್ಲಿಗೆ ಕೆರೆ ಇರುವುದರಿಂದ ಹಾಗೂ ಕೆರೆ ಅಂಗಳದಲ್ಲಿ ಬಿದಿರು,ಹೊಂಗೆ ಮರಗಳು ಇರುವುದರಿಂದ ಇಲ್ಲಿಗೆ ಇಸ್ಪೀಟ್‌ ಆಟಗಾರರ ಗುಂಪುಗಳು ಸಾಕಷ್ಟು ಸಂಖ್ಯೆಯಲ್ಲಿ ಬರುತ್ತವೆ. ಈ ಆಟಗಾರರೇ ಬೆಂಕಿ ಹಚ್ಚಿರುವ ಸಾಧ್ಯತೆ ಇದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.