ADVERTISEMENT

ದೊಡ್ಡಬಳ್ಳಾಪುರ: ರಾತ್ರಿ ಕಳ್ಳರ ಗ್ಯಾಂಗ್‌ ಬಂಧನ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2025, 2:10 IST
Last Updated 26 ಸೆಪ್ಟೆಂಬರ್ 2025, 2:10 IST
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಬಂಧಿಸಿರುವ ಕಳ್ಳರ ಗ್ಯಾಂಗ್‌
ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಬಂಧಿಸಿರುವ ಕಳ್ಳರ ಗ್ಯಾಂಗ್‌   

ದೊಡ್ಡಬಳ್ಳಾಪುರ: ರಾತ್ರಿ ವೇಳೆ ಮನೆಗಳಿಗೆ ನುಗ್ಗಿ  ಕಳ್ಳತನ ಮಾಡುತ್ತಿದ್ದ ಗ್ಯಾಂಗ್‌ ಅನ್ನು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆ ಪೊಲೀಸರು ಬಂಧಿಸಿದ್ದಾರೆ. 

ದಾವಣಗೆರೆ ಜಿಲ್ಲೆಯ ನಾಗರಕಟ್ಟೆಯ ಪುರುಷೋತ್ತಮ (22), ಇದೇ ಜಿಲ್ಲೆಯ ಬಸವನಾಳ್ ಗೊಲ್ಲರಹಟ್ಟಿಯ ಚಂದ್ರು (24), ಆದೋಡಿಯ ದರ್ಶನ್ (20) ಬಂಧಿತರು.ಈ ಮೂವರು ಬೆಂಗಳೂರಿನ ಕೂಡ್ಲೂ ಗೇಟ್ ಬಳಿ ಬಾಡಿಗೆ ಮನೆಯಲ್ಲಿ ವಾಸವಿದ್ದರು.

ಸೆ.16ರ ಮಧ್ಯರಾತ್ರಿ ನಿಜಗಲ್ ಬಡಾವಣೆ, ನಂದಿನಿ ಬಡಾವಣೆ,ಟಿ.ಬಿ. ನಾರಾಯಣಪ್ಪ ಬಡಾವಣೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಮನೆ ಕಳ್ಳತನಕ್ಕೆ ಇಳಿದಿದ್ದ ಈ ಖದೀಮರು, ಟಿ.ಬಿ ನಾರಾಯಣಪ್ಪ ಬಡಾವಣೆಯಲ್ಲಿ ಯಾರು ಇಲ್ಲದ ಮನೆಗಳಿಗೆ ನುಗ್ಗಿ ಸುಮಾರು 115 ಗ್ರಾಂ ಚಿನ್ನದ ಒಡವೆ ಕದ್ದು ಪರಾರಿಯಾಗಿದ್ದರು. ಈ ಪ್ರಕರಣ ಬೆನ್ನತ್ತಿದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ADVERTISEMENT

ಬಂಧಿತ ಪುರುಷೋತ್ತಮ ಮೇಲೆ ಎಂಟು ಕಳ್ಳತನ ಪ್ರಕರಣ, ಒಂದು ಕೊಲೆ ಪ್ರಕರಣ ಸೇರಿದಂತೆ ಇತರೆ ಪ್ರಕರಣಗಳು ವಿವಿಧ ಠಾಣೆಗಳಲ್ಲಿ ದಾಖಲಾಗಿವೆ. ಚಂದ್ರು ಸಹ ಆಟೊ ಗ್ಯಾರೇಜ್‌ನಲ್ಲಿ ಕೆಲಸ ಮಾಡುತ್ತಿದ್ದ. ಈತನ‌ ಮೇಲೆ ವಿವಿಧ ಠಾಣೆಗಳಲ್ಲಿ ಆರು ಪ್ರಕರಣಗಳು, ದರ್ಶನ್  ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಈತನ‌ ಮೇಲೆ ವಿವಿಧ ಠಾಣೆಗಳಲ್ಲಿ ನಾಲ್ಕು ಪ್ರಕರಣಗಳು ದಾಖಲಾಗಿವೆ.

ಆರೋಪಿಗಳು ಒಂದೇ ಮನೆಯಲ್ಲಿ ವಾಸವಿದ್ದ ವಿವಿಧ ಕೆಲಸಗಳಿಗೆ ಹೊಗುತ್ತಿದ್ದರು. ಕಳ್ಳತನ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದರು. ಈ ಮೂವರು ಆರೋಪಿಗಳಿಗೆ ಸೌಭಾಗ್ಯ ಎಂಬಾಕೆ ಪರೋಕ್ಷವಾಗಿ ಸಾಥ್ ನೀಡುತ್ತಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

ದಾವಣಗೆರೆ, ಕೊಪ್ಪಳ, ತುಮಕೂರು ಸೇರಿದಂತೆ ಐದು ಜಿಲ್ಲೆಗಳ ಪೊಲೀಸ್ ಠಾಣೆಗಳಲ್ಲಿ ಇವರ ಮೇಲೆ ಪ್ರಕರಣಗಳು ದಾಖಲಾಗಿವೆ. ಈ ಯಾವುದಕ್ಕೂ ಕ್ಯಾರೆ ಎನ್ನದೇ ತುಮಕೂರಿನಲ್ಲಿ ಕಳ್ಳತನ ಪ್ರಕರಣದಲ್ಲಿ ಬಂಧನವಾಗಿ, ಜೈಲಿನಿಂದ ಬಿಡುಗಡೆಯಾದನಂತರ ಕಳ್ಳತನ ಮಾಡಿ ಸುಮಾರು ₹12 ಲಕ್ಷ ನಗದನ್ನು ಮೋಜುಮಸ್ತಿಗೆ ಖರ್ಚು ಮಾಡಿದ್ದರು.

ಕಿಟಕಿಗಳಲ್ಲಿ ನೋಡಕೊಂಡು ಮನೆಯಲ್ಲಿ ಯಾರೂ ಇಲ್ಲದಿದ್ದಲ್ಲಿ ನೇರವಾಗಿ ಮನೆ ಬೀಗ ಹೊಡೆದು ಒಳ ಹೋಗಿ ಕೈಗೆ ಸಿಕ್ಕ ಬೆಲೆ ಬಾಳುವ ವಸ್ತುಗಳನ್ನು ಕದ್ದು ಪರಾರಿಯಾಗುತ್ತಿದ್ದರು. ಕಳ್ಳರ ಈ ಗ್ಯಾಂಗಿನ ಎಲ್ಲಾ ದೃಶ್ಯಾವಳಿಗಳು ಮನೆಗಳ ಬಳಿ ಅಳವಡಿಸಿದ್ದ ಸಿ.ಸಿ. ಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದವು. ಈ ದೃಶ್ಯಗಳನ್ನು ನೋಡಿದ್ದ ಸಾರ್ವಜನಿಕರು ಬೆಚ್ಚಿಬಿದ್ದಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.