ADVERTISEMENT

ಬೆಂಗಳೂರು ವಿವಿ: ತರಗತಿ ನಡೆಯದಿದ್ದರೂ ಪರೀಕ್ಷೆ ವೇಳಾಪಟ್ಟಿ ಪ್ರಕಟ

ಉಪನ್ಯಾಸಕರಿಲ್ಲದೆ ತರಗತಿಗಳೇ ನಡೆದಿಲ್ಲ; ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಮಾಡಲ್ಲ ಎಂದ ವಿದ್ಯಾರ್ಥಿಗಳು

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2025, 2:10 IST
Last Updated 7 ಅಕ್ಟೋಬರ್ 2025, 2:10 IST
ಆನೇಕಲ್‌ನ ಗೋಪಾಲರಾಜು ಕಾಲೇಜು ನೋಟ
ಆನೇಕಲ್‌ನ ಗೋಪಾಲರಾಜು ಕಾಲೇಜು ನೋಟ   

ಆನೇಕಲ್: ಬೆಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳಲ್ಲಿ ಬಿಸಿಎ ಮತ್ತು ಬಿಬಿಎ ಕೋರ್ಸ್‌ಗಳಿಗೆ ಕಾಯಂ ಹಾಗೂ ಅತಿಥಿ ಉಪನ್ಯಾಸಕರ ನೇಮಕ ಮಾಡದೆ ತರಗತಿಗಳೇ ಆರಂಭವಾಗಿಲ್ಲ. ಇದರ ನಡುವೆ ಪರೀಕ್ಷೆ ವೇಳಾಪಟ್ಟಿ ಹಾಗೂ ಪರೀಕ್ಷಾ ಶುಲ್ಕದ ಸುತ್ತೋಲೆ ಹೊರಡಿಸಿರುವುದು ವಿದ್ಯಾರ್ಥಿಗಳಲ್ಲಿ ಆತಂಕ ಹಾಗೂ ಗೊಂದಲ ಸೃಷ್ಟಿಮಾಡಿದೆ.

ಬೆಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ 250 ಕಾಲೇಜುಗಳಿವೆ. ಈ ಪೈಕಿ ಅಂದಾಜು 150ಕ್ಕೂ ಹೆಚ್ಚು ಕಾಲೇಜುಗಳಲ್ಲಿ ಬಿಸಿಎ ಮತ್ತು 100 ಕಾಲೇಜುಗಳಲ್ಲಿ ಬಬಿಎ ವಿಭಾಗವಿದೆ.  ಹಲವು ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆಯಿಂದ ತರಗತಿಗಳು ನಡೆದಿಲ್ಲ.

ಆಗಸ್ಟ್‌ನಿಂದ 1, 3 ಮತ್ತು 5ನೇ ಸೆಮಿಸ್ಟರ್‌ ಆರಂಭವಾಗಿದೆ. ಆದರೆ ಉನ್ನತ ಶಿಕ್ಷಣ ಇಲಾಖೆಯು ಉಪನ್ಯಾಸಕರ ನೇಮಕ ಮಾಡುವಲ್ಲಿ ನಿರ್ಲಕ್ಷ್ಯವಹಿಸಿದೆ. ಇದರಿಂದ ನಿತ್ಯ ವಿದ್ಯಾರ್ಥಿಗಳು ಕಾಲೇಜಿಗೆ ಬಂದು ಸ್ವಯಂ ಅಧ್ಯಯನ ಮಾಡಿಕೊಂಡು ವಾಪಸ್‌ ಆಗುತ್ತಿದ್ದರು. ಈಗ ದಿಢೀರನೇ ಪರೀಕ್ಷೆ ಘೋಷಣೆ ಮಾಡಿರುವುದು ವಿದ್ಯಾರ್ಥಿಗಳಿಗೆ ದಿಕ್ಕೆ ತೋಚದಂತಾಗಿದೆ.

ADVERTISEMENT

ಅಕ್ಟೋಬರ್‌ ಮೊದಲ ವಾರ ಮುಗಿದಿದ್ದರೂ ತರಗತಿ ಆರಂಭವಾಗಿಲ್ಲ. ಡಿಸೆಂಬರ್‌ ತಿಂಗಳಿನಲ್ಲಿ ಪರೀಕ್ಷೆ ನಡೆಯಲಿದೆ. ಪರೀಕ್ಷೆ ಸಿದ್ಧತೆ ಹೇಗೆ ನಡೆಸುವುದು ಎಂದು ಪ್ರಶ್ನಿಸಿರು ವ ವಿದ್ಯಾರ್ಥಿಗಳು ಪರೀಕ್ಷೆ ಮುಂದೂಡುವಂತೆ ಆಗ್ರಹಿಸಿದ್ದಾರೆ.

ಬಿಬಿಎ ಮತ್ತು ಬಿಸಿಎ ವಿಭಾಗದಲ್ಲಿ ಪ್ರತಿ ವರ್ಷ ಸರಿಯಾಗಿ ಉಪನ್ಯಾಸಕರೇ ಇರುವುದಿಲ್ಲ. ಪ್ರತಿ ಸೆಮಿಸ್ಟರ್‌ನಲ್ಲೂ ವಿದ್ಯಾರ್ಥಿಗಳು ಅತಿಥಿ ಉಪನ್ಯಾಸಕರನ್ನು ನಂಬಿ ಕೂರಬೇಕಾಗಿದೆ. ಎರಡು ತಿಂಗಳು ಪಾಠ ಮಾಡುವ ಅತಿಥಿ ಉಪನ್ಯಾಸಕರು ಮುಂದಿನ ಸೆಮಿಸ್ಟರ್‌ಗೆ ಇದೇ ಕಾಲೇಜಿನಲ್ಲಿ ಇರುತ್ತಾರೆ ಎಂಬ ನಂಬಿಕೆ ಇರುವುದಿಲ್ಲ. ಸರ್ಕಾರಿ ಪದವಿ ಕಾಲೇಜನ್ನೇ ನಂಬಿ ಬಂದಿರುತ್ತೇವೆ. ಕಾಯಂ ಉಪನ್ಯಾಸಕರನ್ನು ನೇಮಕ ಮಾಡಬೇಕೆಂದು ಒತ್ತಾಯಿಸಿದ್ದಾರೆ.

ದಾಖಲಾತಿ ಇಳಿಕೆ: ತಾಲ್ಲೂಕಿನ ಏಕೈಕ ಪದವಿ ಕಾಲೇಜು ಆಗಿರುವ ಎಸ್‌.ಗೋಪಾಲರಾಜು ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪನ್ಯಾಸಕರ ಕೊರತೆಯಿಂದ ವರ್ಷದಿಂದ ವರ್ಷಕ್ಕೆ ದಾಖಲಾತಿ ಇಳಿಮುಖವಾಗುತ್ತಿದೆ. ಬಿಸಿಎನಲ್ಲಿ ಕಳೆದ ಸಾಲಿನಲ್ಲಿ 21 ವಿದ್ಯಾರ್ಥಿಗಳಿದ್ದರು. ಈ ಬಾರಿ ವಿದ್ಯಾರ್ಥಿಗಳ ಸಂಖ್ಯೆ 10ಕ್ಕಿಳಿದಿದೆ. ಈ ಸ್ಥಿತಿ ಕೇವಲ ಗೋಪಾಲರಾಜು ಕಾಲೇಜಿಗೆ ಸೀಮಿತವಲ್ಲ. ವಿಶ್ವವಿದ್ಯಾಲಯದ ಎಲ್ಲ ಸರ್ಕಾರಿ ಪದವಿ ಕಾಲೇಜುಗಳಲ್ಲಿಯೂ ಇದೆ.

ಉಪನ್ಯಾಸಕರ ನೇಮಕಕ್ಕೆ ಆಗ್ರಹಿಸಿ ಆನೇಕಲ್‌ ಗೋಪಾಲರಾಜು ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ತಹಶೀಲ್ದಾರ್‌ ಶಶಿಧರ್‌ ಮಾಡ್ಯಾಳ್‌ ಅವರಿಗೆ ಮನವಿ ಸಲ್ಲಿಸಿದರು
ರಮ್ಯ
ದರ್ಶನ್‌
ತ್ರಿವೇಣಿ ಗಾಂಧಿ 
ಪ್ರತಿ ಸೆಮಿಸ್ಟರ್‌ನಲ್ಲಿಯೂ ಇದೇ ಸಮಸ್ಯೆ. ಪರೀಕ್ಷೆಯ ಕಡೆಯ ದಿನಗಳಲ್ಲಿ ಎಲ್ಲಾ ವಿಷಯಗಳಿಗೆ ಸಿದ್ಧರಾಗವುದು ಕಷ್ಟ. ಏಳು ವಿಷಯಗಳಿಗೆ ಒಬ್ಬರೇ ಉಪನ್ಯಾಸಕರಿದ್ದಾರೆ. ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳಿಗೆ ಹೆಚ್ಚಿನ ಹೊರೆಯಾಗುತ್ತದೆ
ರಮ್ಯ ಬಿಸಿಎ ವಿದ್ಯಾರ್ಥಿ
ಪಾಠಗಳೇ ನಡೆದಿಲ್ಲ ಪರೀಕ್ಷೆಗೆ ಸುತ್ತೋಲೆ ಹೊರಡಿಸಿದರೆ ವಿದ್ಯಾರ್ಥಿಗಳಿಗೆ ಒತ್ತಡ ಹೇರಿದಂತಾಗುತ್ತದೆ. ಯುದ್ಧ ಕಾಲದಲ್ಲಿ ಶಸ್ತ್ರಾಭ್ಯಾಸ ಮಾಡಿದಂತೆ ಗೋಪಾಲರಾಜು ಕಾಲೇಜಿನ ವಿದ್ಯಾರ್ಥಿಗಳ ಸ್ಥಿತಿಯಾಗಿದೆ. ಹಾಗಾಗಿ ಪರೀಕ್ಷೆಯನ್ನು ಮುಂದೂಡಬೇಕು
ದರ್ಶನ್‌ ಬಿಬಿಎ ವಿದ್ಯಾರ್ಥಿ
ಉಪನ್ಯಾಸಕರ ಕೊರತೆ ಬಿಬಿಎ ಮತ್ತು ಬಿಸಿಎ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯಕ್ಕೆ ಅಡ್ಡಿಯಾಗಿದೆ. ವಿಶ್ವವಿದ್ಯಾಲಯ ಮತ್ತು ಉನ್ನತ ಶಿಕ್ಷಣ ಇಲಾಖೆ ತ್ವರಿತವಾಗಿ ಕ್ರಮ ವಹಿಸಬೇಕು.
ತ್ರಿವೇಣಿ ಗಾಂಧಿ.ಸಿ ವಿದ್ಯಾರ್ಥಿನಿ
ಬೆಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯಲ್ಲಿ ಹಲವು ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆ ನೀಗಿಸುವಂತೆ ಅ.8ರಂದು ಉನ್ನತ ಶಿಕ್ಷಣ ಇಲಾಖೆಯ ಆಯುಕ್ತರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಗುವುದು
ಬಿ.ಶಿವಣ್ಣ ಸಿಂಡಿಕೇಟ್‌ ಮಾಜಿ ಸದಸ್ಯ ಬೆಂಗಳೂರು ವಿಶ್ವವಿದ್ಯಾಲಯದ
ವಿಶ್ವವಿದ್ಯಾಲಯ ವ್ಯಾಪ್ತಿಯ ಸರ್ಕಾರಿ ಶಾಲೆಗಳಲ್ಲಿ ಉಪನ್ಯಾಸಕರ ಕೊರತೆ ಪರಿಹಾರಕ್ಕೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಪರೀಕ್ಷೆಗಳನ್ನು ನಡೆಸಲಾಗುವುದು
ಡಾ.ಜಯಕರ್‌ ಕುಲಪತಿ ಬೆಂಗಳೂರು ವಿಶ್ವವಿದ್ಯಾಲಯ

ಏಳು ವಿಷಯಕ್ಕೆ ಒಬ್ಬರೇ ಉಪನ್ಯಾಸಕರು

ಆನೇಕಲ್‌: ತಾಲ್ಲೂಕಿನ ಏಕೈಕ ಸರ್ಕಾರಿ ಪದವಿ ಕಾಲೇಜು ಆಗಿರುವ ಗೋಪಾಲರಾಜು ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಬಿಎ ಮತ್ತು ಬಿಸಿಎ ವಿಭಾಗದಲ್ಲೂ ಇದೇ ಸಮಸ್ಯೆ. ಈ ಕಾಲೇಜಿನಲ್ಲಿ ಓದುತ್ತಿರುವವರು ಬಡವರ ಮಕ್ಕಳು. ಕಾಯಂ ಉಪನ್ಯಾಸಕರು ಮತ್ತು ಅತಿಥಿ ಉಪನ್ಯಾಸಕರು ಇಲ್ಲದೆ ವಿದ್ಯಾರ್ಥಿಗಳು ಪರೀಕ್ಷೆಗೆ ಸಿದ್ಧತೆ ನಡೆಸಲು ಕಷ್ಟವಾಗಿದೆ.  ಗೋಪಾಲರಾಜು ಪ್ರಥಮ ದರ್ಜೆ ಕಾಲೇಜಿನಲ್ಲಿ ಬಿಸಿಎ ಎರಡನೇ ವರ್ಷದಲ್ಲಿ 21 ಮಂದಿ ವಿದ್ಯಾರ್ಥಿಗಳಿದ್ದಾರೆ.  ಮೊದಲ ವರ್ಷದಲ್ಲಿ 10 ವಿದ್ಯಾರ್ಥಿಗಳಿದ್ದಾರೆ. ಬಿಸಿಎ ವಿಭಾಗದಲ್ಲಿ ಒಟ್ಟು ಒಂಭತ್ತು ವಿಷಯಗಳಿವೆ. ಈ ಪೈಕಿ ಎರಡು ಭಾಷಾ ವಿಷಯ ಇದೆ. ಹೊರತುಪಡಿಸಿ ಎಲ್ಲಾ ಏಳು ವಿಷಯಗಳಿಗೂ ಒಬ್ಬರೇ ಉಪನ್ಯಾಸಕರು ಪಾಠ ಮಾಡುತ್ತಿದ್ದಾರೆ. ಐದು ಬೋಧನಾ ತರಗತಿ ಹಾಗೂ ಎರಡು ಪ್ರಾಯೋಗಿಕ ತರಗತಿಯನ್ನು ಒಬ್ಬರೇ ಪಾಠ ಮಾಡುತ್ತಿದ್ದಾರೆ. ಬಿಬಿಎ ವಿಭಾಗದಲ್ಲಿ ಮೊದಲನೇ ಸೆಮಿಸ್ಟರ್‌ನಲ್ಲಿ 25 ಮೂರನೇ ಸೆಮಿಸ್ಟರ್‌ನಲ್ಲಿ 20 ಮತ್ತು 5ನೇ ಸೆಮಿಸ್ಟರ್‌ನಲ್ಲಿ 24 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಬಿಬಿಎ ಮೂರನೇ ವರ್ಷದಲ್ಲಿ ಒಟ್ಟು 7 ವಿಷಯಗಳಿದ್ದು ಈ ಪೈಕಿ ಮೂವರು ಅತಿಥಿ ಉಪನ್ಯಾಸಕರು ಪಾಠ ಮಾಡುತ್ತಿದ್ದಾರೆ. ತರಗತಿಗಳು ಸರಿಯಾಗಿ ನಡೆದಿಲ್ಲ. ಈಗ ಹೇಗೆ ಪರೀಕ್ಷೆಗೆ ಸಜ್ಜಾಗುವುದು? ಪರೀಕ್ಷೆ ಮುಂದೂಡಬೇಕೆಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.