ADVERTISEMENT

ದುಬಾರಿ ಶುಲ್ಕ: ಕಡಿವಾಣಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 8 ಜೂನ್ 2020, 13:51 IST
Last Updated 8 ಜೂನ್ 2020, 13:51 IST
ಬಿಜ್ಜವಾರ ನಾಗರಾಜ್
ಬಿಜ್ಜವಾರ ನಾಗರಾಜ್   

ವಿಜಯಪುರ: ‘ಲಾಕ್ ಡೌನ್ ಮುಗಿದ ನಂತರ ಜೂನ್‌8ರಿಂದ ಖಾಸಗಿ ಶಾಲೆಗಳಲ್ಲಿ ದಾಖಲಾತಿ ಆರಂಭವಾಗಿದೆ. ಡೊನೇಷನ್ ರೂಪದಲ್ಲಿ ಶಾಲಾ, ಕಾಲೇಜುಗಳ ಶುಲ್ಕವನ್ನು ಏರಿಕೆ ಮಾಡದಂತೆ ಸರ್ಕಾರ ಕ್ರಮ ವಹಿಸಬೇಕು’ ಎಂದು ಪ್ರಜಾ ವಿಮೋಚನ ಬಹುಜನ ಸಮಿತಿಯ ರಾಜ್ಯ ಘಟಕದ ಅಧ್ಯಕ್ಷ ಬಿಜ್ಜವಾರ ನಾಗರಾಜ್ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ‘ಮೂರು ತಿಂಗಳಿನಿಂದ ಲಾಕ್ ಡೌನ್ ಆಗಿದ್ದು, ಬಡವರು, ಕೃಷಿಕರು, ಕೂಲಿ ಕಾರ್ಮಿಕರು ಕೆಲಸಗಳಿಲ್ಲದೆ ಕುಟುಂಬಗಳ ನಿರ್ವಹಣೆಗೂ ಪರದಾಡುತ್ತಿದ್ದಾರೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ದಾಖಲಾತಿಯ ಶುಲ್ಕ ಕಟ್ಟುವುದು ಕೂಡಾ ಕಷ್ಟದ ಪರಿಸ್ಥಿತಿಯಾಗಿದೆ. ಕೆಲ ಶಾಲೆಗಳಲ್ಲಿ ಆನ್‌ಲೈನ್‌ ತರಗತಿಗಳನ್ನು ಆರಂಭಿಸಿ ಶುಲ್ಕ ವಸೂಲಿ ಮಾಡಲಾಗುತ್ತಿದೆ. ಗ್ರಾಮೀಣ ಭಾಗದ ಮಕ್ಕಳಿಗೆ ಈ ವಿಧಾನದಿಂದ ಯಾವುದೇ ಪ್ರಯೋಜನವಿಲ್ಲದಿದ್ದರೂ ಶುಲ್ಕ ವಸೂಲಿ ಮಾಡಲು ತರಗತಿ ಆರಂಭಿಸಲಾಗಿದೆ. ಇಂತಹ ವಿಧಾನಗಳ ಕುರಿತು ಸ್ಥಳೀಯ ಅಧಿಕಾರಿಗಳು ಗಮನಹರಿಸಬೇಕು. ದುಬಾರಿ ಶುಲ್ಕ ವಸೂಲಿ ಮಾಡಿಕೊಳ್ಳುವ ಶಾಲೆಗಳಿಗೆ ನಿರ್ದೇಶನ ನೀಡಬೇಕು’ ಎಂದು ಒತ್ತಾಯಿಸಿದ್ದಾರೆ.

ಕ್ಷೇತ್ರ ಶಿಕ್ಷಣಾಧಿಕಾರಿ ಅಶ್ವಥನಾರಾಯಣ ಮಾತನಾಡಿ, ‘ರಾಜ್ಯ ಸರ್ಕಾರದ ನಿರ್ದೇಶನದಂತೆ ಹಿಂದಿನ ವರ್ಷದಲ್ಲಿ ಸರ್ಕಾರ ನಿಗದಿ ಪಡಿಸಿದಷ್ಟೇ ಶುಲ್ಕವನ್ನು ಈ ಬಾರಿಯೂ ತೆಗೆದುಕೊಳ್ಳಬೇಕು ಎಂದು ತಿಳಿಸಿದೆ. ಸರ್ಕಾರ ನಿಗದಿಪಡಿಸಿರುವ ಶುಲ್ಕಕಿಂತ ಹೆಚ್ಚಿನ ಶುಲ್ಕವನ್ನು ಪಡೆಯುವಂತಿಲ್ಲ. ಒಂದು ವೇಳೆ ಯಾವುದೇ ಶಾಲೆಯಲ್ಲಿ ಹೆಚ್ಚಿನ ಶುಲ್ಕ ಪಡೆದುಕೊಳ್ಳುವುದು ಕಂಡು ಬಂದರೆ, ಜನರು ದಾಖಲೆಯ ಸಮೇತವಾಗಿ ದೂರು ಸಲ್ಲಿಸಿದರೆ ಅಂತಹ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.