
ಆನೇಕಲ್: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಪರಿಸರ ಸೂಕ್ಷ್ಮ ವಲಯದ ವ್ಯಾಪ್ತಿ ಅವೈಜ್ಞಾನಿಕವಾಗಿ ವಿಸ್ತರಣೆ ಮಾಡಲಾಗುತ್ತಿದೆ. ಇದರಿಂದ ಬನ್ನೇರುಘಟ್ಟ ಸುತ್ತಮುತ್ತಲಿನ ಗ್ರಾಮ ಪಂಚಾಯಿತಿಗಳಲ್ಲಿ ವಾಸಿಸುತ್ತಿರುವವರಿಗೆ ಸಮಸ್ಯೆ ಆಗುತ್ತದೆ ಎಂದು ಬನ್ನೇರುಘಟ್ಟ ಉದ್ಯಾನ ಸಮೀಪ ಸ್ಥಳೀಯ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಕಾಡಂಚಿನ ಗ್ರಾಮಗಳಾದ ಹಕ್ಕಿಪಿಕ್ಕಿ ಕಾಲೊನಿ ಸೇರಿದಂತೆ ಬನ್ನೇರುಘಟ್ಟ, ರಾಗಿಹಳ್ಳಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ಗ್ರಾಮಸ್ಥರು ಬನ್ನೇರುಘಟ್ಟ ವೃತ್ತದಲ್ಲಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಬನ್ನೇರುಘಟ್ಟದಲ್ಲಿ ಜಮಾವಣೆಗೊಂಡ ವಿವಿಧ ಗ್ರಾಮಗಳ ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇತ್ತೀಚಿಗೆ ಸುಪ್ರೀಂಕೋರ್ಟ್ ನಿಯೋಜಿತ ಕೇಂದ್ರ ಉನ್ನತಾಧಿಕಾರ ಸಮಿತಿ ಸದಸ್ಯ ಚಂದ್ರಪ್ರಕಾಶ್ ಗೋಯಲ್ ಅವರು ಪರಿಸರ ಸೂಕ್ಷ್ಮ ವಲಯಕ್ಕೆ ಸಂಬಂಧಿಸಿದಂತೆ ಬನ್ನೇರುಘಟ್ಟಕ್ಕೆ ಭೇಟಿ ನೀಡಿದ್ದಾಗ ಅವರಿಗೆ ಅವೈಜ್ಞಾನಿಕ ಮಾಹಿತಿ ನೀಡಲಾಗಿದೆ. ಈ ಅರಣ್ಯ ಪ್ರದೇಶದಲ್ಲಿರುವ ಆನೆಗಳು ಮತ್ತು ಪ್ರಾಣಿ ಮತ್ತು ಮನುಷ್ಯನ ಸಂಘರ್ಷಗಳ ದತ್ತಾಂಶವನ್ನು ಸರಿಯಾಗಿ ನೀಡಿಲ್ಲ. ಉನ್ನತ ಮಟ್ಟದ ಅಧಿಕಾರಿಗಳು ಬಂದಾಗ ರೈತರು ಮತ್ತು ಸ್ಥಳೀಯ ಗ್ರಾಮ ಪಂಚಾಯಿತಿಗೆ ಅರಣ್ಯ ಇಲಾಖೆ ಮಾಹಿತಿ ನೀಡಬೇಕು. ಏಕಾಯಕಿ ಯಾರಿಗೂ ಮಾಹಿತಿ ನೀಡದೆ ಅವೈಜ್ಞಾನಿಕವಾಗಿ ದತ್ತಾಂಶಗಳನ್ನು ನೀಡಲಾಗಿದೆ ಎಂದು ಸ್ಥಳೀಯ ಮುಖಂಡ ವಿನೋದ್ ಆರೋಪಿಸಿದರು.
ಅರಣ್ಯ ಇಲಾಖೆಯ ಅಧಿಕಾರಿಗಳು ಪರಿಸರ ಸೂಕ್ಷ್ಮ ವಲಯದ ಬಗ್ಗೆ ಜಂಗಲ್ ಲಾಡ್ಜ್ ಮತ್ತು ನಗರಗಳಲ್ಲಿ ಸಭೆಗಳನ್ನು ನಡೆಸಿ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಇದರಿಂದ ಗ್ರಾಮೀಣ ಜನತೆಗೆ ತೊಂದರೆಯಾಗಲಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ಕ್ಷೇತ್ರ ಭೇಟಿ ಮಾಡಬೇಕು. ಈ ಭಾಗದ ಜನರ ಸಮಸ್ಯೆಯನ್ನು ಉನ್ನತ ಅಧಿಕಾರಿಗಳಿಗೆ ತಿಳಿಸಬೇಕು ಎಂದು ಹೇಳಿದರು.
ಕೇಂದ್ರ ಉನ್ನತಾಧಿಕಾರ ಸಮಿತಿಯು ವಾಸ್ತವಂಶ ಅರಿಯಲು ಕಾಡಂಚಿನ ಗ್ರಾಮಗಳಿಗೆ ಭೇಟಿ ನೀಡಬೇಕು. ಕಾಡಂಚಿನಲ್ಲಿ ವಾಸಿಸುವವರು ಮುಗ್ಧರಾಗಿದ್ದು, ಅರಣ್ಯ ಇಲಾಖೆಯ ನಿರ್ಧಾರಗಳಿಂದ ಅವರ ಬದುಕು ಕಷ್ಟವಾಗುತ್ತದೆ. ಪರಿಸರ ಸೂಕ್ಷ್ಮ ವಲಯ ವಿಸ್ತರಣೆಯಿಂದ ಈ ಭಾಗದಲ್ಲಿ ಮನೆ ಕಟ್ಟುವವರಿಗೆ ಸಾಲ ಸೌಲಭ್ಯ ದೊರೆಯುವುದಿಲ್ಲ. ಕಿರು ಉದ್ಯಮ ನಡೆಸುವವರಿಗೆ ತೊಂದರೆಯಾಗುತ್ತದೆ ಎಂದು ತಿಳಿಸಿದರು.
ಹಾಗಾಗಿ ಈ ಹಿಂದಿನ ನಿಯಮಗಳನ್ನೇ ಅನುಸರಿಸಬೇಕು. ಪರಿಸರ ಸೂಕ್ಷ್ಮ ವಲಯ ವಿಸ್ತರಣೆಯಿಂದ ಭೂಮಿ ಕಳೆದುಕೊಳ್ಳುವವರೆಗೆ ಪುನರ್ವಸತಿ ಸ್ಥಿತಿಯ ಬಗ್ಗೆ ಯಾವುದೇ ಮಾಹಿತಿ ಇಲ್ಲದಿರುವುದು ಸ್ಥಳೀಯ ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ ಎಂದರು.
ಬನ್ನೇರುಘಟ್ಟ ಉದ್ಯಾನದ ಮುಂಭಾಗದಲ್ಲಿ ರೈತರು, ಸ್ಥಳೀಯರು ಪ್ರತಿಭಟನೆಯ ಬಿಸಿ ಪ್ರವಾಸಿಗರಿಗೂ ತಾಕೀತು. ಉದ್ಯಾನ ಪ್ರವೇಶ ಹಾಗೂ ವಾಹನ ನಿಲುಗಡೆಗೆ ತೊಂದರೆಯಾಗಿತ್ತು. ವಾಹನಗಳ ಉದ್ದನೆಯ ಸಾಲು ಬನ್ನೇರುಘಟ್ಟ ಉದ್ಯಾನದ ಮುಂಭಾಗದಲ್ಲಿ ಕಂಡು ಬಂದಿತು. ಇನ್‌ಸ್ಪೆಕ್ಟರ್‌ಗಳಾದ ಮಂಜುನಾಥ್, ಕೃಷ್ಣಕುಮಾರ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಪ್ರವಾಸಿಗರು ಪ್ರತಿಭಟನೆಯ ನಡುವೆಯೂ ಉದ್ಯಾನದ ವೀಕ್ಷಣೆಗೆ ಆಗಮಿಸಿದ್ದರು.
ರೈತರಿಗೆ ತೊಂದರೆ ಆಗದಂತೆ ಕ್ರಮ
ಪ್ರತಿಭಟನಕಾರರು ಪ್ರತಿಭಟನೆ ನಡೆಸಿ ಡಿಸಿಎಫ್ ಕಾಜಲ್ ಪಾಟೀಲ್ ಮತ್ತು ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕ ಸೂರ್ಯಸೇನ್ ಅವರಿಗೆ ಮನವಿ ಪತ್ರ ಸಲ್ಲಿಸಿದರು. ಸುಪ್ರೀಂ ಕೋರ್ಟ್‌ನ ಅಂತಿಮ ತೀರ್ಪು ಇನ್ನೂ ಬಂದಿಲ್ಲ. ಸುಪ್ರೀಂ ಕೋರ್ಟ್ ಮತ್ತು ಸರ್ಕಾರದ ಆದೇಶದಂತೆ ಕಾರ್ಯನಿರ್ವಹಿಸಲಾಗುವುದು. ರೈತರಿಗೆ ಬಡವರಿಗೆ ಸ್ಥಳೀಯರಿಗೆ ಸಮಸ್ಯೆಯಾಗದಂತೆ ಕ್ರಮ ವಹಿಸಲಾಗುವುದು ಎಂದು ಕಾಜಲ್ ಪಾಟೀಲ್ ತಿಳಿಸಿದರು.
ಪರ್ಯಾಯ ರಸ್ತೆ ನಿರ್ಮಿಸದಿದ್ದರೆ ಉದ್ಯಾನಕ್ಕೆ ಬೀಗ
ಬನ್ನೇರುಘಟ್ಟ ಉದ್ಯಾನಕ್ಕೆ ಪ್ರತಿನಿತ್ಯ ಸಾವಿರಾರು ಮಂದಿ ಭೇಟಿ ನೀಡುತ್ತಾರೆ. ಬನ್ನೇರುಘಟ್ಟ ರಸ್ತೆಯು ಕಿರಿದಾಗಿರುವುದರಿಂದ ಈ ರಸ್ತೆಯಲ್ಲಿ ಸಂಚರಿಸುವುದೇ ಕಷ್ಟವಾಗಿದೆ. ಹಾಗಾಗಿ ಬನ್ನೇರುಘಟ್ಟ ಉದ್ಯಾನವು ಪರ್ಯಾಯ ಮಾರ್ಗಗಳನ್ನು ಅಭಿವೃದ್ಧಿಪಡಿಸಬೇಕು. ಬನ್ನೇರುಘಟ್ಟ ಉದ್ಯಾನಕ್ಕೆ ಬೇರೆ ಮಾರ್ಗಗಳನ್ನು ಅಭಿವೃದ್ಧಿಪಡಿಸದಿದ್ದರೆ ಫೆಬ್ರವರಿ ಒಂದರಿಂದ ಉದ್ಯಾನಕ್ಕೆ ಬೀಗ ಹಾಕಲಾಗುವುದು ಎಂದು ಬನ್ನೇರುಘಟ್ಟ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಮಂಜುನಾಥ್ ಎಚ್ಚರಿಕೆ ನೀಡಿದರು. ಸ್ಥಳಾಂತರಕ್ಕೆ ಒತ್ತಾಯ ಬನ್ನೇರುಘಟ್ಟ ಉದ್ಯಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಆಗಮಿಸುತ್ತಾರೆ. ಇದರಿಂದಾಗಿ ಈ ರಸ್ತೆಯಲ್ಲಿ ಸಂಚರಿಸುವುದೇ ಕಷ್ಟವಾಗಿದೆ. ಇತ್ತೀಚಿಗೆ ರಸ್ತೆಯಲ್ಲಿ ಗರ್ಭೀಣಿಯೊಬ್ಬರಿಗೆ ಡೆಲಿವರಿಯಾಗಿದೆ. ಪರ್ಯಾಯ ರಸ್ತೆಗಳಿದ್ದರೂ ಅದನ್ನು ಬಳಸದಿರುವುದರಿಂದ ರಸ್ತೆ ದಟ್ಟಣೆ ಕೋಳಿ ಫಾರಂ ಎಎಂಸಿ ಕಾಲೇಜುವರೆಗೂ ಇರುತ್ತದೆ.
ರಸ್ತೆ ದಟ್ಟಣೆ ಸಮಸ್ಯೆ ಈಗೇ ಮುಂದುವರೆದರೆ ಉದ್ಯಾನವನ್ನು ಬೇರೆಡೆಗೆ ಸ್ಥಳಾಂತರಿಸಿ ಎಂದು ಸ್ಥಳೀಯ ನಿವಾಸಿ ಅಚ್ಯುತರಾಜು ಒತ್ತಾಯಿಸಿದ್ದಾರೆ. ಸೂಕ್ಷ್ಮವಲಯದಲ್ಲಿ ಸರ್ಕಾರದಿಂದಲೇ ನಗರ ನಿರ್ಮಾಣ ಪರಿಸರ ಸೂಕ್ಷ್ಮ ವಲಯವನ್ನು ಅವೈಜ್ಞಾನಿಕ ವಿಸ್ತರಣೆ ಖಂಡನೀಯ. ಇದರಿಂದ ಈ ಭಾಗದ 20ಸಾವಿರ ಕುಟುಂಬಗಳಿಗೆ ತೊಂದರೆಯಾಗಲಿದೆ. ಸರ್ಕಾರವೇ ಬನ್ನೇರುಘಟ್ಟ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಂತೆ ಇರುವ ಇಂಡ್ಲವಾಡಿಯಲ್ಲಿ ಸೂರ್ಯಸಿಟಿ ನಿರ್ಮಿಸುತ್ತಿದೆ. ಈ ವ್ಯಾಪ್ತಿಯು ಪರಿಸರ ಸೂಕ್ಷ್ಮ ವಲಯವನ್ನು ಹೆಚ್ಚಿಸುವುದರಿಂದ ಸೂರ್ಯಸಿಟಿ ನಿರ್ಮಾಣವೇ ಅಕ್ರಮವಾಗುತ್ತದೆ. ಸಹಸ್ರಾರು ಮಂದಿ ಈ ಭಾಗದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಹಾಗಾಗಿ ಅರಣ್ಯ ಇಲಾಖೆಯ ಸಿಬ್ಬಂದಿ ಸ್ವಯಂ ಸೇವಾ ಸಂಸ್ಥೆಗಳ ಮಾತು ಕೇಳದೇ ರೈತರ ಹಿತ ಕಾಪಾಡಬೇಕು –ಆರ್.ಡಿ.ರಾಜಣ್ಣ ರಾಗಿಹಳ್ಳಿ ಗ್ರಾಮದ ಮುಖಂಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.